ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಹತರಾದ ನಕ್ಸಲರು ಕರ್ನಾಟಕದವರಲ್ಲ

ಪಾಲಕ್ಕಾಡ್‌ನಲ್ಲಿ ನಡೆದ ನಕ್ಸಲ್ ಎನ್‌ಕೌಂಟರ್‌
Last Updated 29 ಅಕ್ಟೋಬರ್ 2019, 14:18 IST
ಅಕ್ಷರ ಗಾತ್ರ

ಮಂಗಳೂರು: ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಅಗಲಿ ಅರಣ್ಯ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ನಕ್ಸಲರು ಮತ್ತು ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತರಾ‌ದವರಲ್ಲಿ ಕರ್ನಾಟಕದ ವ್ಯಕ್ತಿಗಳಿಲ್ಲ ಎಂಬುದು ಖಚಿತವಾಗಿದೆ.

ಅಗಲಿ ಅರಣ್ಯ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಥಂಡರ್‌ ಬೋಲ್ಟ್‌ ವಿಶೇಷ ಪಡೆಯ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಘಟನೆಯಲ್ಲಿ ಮೂವರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಕೇರಳದ ಕಾರ್ತಿಕ್‌, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ಸುರೇಶ್‌ ಮತ್ತು ಶೃಂಗೇರಿ ತಾಲ್ಲೂಕಿನ ಬೆಳಗೋಡು ಕೊಡಿಗೆಯ ಶ್ರೀಮತಿ ಎಂದು ಮೊದಲು ವದಂತಿ ಹಬ್ಬಿತ್ತು.

ಕಾರ್ಕಳದ ನಕ್ಸಲ್‌ ನಿಗ್ರಹ ಪಡೆಯ ಕೇಂದ್ರ ಕಚೇರಿಯಿಂದ ಹಲವು ಅಧಿಕಾರಿಗಳ ತಂಡ ಸೋಮವಾರವೇ ಪಾಲಕ್ಕಾಡ್‌ನತ್ತ ಹೊರಟಿತ್ತು. ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿರುವವರ ಸಮಗ್ರ ಮಾಹಿತಿಯನ್ನು ಈ ತಂಡ ತೆಗೆದುಕೊಂಡು ಹೋಗಿತ್ತು. ಮಂಗಳವಾರ ನಕ್ಸಲ್‌ ನಿಗ್ರಹ ಪಡೆಯ ಅಧಿಕಾರಿಗಳು ಎನ್‌ಕೌಂಟರ್‌ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸತ್ತವರಲ್ಲಿ ಒಬ್ಬರೂ ಕರ್ನಾಟಕದವರಿಲ್ಲ ಎಂಬುದು ಖಚಿತವಾಗಿದೆ.

ಘಟನಾ ಸ್ಥಳದಲ್ಲಿ ಸೋಮವಾರ ಮೂರು ಮೃತದೇಹಗಳು ಪತ್ತೆಯಾಗಿದ್ದವು. ಮಂಗಳವಾರದ ಶೋಧ ಕಾರ್ಯಾಚರಣೆ ವೇಳೆ ಇನ್ನೂ ಒಬ್ಬ ನಕ್ಸಲೀಯನ ಶವ ದೊರೆತಿದೆ. ಮೃತರನ್ನು ತಮಿಳುನಾಡಿನ ನಕ್ಸಲ್‌ ಗುಂಪಿನ ನಾಯಕರಲ್ಲಿ ಒಬ್ಬನಾದ ಮಣಿವಾಸಗಂ ಹಾಗೂ ತಮಿಳುನಾಡಿನವರೇ ಆದ ಕಾರ್ತಿಕ್‌, ಅರವಿಂದ ಮತ್ತು ರೇಮಾ ಎಂದು ಗುರುತಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಕ್ಸಲ್‌ ನಿಗ್ರಹ ಪಡೆಯ ಎಸ್‌ಪಿ ಆರ್‌.ಚೇತನ್‌, ‘ಸತ್ತವರಲ್ಲಿ ಇಬ್ಬರು ಚಿಕ್ಕಮಗಳೂರು ಜಿಲ್ಲೆಯವರು ಎಂಬ ಮಾಹಿತಿಯನ್ನು ಕೇರಳ ಪೊಲೀಸರು ಮೊದಲು ನೀಡಿದ್ದರು. ಆದರೆ, ಸತ್ತವರೆಲ್ಲರೂ ತಮಿಳುನಾಡಿನವರು ಎಂಬುದಾಗಿ ಈಗ ಖಚಿತಪಡಿಸಿದ್ದಾರೆ. ಮೃತ ವ್ಯಕ್ತಿಗಳ ಕುಟುಂಬದವರು ಬಂದು ಗುರುತು ಪತ್ತೆ ಮಾಡಿದ ಬಳಿಕವೇ ಅಂತಿಮ ವರದಿ ಲಭ್ಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT