ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ ಏರುಪೇರು– ಪಾಲಿಕೆಯಲ್ಲಿ ಕಾವೇರಿದ ಚರ್ಚೆ

ನನ್ನ ವಾರ್ಡ್‌ನಲ್ಲೂ ನೀರಿಲ್ಲ– ಮೇಯರ್‌ ಅಳಲು * ಜಲಸಿರಿ ಕಾಮಗಾರಿ ಬಳಿಕ ಸಮಸ್ಯೆ?
Last Updated 30 ನವೆಂಬರ್ 2022, 15:34 IST
ಅಕ್ಷರ ಗಾತ್ರ

ಮಂಗಳೂರು: ನಗರದ ಅನೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯಲ್ಲಿ ಎರಡು ವಾರಗಳಿಂದ ಏರುಪೇರಾಗುತ್ತಿರುವ ಕುರಿತು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬುಧವಾರ ಕಾವೇರಿದ ಚರ್ಚೆ ನಡೆಯಿತು. ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದರು.

‘ನನ್ನ ವಾರ್ಡ್‌ನಲ್ಲೂ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ’ ಎಂದು ಮೇಯರ್‌ ಜಯಾನಂದ ಅಂಚನ್‌ ಅವರೇ ಅಳಲು ತೋಡಿಕೊಂಡರು.

ನೀರು ಪೂರೈಕೆ ವ್ಯತ್ಯಯದ ಬಗ್ಗೆ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ನವೀನ್ ಡಿಸೋಜ, ‘ಜಲಸಿರಿ ಯೋಜನೆಯ ಕಾಮಗಾರಿಗಳು ಅನುಷ್ಠಾನದ ಬಳಿಕ ಅನೇಕ ಕಡೆ ಕೊಳಾಯಿಗಳಲ್ಲಿ ನೀರಿನ ಒತ್ತಡ ಕುಸಿದಿದೆ’ ಎಂದರು. ಕಾಂಗ್ರೆಸ್‌ನ ಶಶಿಧರ ಹೆಗ್ಡೆ, ಆಡಳಿತ ಪಕ್ಷದ ಸಂಗೀತ ಆರ್. ನಾಯಕ್, ಜಗದೀಶ ಶೆಟ್ಟಿ ಅವರೂ ದನಿಗೂಡಿಸಿದರು.

‘ಜಲ ಸಿರಿ ಯೋಜನೆಯ ವಿಸ್ತೃತ ಯೊಜನಾ ವರದಿಯಲ್ಲಿ ನೀರಿನ ಮೂಲದ ಬಗ್ಗೆ ಉಲ್ಲೇಖವೇ ಇಲ್ಲ’ ಎಂದು ಕಾಂಗ್ರೆಸ್‌ನ ಎ.ಸಿ.ವಿನಯರಾಜ್ ಗಮನಸೆಳೆದರು.

‘ವಿದ್ಯುತ್‌ ಪೂರೈಕೆ ವ್ಯತ್ಯಯದಿಂದ ಸಮಸ್ಯೆ ಆಗುತ್ತಿದೆ’ ಎಂದು ಆಯುಕ್ತ ಅಕ್ಷಯ್‌ ಶ್ರೀಧರ್‌ ಸಮಜಾಯಿಷಿ ನೀಡಲು ಯತ್ನಿಸಿದರು. ಇದಕ್ಕೊಪ್ಪದ ಸದಸ್ಯರು, ‘ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಪಟ್ಟು ಹಿಡಿದರು.

ಮೆಸ್ಕಾಂನ ಸೂಪರಿಂಟೆಂಡೆಂಟ್‌ ಎಂಜಿನಿಯರ್‌, ‘ನವೆಂಬರ್‌ 14, 15, 16, 22, 27ರಂದು ಮಿಂಚಿನಿಂದ ಉಪಕರಣಗಳಿಗೆ ಹಾನಿಯಾಗಿದ್ದರಿಂದ ವಿದ್ಯುತ್‌ ಪೂರೈಕೆ ವ್ಯತ್ಯಯ ಉಂಟಾಗಿ ಸಮಸ್ಯೆ ಆಗಿದೆ. ಅದನ್ನು ದುರಸ್ತಿಪಡಿಸಿದ್ದೇವೆ. ಕುಡಿಯುವ ನೀರು ಪೂರೈಕೆಗೆ ನಿರಂತರ ವಿದ್ಯುತ್‌ ಒದಗಿಸಲು ಕ್ರಮಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಬಂಟ್ವಾಳದಿಂದ ತುಂಬೆಗೆ ನೆಲದಡಿಯಲ್ಲಿ ವಿದ್ಯುತ್‌ ಕೇಬಲ್ ಅಳವಡಿಸುವುದಕ್ಕೆ ಸಿದ್ಧತೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನೀರು ಪಂಪಿಂಗ್‌ ಕೇಂದ್ರಗಳಲ್ಲಿ ಜನರೇಟರ್‌ ಅಳವಡಿಸುವ ಸಲಹೆಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ಇದು ಕಾರ್ಯಸಾಧುವಲ್ಲ. ಇದಕ್ಕೆ ದುಬಾರಿ ಹೂಡಿಕೆ ಮಾಡಬೇಕಾಗುತ್ತದೆ. ಜನರೇಟರ್‌ಗಳ ನಿರ್ವಹಣೆಯೂ ಕಷ್ಟ’ ಎಂದರು.

ಟ್ಯಾಂಕರ್‌ನಲ್ಲಿ ನೀರು ಪೂರೈಸುವ ವ್ಯವಸ್ಥಯೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಡಳಿತ ಪಕ್ಷದ ಗಾಯತ್ರಿ ಹಾಗೂ ಕಾಂಗ್ರೆಸ್‌ನ ಅನಿಲ್‌ ಕುಮಾರ್‌ ದೂರಿದರು.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮೆಸ್ಕಾಂ ಅಧಿಕಾರಿಗಳನ್ನು ಕರೆಸಿ ಗುರುವಾರ ಸಭೆ ನಡೆಸುವುದಾಗಿ ಮೇಯರ್‌ ಪ್ರಕಟಿಸಿದರು.

ಎಲ್‌ಇಡಿ ದೀಪ– ಗುತ್ತಿಗೆ ರದ್ದು: ಆಕ್ಷೇಪ

ನಗರದಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸುವ ಗುತ್ತಿಗೆ ರದ್ದುಪಡಿಸಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ಸದಸ್ಯರುಪಕ್ಷಭೇದ ಮರೆತು ಆಕ್ಷೇಪ ವ್ಯಕ್ತಪಡಿಸಿದರು.

‘ಗುತ್ತಿಗೆ ಕಂಪನಿ ಈಗಾಗಲೇ ಶೇ 20ರಷ್ಟು ಎಲ್‌ಇಡಿ ದೀಪಗಳನ್ನು ಅಳವಡಿಸಿದ್ದು, ಅವುಗಳ ನಿರ್ವಹಣೆ ಮಾಡುವವರು ಯಾರು. ಈ ಹಿಂದೆ ಟೆಂಡರ್‌ ಕರೆದಾಗ ಯಾರೂ ಆಸಕ್ತಿ ತೋರಿಸಿರಲಿಲ್ಲ. ಈಗ ಟೆಂಡರ್‌ ರದ್ದುಪಡಿಸಿ ಮರು ಟೆಂಡರ್‌ ಕರೆದಾಗಲೂ ಯಾರೂ ಬಾಗವಹಿಸದಿದ್ದರೆ ಮತ್ತೆ ಸಮಸ್ಯೆ ಆಗುವುದಿಲ್ಲವೇ’ ಎಂದು ಅನೇಕ ಸದಸ್ಯರು ಅನುಮಾನ ವ್ಯಕ್ತಪಡಿಸಿದರು.

‘ಮರು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಎಂಟು ತಿಂಗಳು ಬೇಕು. ನಡುವೆ ಮೂರು ತಿಂಗಳು ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ವಾರ್ಡ್‌ಗಳಿಗೆ ಬೀದಿ ದೀಪ ಅಳವಡಿಸುವುದು ಯಾವಾಗ’ ಎಂದು ಕಾಂಗ್ರೆಸ್‌ನ ಅಬ್ದುಲ್‌ ರವೂಫ್‌ ಪ್ರಶ್ನಿಸಿದರು.

‘ಗುತ್ತಿಗೆ ಕರಾರಿನ ಪ್ರಕಾರ ನವೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಶೇ 20ರಷ್ಟು ಬೀದಿದೀಪಗಳನ್ನೂ ಸಂಸ್ಥೆ ಅಳವಡಿಸಿಲ್ಲ. ಮೂರು ತಿಂಗಳಿನಿಂದ ಕಾಮಗಾರಿಯಲ್ಲಿ ಭೌತಿಕ ಪ್ರಗತಿಯೇ ಆಗಿಲ್ಲ. ಹಾಗಾಗಿ ಟೆಂಡರ್‌ ರದ್ದುಪಡಿಸುವುದು ಅನಿವಾರ್ಯ’ ಎಂದು ಆಯುಕ್ತರು ಸಮಜಾಯಿಷಿ ನೀಡಿದರು.

ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್ ಹಾಗೂ ಮಾಜಿ ಮೇಯರ್ ಅನಸೂಯ ಮಾಬೆನ್‌ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

–0–

ನಗರದಲ್ಲಿ 168 ಡೆಂಗೆ ಪ್ರಕರಣ

ನಗರದಲ್ಲಿ ಡೆಂಗೆ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಬಗ್ಗೆ ವಿರೋಧ ಪಕ್ಷದ ಸದಸ್ಯರು ಕಳವಳ ವ್ಯಕ್ತಪಡಿಸಿದರು. ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಅವರು ದೂರಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ, ‘ಪಾಲಿಕೆ ವ್ಯಾಪ್ತಿಯಲ್ಲಿ 168 ಡೆಂಗೆ ಪ್ರಕರಣ ಪತ್ತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 65 ಪ್ರಕರಣ ಮಾತ್ರ ಇತ್ತು. ‌ನಗರದಲ್ಲಿ ಮಲೇರಿಯಾದ 136 ಪ್ರಕರಣಗಳಷ್ಟೇ ಪತ್ತೆಯಾಗಿವೆ. ಈ ಹಿಂದೆ ವರ್ಷಕ್ಕೆ 2500ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದವು‘ ಎಂದು ಮಾಹಿತಿ ನೀಡಿದರು.

–0–

ಶಿವಾಜಿ ಪ್ರತಿಮೆ ಸ್ಥಾಪನೆಗೆ ವಿರೋಧ

ಪಂಪ್‌ವೆಲ್‌ ಬಳಿ ಶಿವಾಜಿ ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿದನವೀನ್‌ ಡಿಸೋಜ ‘ಪಂಪ್‍ವೆಲ್‌ನಲ್ಲಿ ಮಹಾವೀರ ವೃತ್ತವಿದೆ. ಸಮೀಪದಲ್ಲೇ ಬ್ರಹ್ಮ ಬೈದರ್ಕಳ ಗರಡಿ ಇದೆ. ಶಿವಾಜಿ ಪ್ರತಿಮೆಯಿಂದ ಈ ತಾಣಗಳಿಗೆ ಧಕ್ಕೆಯಾಗುತ್ತದೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಕರ್ನಾಟಕದ ಬಸ್‌ಗಳಿಗೆ ಹಾನಿ ಉಂಟು ಮಾಡುತ್ತಿರುವಾಗ, ಇಲ್ಲಿ ಶಿವಾಜಿಯ ಪ್ರತಿಮೆ ಸ್ಥಾಪಿಸಲು ಹೊರಟಿರುವುದು ಸರಿಯೇ. ಅಷ್ಟಕ್ಕೂ ಶಿವಾಜಿಗೂ ಮಂಗಳೂರಿಗೂ ಏನು ಸಂಬಂಧ’ ಎಂದು ಪ್ರಶ್ನಿಸಿದರು.
ಶಶಿಧರ ಹೆಗ್ಡೆ, `ಭಾವನೆಗಳ ಮೂಲಕ ಆಡಳಿತ ನಡೆಸುವುದು ಸರಿಯಲ್ಲ. ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ, ಕಯ್ಯಾರ ಕಿಞಣ್ಣ ರೈ ಅವರ ಪ್ರತಿಮೆ ಸ್ಥಾಪಿಸಬಹುದು. ಅಥವಾ ಗರೋಡಿ ದೇವಸ್ಥಾನ ಹತ್ತಿರ ಕೋಟಿ ಚೆನ್ನಯರ ಪ್ರತಿಮೆ ಸ್ಥಾಪಿಸುವುದು ಉತ್ತಮ’ ಎಂದು ಸಲಹೆ ನೀಡಿದರು.

ವಿರೋಧ ಪಕ್ಷದ ಆಕ್ಷೇಪವನ್ನು ದಾಖಲಿಸಿಕೊಂಡು ಶಿವಾಜಿ ಪ್ರತಿಮೆ ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಯಿತು.

–0–

ಕುಕ್ಕರ್‌ ಬಾಂಬ್ ಸ್ಫೋಟಕ್ಕೆ ಖಂಡನೆ

‘ಗರೋಡಿ ಬಳಿ ಇತ್ತೀಚೆಗೆ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಕೃತ್ಯವನ್ನು ಸಭೆಯಲ್ಲಿ ಒಕ್ಕೊರಲಿನಿಂದ ಖಂಡಿಸಬೇಕು’ ಎಂದು ಆಡಳಿತ ಪಕ್ಷದ ಸುಧೀರ್‌ ಶೆಟ್ಟಿ ಹೇಳಿದರು.
ವಿರೋಧ ಪಕ್ಷದ ನಾಯಕ ನವೀನ್ ಡಿಸೋಜ, ‘ಈ ಕೃತ್ಯ ಮಂಗಳೂರಿಗೆ ಕಪ್ಪು ಚುಕ್ಕೆ. ಇಂತಹ ಕೃತ್ಯದ ಜತೆಗೆ ದ್ವೇಷಪೂರಿತ ಭಾಷಣವನ್ನೂ ಖಂಡಿಸಬೇಕು. ಎಲ್ಲರೂ ಸೌಹಾರ್ದದಿಂದ ಬಾಳಬೇಕು’ ಎಂದರು. .
ಕಾಂಗ್ರೆಸ್‌ನ ವಿನಯರಾಜ್, ‘ದೇಶದಲ್ಲಿ ಎಲ್ಲಿಯೂ ಇಂತಹ ಕೃತ್ಯ ನಡೆಯಬಾರದು. ಶಾರೀಕ್‌ನನ್ನು 2020ರಲ್ಲಿ ಗೋಡೆ ಬರಹ ಪ್ರಕರಣದಲ್ಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ಬಂಧಿಸಿದ್ದರು. ಆರೋಪಪಟ್ಟಿ ಸಲ್ಲಿಕೆ ವಿಳಂಬವಾಗಿದ್ದರಿಂದ ಆತನಿಗೆ ಜಾಮೀನು ಸಿಕ್ಕಿದೆ. ಆ ಬಳಿಕವೂ ಆತನ ಚಟುವಟಿಕೆ ಮೇಲೆ ನಿಗಾ ಇಡದಿರುವುದು ಗಂಭೀರ ಲೋಪ. ಜನ ಜಂಗುಳಿ ಇರುವ ಕಡೆ ಬಾಂಬ್ ಸ್ಫೋಟಿಸುತ್ತದ್ದರೆ ಏನಾಗುತ್ತಿತ್ತು’ ಎಂದು ಪ್ರಶ್ನಿಸಿದರು.

–0–

ಸ್ವಾಧೀನಪಡಿಸಿದ ಜಮೀನು ಮರಳಿಸಿ

‘ಪಂಪ್‍ವೆಲ್‍ನಲ್ಲಿ ಸರ್ವಿಸ್ ಬಸ್‌ನಿಲ್ದಾಣ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿ ದಶಕಗಳೇ ಕಳೆದಿವೆ. ಅಲ್ಲಿನ್ನೂ ಕಾಮಗಾರಿ ಆರಂಭವಾಗಿಲ್ಲ. ಬಸ್‌ ನಿಲ್ದಾಣ ನಿರ್ಮಿಸುವುದಿಲ್ಲವಾದರೆ ಜಮೀನು ಸ್ವಾಧೀನ ಪ್ರಕ್ರಿಯೆ ಕೈಬಿಡಿ’ ಎಂದು ಸ್ಥಳೀಯ ಪಾಲಿಕೆ ಸದಸ್ಯ ಕೇಶವ ಮರೋಳಿ ಒತ್ತಾಯಿಸಿದರು.

‘ಜಮೀನು ಬಿಟ್ಟುಕೊಟ್ಟವರಿಗೆ ಪರಿಹಾರ ವಿತರಿಸಿಲ್ಲ ಎಂದು ಭೂಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪಾಲಿಕೆಗೆ ಚರಾಸ್ತಿ ಜಪ್ತಿಗೆನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ’ ಎಂದೂ ಗಮನ ಸೆಳೆದರು.

‘ಆ ಜಾಗದಲ್ಲಿ ಕಸವನ್ನು ರಾಶಿ ಹಾಕಲಾಗುತ್ತಿದೆ. ಅದಕ್ಕಾದರೂ ಕಡಿವಾಣ ಹಾಕಿ. ಅಲ್ಲಿ ಬಸ್‌ ನಿಲ್ದಾಣ ನಿರ್ಮಿಸುವುದಿಲ್ಲವಾದರೆ ಮೈದಾನವನ್ನಾದರೂ ನಿರ್ಮಿಸಿ’ ಎಂದು ಅವರು ಸಲಹೆ ನೀಡಿದರು.

ಆಯುಕ್ತ ಅಕ್ಷಯ್ ಶ್ರೀಧರ್, ‘ಪಂಪ್‌ವೆಲ್‌ ಬಳಿ ಬಸ್‌ನಿಲ್ದಾಣಕ್ಕೆ ಭೂಸ್ವಾಧೀನ ನಡೆಸಲು 2009ರಲ್ಲಿ ಕ್ರಮಕೈಗೊಳ್ಳಲಾಗಿದೆ. ಅಲ್ಲಿ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ₹ 400 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಿಸಲು ಟೆಂಡರ್ ಕರೆದರೂ ಯಾರೂ ಭಾಗವಹಿಸಿಲ್ಲ. ಭೂಸಂತ್ರಸ್ತರಿಗೆ ನೀಡಬೇಕಾದ ಶೇ. 50ರಷ್ಟು ಪರಿಹಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT