ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗರೇಟ್‌ ಆಳ್ವ ಮನದ ಮಾತು: ಒಂದು ಭಾಷಣ ಬದುಕು ಬದಲಿಸಿತು

ಮಾಜಿ ರಾಜ್ಯಪಾಲೆ ಮಾರ್ಗರೇಟ್‌ ಆಳ್ವ ಮನದ ಮಾತು
Last Updated 11 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮಂಗಳೂರು: ‘ನಾನು ರಾಜಕಾರಣಿ ಆಗಬೇಕೆಂದು ಯಾವತ್ತೂ ಕನಸು ಕಂಡಿರಲಿಲ್ಲ. ಆದರೆ, ಕಾಲೇಜಿನಲ್ಲಿ ಮಾಡಿದ ಒಂದು ಭಾಷಣದಿಂದ ಬದುಕಿನ ದಿಕ್ಕೇ ಬದಲಾಯಿತು’ ಎಂದು ಉತ್ತರಾಖಂಡದ ಮಾಜಿ ರಾಜ್ಯಪಾಲೆ ಮಾರ್ಗರೇಟ್‌ ಆಳ್ವ ಹೇಳಿದರು.

ನಗರದ ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂವಾದ ನಡೆಸುವಾಗ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಅವರು, ಈ ವಿಷಯ ತಿಳಿಸಿದರು.

ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ರೋಸ್‌ ವೀರ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಮಾರ್ಗರೇಟ್‌, ‘ಎಲ್ಲ ತಾಯಂದಿರಿಗೂ ಗಂಡು ಮಕ್ಕಳ ಮೇಲೆ ಪ್ರೀತಿ ಜಾಸ್ತಿ. ಹುಟ್ಟುವ ಮಕ್ಕಳು ಗಂಡೇ ಆಗಿರಲಿ ಎಂದು ಬಯಸುತ್ತಾರೆ. ನನ್ನ ತಾಯಿಗೆ ನಾನು ಮೂರನೇ ಹೆಣ್ಣು ಮಗು. ನಾನು ಹುಟ್ಟಿದಾಗ ತಾಯಿ ತೀವ್ರವಾಗಿ ಬೇಸರ ಮಾಡಿಕೊಂಡಿದ್ದರಂತೆ. ಆಗ ನನ್ನ ಅಜ್ಜ ತಾಯಿಯನ್ನು ಸಮಾಧಾನಪಡಿಸಿದ್ದರಂತೆ. ಅಜ್ಜನ ಜನ್ಮದಿನದಂದೇ ನಾನು ಹುಟ್ಟಿದ್ದೆ. ಅವರಂತೆ ನಾನೂ ವಕೀಲೆ ಆಗುತ್ತೇನೆ ಎಂದು ಅಜ್ಜ ಆಸೆಪಟ್ಟಿದ್ದರಂತೆ’ ಎಂದರು.

‘ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ನಾನು ಹೆಚ್ಚು ಮಾತನಾಡುತ್ತಿದ್ದೆ. ಇದೇ ಕಾರಣಕ್ಕಾಗಿ ಉಪನ್ಯಾಸಕಿಯೊಬ್ಬರು ನನ್ನ ಹೆಸರನ್ನು ಭಾಷಣ ಸ್ಪರ್ಧೆಯೊಂದಕ್ಕೆ ಸೇರಿಸಿಬಿಟ್ಟರು. ಚೀಟಿ ಎತ್ತಿ ಅದರಲ್ಲಿದ್ದ ವಿಷಯದ ಬಗ್ಗೆ ಮಾತನಾಡಬೇಕಿತ್ತು. ನನಗೆ ‘ಸಹ ಶಿಕ್ಷಣ ಪದ್ಧತಿ’ಯ ವಿಷಯ ಸಿಕ್ಕಿತ್ತು. ನನ್ನ ಭಾಷಣ ಆಲಿಸಿದ ಉಪನ್ಯಾಸಕರು ಕಾಲೇಜಿನ ಚರ್ಚಾ ಸ್ಪರ್ಧೆಯ ತಂಡಕ್ಕೆ ಆಯ್ಕೆ ಮಾಡಿದ್ದರು. ಆ ದಿನದಿಂದಲೇ ನನ್ನೊಳಗಿನ ನಾಯಕತ್ವ ಗುಣ ಅರಿತುಕೊಂಡು ಮುಂದಕ್ಕೆ ಸಾಗಿದೆ’ ಎಂದು ನೆನಪಿಸಿಕೊಂಡರು.

‘ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹಾಜರಿದ್ದ ಸಭೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಮಾರ್ಗದರ್ಶನದಲ್ಲಿ ಏಳು ನಿಮಿಷಗಳ ಅವಧಿಯಲ್ಲಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದ್ದೆ. ಆ ಘಟನೆ ನನ್ನನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯಿಸಿತು. ಆ ನಂತರದಲ್ಲಿ ರಾಜ್ಯಸಭಾ ಸದಸ್ಯರ ಆಯ್ಕೆಪಟ್ಟಿಯಲ್ಲಿ ಅಚ್ಚರಿಯಂತೆ ನನ್ನ ಹೆಸರು ಇತ್ತು’ ಎಂದರು.

‘ಒಬ್ಬ ರಾಜಕಾರಣಿ ಮತ್ತು ನಾಯಕಿಯಾಗಿ ಸಿದ್ಧಿ ಸಮುದಾಯಕ್ಕೆ ಪರಿಶಿಷ್ಟ ಪಂಗಡಗಳ ಮಾನ್ಯತೆ ದೊರಕಿಸಿದ್ದು ನನಗೆ ಹೆಚ್ಚು ಸಂತೋಷ ನೀಡಿದೆ. ಆ ಉದ್ದೇಶ ಸಾಧನೆಗೆ 25 ವರ್ಷಗಳ ಕಾಲ ನಿರಂತರವಾಗಿ ಹೋರಾಟ ನಡೆಸಿದೆ. ಅಂತಿಮವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸಿದ್ಧಿ ಜನಾಂಗವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತು’ ಎಂದು ಹೇಳಿದರು.

ಗಗನಸಖಿಯರಿಗೆ ಆಗುತ್ತಿದ್ದ ತಾರತಮ್ಯದ ವಿರುದ್ಧದ ಹೋರಾಟ ತಮ್ಮ ಜೀವನದ ಮತ್ತೊಂದು ಯಶಸ್ವಿ ಕೆಲಸ. 1980ರ ದಶಕದಲ್ಲಿ ವಿಮಾನದಲ್ಲಿನ ಮಹಿಳಾ ಸಿಬ್ಬಂದಿಯನ್ನು ಕೀಳಾಗಿ ನೋಡಲಾಗುತ್ತಿತ್ತು. ಪತಿಯೊಂದಿಗೆ ಸೇರಿ ತಾವು ನಡೆಸಿದ ಕಾನೂನು ಹೋರಾಟದಿಂದ ಅದು ಕೊನೆಗೊಂಡಿತು ಎಂದರು.

‘ನಾನು ಮತ್ತು ನನ್ನ ಪತಿ ಈ ವಿಚಾರದಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆವು. ನಾಗರಿಕ ವಿಮಾನಯಾನ ಇಲಾಖೆಯಲ್ಲಿ ಲಿಂಗ ತಾರತಮ್ಯಕ್ಕೆ ಅವಕಾಶ ಮಾಡಿಕೊಡುತ್ತಿದ್ದ ನಿಯಮಗಳನ್ನು ರದ್ದುಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT