ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ದರ, ಘನತ್ಯಾಜ್ಯ ತೆರಿಗೆ ಇಳಿಸಿದ ಮಂಗಳೂರು ಮಹಾನಗರ ಪಾಲಿಕೆ

ಮಹಾನಗರ ಪಾಲಿಕೆ ಮೊದಲ ಸಾಮಾನ್ಯ ಸಭೆಯಲ್ಲಿ ನಿರ್ಧಾರ
Last Updated 14 ಆಗಸ್ಟ್ 2020, 4:20 IST
ಅಕ್ಷರ ಗಾತ್ರ

ಮಂಗಳೂರು: ವರ್ಷದ ಹಿಂದೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏರಿಕೆ ಮಾಡಲಾಗಿದ್ದ ನೀರಿನ ದರದಲ್ಲಿ ಇಳಿಕೆ ಮಾಡಲಾಗಿದ್ದು, ಆಸ್ತಿ ತೆರಿಗೆಯೊಂದಿಗೆ ವಿಧಿಸಲಾಗುವ ಘನತ್ಯಾಜ್ಯ ತೆರಿಗೆಯನ್ನೂ ಇಳಿಕೆ ಮಾಡಲಾಗಿದೆ. ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪಾಲಿಕೆಯ ಪ್ರಥಮ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಮಾರ್ಚ್‌ನಲ್ಲಿ ನೂತನ ಮೇಯರ್ ಆಗಿ ದಿವಾಕರ ಪಾಂಡೇಶ್ವರ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿಯೇ ನೀರಿನ ತೆರಿಗೆ ಇಳಿಕೆ ಮಾಡುವುದಾಗಿ ಹೇಳಿದ್ದು, ಅದರಂತೆ ಮೊದಲ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸಾಮಾನ್ಯ ಸಭೆಯಲ್ಲಿ ನೀರಿನ ದರ ಇಳಿಕೆಯ ಕುರಿತು ಪಾಲಿಕೆಯ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾಹಿತಿ ನೀಡಿದರು.

ಕಳೆದ ವರ್ಷ ಏರಿಕೆ ಮಾಡಲಾಗಿದ್ದ ನೀರಿನ ದರವನ್ನು ಹಂತಗಳಲ್ಲಿ ಇಳಿಕೆ ಮಾಡಿರುವುದು ಸಂತಸದ ವಿಚಾರ. ಆದರೆ ಗೃಹ ಬಳಕೆಯ ಕುಡಿಯುವ ನೀರಿನಲ್ಲಿ ಈ ರೀತಿಯ ಹಂತಗಳಲ್ಲಿನ ಏರಿಕೆ ಮಾಡಿ ಇಳಿಕೆ ಮಾಡುವುದು ಸರಿಯಲ್ಲ. ಅದರ ಬದಲಿಗೆ ಒಂದು ವರ್ಷದ ಹಿಂದೆ ಇದ್ದಂತೆ 24ಸಾವಿರ ಲೀಟರ್‌ವರೆಗಿನ ₹65 ದರವನ್ನೇ ಮುಂದುವರಿಸಬೇಕು. ಕೋವಿಡ್‌–19 ನ ಸಂದರ್ಭದಲ್ಲಿ ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ಸಹಕಾರಿಯಾಗಲಿದೆ. ಲಾಕ್‌ಡೌನ್ ಅವಧಿಯಲ್ಲಿನ ನೀರಿನ ದರವನ್ನು ಮನ್ನಾ ಮಾಡಬೇಕು ಎಂದು ಪಾಲಿಕೆ ಸದಸ್ಯ ಪ್ರವೀಣ್‌ಚಂದ್ರ ಆಳ್ವ ಆಗ್ರಹಿಸಿದರು.

