ಭಾನುವಾರ, ಏಪ್ರಿಲ್ 11, 2021
32 °C
ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಪ್ರತಿಪಕ್ಷದ ಒತ್ತಾಯ

ಕುಡಿಯುವ ನೀರಿನ ದರ ಇಳಿಕೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಪಾಲಿಕೆಯಿಂದ ಪರಿಷ್ಕರಿಸಿರುವ ನೀರಿನ ದರವನ್ನು ಕಡಿಮೆ ಮಾಡಬೇಕು ಎಂದು ಪಾಲಿಕೆ ಪ್ರತಿಪಕ್ಷದ ಸದಸ್ಯರು ಒತ್ತಾಯಿಸಿದರು.

ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಪ್ರವೀಣ್ ಚಂದ್ರ ಆಳ್ವ, ‘ನೀರಿನ ಬಿಲ್ ಕಟ್ಟುವಾಗ ಕಣ್ಣೀರು ಬರುತ್ತಿದೆ ಎಂದು ಜನರು ದೂರುತ್ತಿದ್ದಾರೆ. ಈ ಹಿಂದೆ 24ಸಾವಿರ ಲೀಟರ್‌ಗೆ ₹ 65 ಇತ್ತು. ಈಗ 8ಸಾವಿರ ಲೀಟರ್‌ಗೆ ₹65 ನಿಗದಿ ಮಾಡಲಾಗಿದೆ. ದರ ಕಡಿಮೆ ಮಾಡುವ ಮೇಯರ್ ಭರವಸೆ ಈಡೇರಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಅಕ್ಷಯ್ ಶ್ರೀಧರ್ ಅವರು, ‘ನಗರಾಭಿವೃದ್ಧಿ ಇಲಾಖೆ ನೀರಿಗೆ ಕನಿಷ್ಠ ದರವನ್ನು ನಿಗದಿ ಮಾಡಿದೆ. ಅದನ್ನು ಬದಲಾಯಿಸುವುದು ಪಾಲಿಕೆಯಿಂದ ಅಸಾಧ್ಯ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

ಪ್ರತಿಪಕ್ಷದ ನಾಯಕ್ ಅಬ್ದುಲ್ ರವೂಫ್ ಮಾತನಾಡಿ, ಸರ್ಕಾರಕ್ಕೆ ಕೋರಿಕೆ ಸಲ್ಲಿಸಿ ನಾಲ್ಕು ತಿಂಗಳಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದರು. ಸರ್ಕಾರಕ್ಕೆ ಮನವಿ ಸಲ್ಲಿಸಿ 3 ತಿಂಗಳವರೆಗೂ ಉತ್ತರ ಬಾರದಿದ್ದರೆ, ಪಾಲಿಕೆ ತನ್ನ ನಿರ್ಧಾರ ತೆಗೆದುಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿದೆ. ನೀರಿನಲ್ಲಿ ಲಾಭ ಮಾಡುವುದು ಸರಿಯಲ್ಲ ಎಂದು ಮಾಜಿ ಮೇಯರ್ ಶಶಿಧರ ಹೆಗ್ಡೆ ಹೇಳಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಆಯುಕ್ತರು ಭರವಸೆ ನೀಡಿದರು.

ಪ್ರತ್ಯೇಕ ಕೌಂಟರ್:

ವಿಪರೀತ ನೀರಿನ ಬಿಲ್ ಬಂದಿರುವ ಪ್ರಕರಣಗಳ ಬಗ್ಗೆ ಪ್ರತಿಪಕ್ಷದ ಸದಸ್ಯ ನವೀನ್ ಡಿಸೋಜ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ದಿವಾಕರ್ ಪಾಂಡೇಶ್ವರ್, ನೀರಿನ ಬಿಲ್‌ಗಳ ಗೊಂದಲ ಪರಿಹರಿಸಲು ಪ್ರತ್ಯೇಕ ಕೌಂಟರ್‌ ತೆರೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಉದ್ದಿಮೆ ಪರವಾನಗಿ ಸರಳ:

ನಗರದಲ್ಲಿ ಉದ್ದಿಮೆ ಪರವಾನಗಿ ನವೀಕರಣ ವ್ಯವಸ್ಥೆಯನ್ನು ಸರಳಗೊಳಿಸುವಂತೆ ಮೇಯರ್ ದಿವಾಕರ್ ಪಾಂಡೇಶ್ವರ ಸೂಚನೆ ನೀಡಿದರು.

ಹೊಸ ತೆರಿಗೆ ರಶೀದಿ ಇಲ್ಲದವರು ಹಳೇ ರಶೀದಿಯ ಪ್ರತಿ ಒದಗಿಸಿ ಪರವಾನಗಿ ಪಡೆಯಲು ಮತ್ತು ಹೆಚ್ಚುವರಿ ದಾಖಲೆಗಳನ್ನು ಒದಗಿಸಲು ಉದ್ದಿಮೆದಾರರಿಗೆ ಕಾಲಾವಕಾಶ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ವಿಷಯದಲ್ಲಿ ಮತ್ತೆ ತೊಂದರೆ ಎದುರಾದಲ್ಲಿ ತನ್ನ ಕಚೇರಿಯನ್ನು ನೇರವಾಗಿ ಸಂಪರ್ಕಿಸುವಂತೆ ಆಯುಕ್ತ ಅಕ್ಷಯ್ ಶ್ರೀಧರ್ ಸಲಹೆ ನೀಡಿದರು.

ಪ್ರಸ್ತುತ ಇರುವ ಉದ್ದಿಮೆ ಪರವಾನಗಿ ನವೀಕರಣ ವ್ಯವಸ್ಥೆಯಿಂದ ಸಮಸ್ಯೆಯಾಗಿದೆ. ಉದ್ದಿಮೆದಾರರಿಗೆ ಬ್ಯಾಂಕ್ ಸಾಲ ಪಡೆಯುವುದಕ್ಕೂ ಸಮಸ್ಯೆಯಾಗಿದೆ. ಪಾಲಿಕೆಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಹಿನ್ನೆಡೆಯಾಗಿದೆ ಎಂದು ಪಾಲಿಕೆ ಸದಸ್ಯ ಸುಧೀರ್ ಶೆಟ್ಟಿ ತಿಳಿಸಿದರು. ಅವರ ವಾದಕ್ಕೆ ಸದಸ್ಯರಾದ ನವೀನ್ ಡಿಸೋಜ, ಪ್ರೇಮಾನಂದ ಶೆಟ್ಟಿ, ಶಶಿಧರ ಹೆಗ್ಡೆ ದನಿಕೂಡಿಸಿದರು.

ಪ್ರತಿ ವರ್ಷ ಫೆಬ್ರುವರಿ ವೇಳೆಗೆ ಸುಮಾರು 15ಸಾವಿರ ಪರವಾನಗಿ ನವೀಕರಣ ಆಗುತ್ತವೆ. ಆದರೆ ಈ ವರ್ಷ ಕೇವಲ ಒಂದು ಸಾವಿರ ಮಾತ್ರ ನಡೆದಿದೆ ಎಂದು ಸದಸ್ಯ ಎ.ಸಿ.ವಿನಯರಾಜ್ ಹೇಳಿದರು.

ಉಪಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶರತ್ ಕುಮಾರ್, ಪೂರ್ಣಿಮಾ, ಕಿರಣ್ ಕುಮಾರ್, ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.