ಪ್ರತಿಪಕ್ಷದ ಸದಸ್ಯರ ಪ್ರತಿಭಟನೆ: ನೂತನ ಮೇಯರ್, ಉಪ ಮೇಯರ್ ಅಧಿಕಾರ ಸ್ವೀಕರಿಸಿದ ಬಳಿಕದ ಪ್ರಥಮ ಸಭೆ ಇದಾಗಿದ್ದು, ವಿಪಕ್ಷ ನಾಯಕರಿಗೆ ಮಾತ್ರ ಸಭೆಯಲ್ಲಿ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಲು ಅವಕಾಶವನ್ನು ಮೇಯರ್ ಒದಗಿಸಿದ್ದರು.

ಆದರೆ, ಇದು ಸಂವಿಧಾನದ ನಿಯಮ ಹಾಗೂ ಕಾನೂನು ಬಾಹಿರ, ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷದ ಸದಸ್ಯರು ಮೇಯರ್ ಪೀಠದ ಎದುರು ಪ್ರತಿಭಟನೆ ನಡೆಸಿದರು. ಸದಸ್ಯ ಎ.ಸಿ. ವಿನಯರಾಜ್‌ ಸಂವಿಧಾನದ ಪುಸ್ತಕವನ್ನು ಹಿಡಿದು, ಸದಸ್ಯರ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವಾರ್ಡ್ ಸಮಿತಿಗೆ ಅನುಮೋದನೆ: ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಪೌರ ನಿಗಮಗಳ (ತಿದ್ದುಪಡಿ) ಅಧಿನಿಯಮ 2011ರ ಪ್ರಕಾರ ವಾರ್ಡ್ ಸಮಿತಿ ರಚನೆಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಈ ಮೂಲಕ ಕಳೆದ ಹಲವಾರು ವರ್ಷಗಳಿಂದ ನಾಗರಿಕ ಹೋರಾಟ ಸಮಿತಿಗಳ ಹೋರಾಟಕ್ಕೆ ಜಯ ದೊರಕಿದಂತಾಗಿದೆ.

ಉಪ ಮೇಯರ್ ವೇದಾವತಿ, ಪಾಲಿಕೆ ಪ್ರಭಾರ ಆಯುಕ್ತ ದಿನೇಶ್, ಶಾಸಕರಾದ ಡಾ. ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು ಇದ್ದರು.

ಪರಿಷ್ಕೃತ ತೆರಿಗೆ ವಿವರ

ಕಳೆದ ಬಾರಿ 8 ಸಾವಿರ ಲೀಟರ್‌ವರೆಗೆ (ಪ್ರತಿ ಸಾವಿರ ಲೀಟರ್ ಬಳಕೆಗೆ) ₹7, 8 ರಿಂದ 15 ಸಾವಿರ ಲೀಟರ್‌ಗೆ ₹9, 15 ರಿಂದ 25 ಸಾವಿರ ಲೀಟರ್‌ಗೆ ₹11, 25 ಸಾವಿರ ಲೀಟರ್‌ಗಿಂತ ಅಧಿಕ ಬಳಕೆಗೆ ₹13 ನಿಗದಿಪಡಿಸಲಾಗಿತ್ತು.

ಇದೀಗ ಮಾಸಿಕ ದರವನ್ನು ₹60 ಗಳಿಗೆ ನಿಗದಿಪಡಿಸಲಾಗಿದೆ. 10 ಸಾವಿರ ಲೀಟರ್‌ವರೆಗಿನ ಬಳಕೆಗೆ (ಪ್ರತಿ ಸಾವಿರ ಲೀಟರ್‌ಗೆ) ₹6, 10ರಿಂದ 15 ಸಾವಿರ ಲೀಟರ್‌ಗೆ ₹7, 15 ಸಾವಿರದಿಂದ 20 ಸಾವಿರ ಲೀಟರ್‌ವರೆಗೆ ₹9, 20 ಸಾವಿರದಿಂದ 30 ಸಾವಿರ ಲೀಟರ್‌ವರೆಗೆ ₹11 ಹಾಗೂ 30ಸಾವಿರ ಲೀಟರ್‌ಗಿಂತ ಮೇಲಿನ ಬಳಕೆಗೆ ₹13 ರಂತ ದರ ನಿಗದಿಪಡಿಸಲಾಗಿದೆ.

500 ಚದರ ಅಡಿವರೆಗಿನ ಆಸ್ತಿ ತೆರಿಗೆಯೊಂದಿಗೆ ವಿಧಿಸಲಾಗಿದ್ದ ಘನತ್ಯಾಜ್ಯ ತೆರಿಗೆಯನ್ನು ಈ ಹಿಂದಿನ ₹50 ರ ಬದಲಿಗೆ ₹30 ಕ್ಕೆ, 501 ಚದರ ಅಡಿಯಿಂದ 1ಸಾವಿರ ಚದರ ಅಡಿವರೆಗಿನ ಆಸ್ತಿಗಳ ಮೇಲಿನ ಘನತ್ಯಾಜ್ಯ ತೆರಿಗೆಯನ್ನು ₹75 ರಿಂದ ₹60 ಕ್ಕೆ, 1001 ಚದರ ಅಡಿಯಿಂದ 1,500 ಚದರ ಅಡಿವರೆಗಿನ ಆಸ್ತಿ ಮೇಲಿನ ಘನತ್ಯಾಜ್ಯ ತೆರಿಗೆಯನ್ನು ₹100 ರಿಂದ ₹80 ಕ್ಕೆ ಇಳಿಕೆ ಮಾಡಲಾಗಿದೆ. ಉಳಿದಂತೆ ಹಿಂದಿನ ರೀತಿಯಲ್ಲಿಯೇ ಘನತ್ಯಾಜ್ಯ ಕರ ಮುಂದುವರಿಯಲಿದೆ ಎಂದು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾಹಿತಿ ನೀಡಿದರು.

ನೀರು ಮತ್ತು ಘನತ್ಯಾಜ್ಯ ತೆರಿಗೆಯನ್ನು ಇಳಿಕೆ ಮಾಡುವ ಮೂಲಕ ಮಹಾನಗರದ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸಲಾಗಿದೆ. ನಗರದ ಅಭಿವೃದ್ಧಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು.

– ದಿವಾಕರ ಪಾಂಡೇಶ್ವರ, ಮೇಯರ್‌

ನೀರಿನ ಸಂಸ್ಕರಣಾ ಘಟಕದಲ್ಲಿ ಎರಡೂವರೆ ತಿಂಗಳಿನಿಂದ ನೀರನ್ನು ಶುದ್ಧೀಕರಿಸದ ವಿಷಯುಕ್ತ ನೀರನ್ನು ಪೂರೈಸಲಾಗಿದೆ. ಇದರಿಂದ ಜನರ ಆರೋಗ್ಯದ ಮೇಲಾಗಿರುವ ಪರಿಣಾಮಕ್ಕೆ ಯಾರು ಜವಾಬ್ದಾರಿ

– ಅಬ್ದುಲ್‌ ರವೂಫ್‌, ಪಾಲಿಕೆ ಪ್ರತಿಪಕ್ಷದ ನಾಯಕ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಸಿ ಕಸವನ್ನು ಮನೆಯಲ್ಲೇ ಸಂಸ್ಕರಿಸಿದಲ್ಲಿ ತೆರಿಗೆಯಲ್ಲಿ ಶೇ 50ರಷ್ಟು ರಿಯಾಯಿತಿ ನೀಡುವ ನಿರ್ಧಾರ ಪ್ರಸಕ್ತ ಸಾಲಿನಿಂದ ಅನುಷ್ಠಾನಗೊಳ್ಳಲಿದೆ.

–ಪ್ರೇಮಾನಂದ ಶೆಟ್ಟಿ, ಪಾಲಿಕೆ ಸಚೇತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT