ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ನರೇಗಾ ನೆರವು: ಕೆರೆಗಳ ಕಾಯಕಲ್ಪ

ಮಳೆ ನೀರು ಸಂರಕ್ಷಣೆಗೆ ಒತ್ತು, ಇಂಗುಗುಂಡಿ ನಿರ್ಮಾಣ
Last Updated 10 ಮೇ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಅನೇಕ ಕೆರೆಗಳ ಪುನಶ್ಚೇತನಕ್ಕೆ ಸಹಕಾರಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೂಳು ತುಂಬಿದ್ದ 20 ಕೆರೆಗಳು ಕಳೆದ ಸಾಲಿನಲ್ಲಿ ಕಾಯಕಲ್ಪ ಕಂಡಿವೆ.

2021–22ನೇ ಸಾಲಿನಲ್ಲಿ ನರೇಗಾದಲ್ಲಿ ಗುರಿ ಮೀರಿ ಸಾಧನೆ ಮಾಡಿರುವ ಜಿಲ್ಲೆಯಲ್ಲಿ ಜಲ ಸಂರಕ್ಷಣೆ, ಜಲಜಾಗೃತಿಗೆ ಆದ್ಯತೆ ನೀಡಲಾಗಿದೆ. ನೀರಿಗೆ ಸಂಬಂಧಿಸಿ ಸುಮಾರು 2,407 ಸಾಮೂಹಿಕ ಕೆಲಸಗಳು ನಡೆದಿವೆ. ಅವುಗಳಲ್ಲಿ ಕೆರೆ ಹೂಳೆತ್ತುವ, ತೋಡು ಹೂಳೆತ್ತುವ ಕಾಮಗಾರಿಗಳ ಜತೆಗೆ, ಕೃಷಿ ಹೊಂಡ ನಿರ್ಮಾಣ, ಕಿಂಡಿ ಅಣೆಕಟ್ಟೆ, ತೆರೆದ ಬಾವಿ, ಜಲ ಮರುಪೂರಣ ಕಾಮಗಾರಿಗಳು ಒಳಗೊಂಡಿವೆ.

ಸಮಗ್ರ ಕೆರೆ ಅಭಿವೃದ್ಧಿ ಯೋಜನೆಯಲ್ಲಿ ಮೂಡುಬಿದಿರೆ ತಾಲ್ಲೂಕಿನಲ್ಲಿ ಎಂಟು, ಬೆಳ್ತಂಗಡಿಯಲ್ಲಿ ಆರು, ಬಂಟ್ವಾಳ ತಾಲ್ಲೂಕಿನಲ್ಲಿ ಮೂರು, ಸುಳ್ಯದಲ್ಲಿ ಎರಡು ಹಾಗೂ ಮಂಗಳೂರು ತಾಲ್ಲೂಕಿನಲ್ಲಿ ಒಂದು ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ವಿವಿಧ ಹಂತಗಳಲ್ಲಿ ಈ ಕೆರೆಗಳ ಕಾಮಗಾರಿ ನಡೆಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

‘ಜಿಲ್ಲೆಯಲ್ಲಿ ವಾರ್ಷಿಕ 4,000 ಮಿಲಿ ಮೀಟರ್ ಮಳೆಯಾಗುತ್ತದೆ. ಅದರಲ್ಲಿ ಶೇ 70ರಷ್ಟು ಮಳೆ ನೀರು ಸಂರಕ್ಷಣೆಯಾಗದೆ, ಹರಿದು ಹೋಗಿ ಸಮುದ್ರ ಸೇರುತ್ತದೆ. ಹೀಗಾಗಿ, ಮಳೆ ನೀರಿನ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಿ, ಜಲಮರುಪೂರಣ, ಸರ್ಕಾರಿ ಕಚೇರಿಗಳಲ್ಲಿ ಇಂಗುಗುಂಡಿ ರಚನೆಯನ್ನು ನರೇಗಾದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಜತೆಗೆ ಊರಿನ ಜಲಪಾತ್ರೆಯಂತಿರುವ ಕೆರೆಗಳ ಅಭಿವೃದ್ಧಿಯನ್ನೂ ಮಾಡಲಾಗಿದೆ. ಇದರಿಂದ ಸುತ್ತಲಿನ ಬಾವಿಗಳು, ಜಲಮೂಲಗಳ ಅಂತರ್ಜಲ ಮಟ್ಟ ಹೆಚ್ಚಲು ಅನುಕೂಲವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದರು.

‘ಸರ್ಕಾರದ ಘೋಷಣೆಯಂತೆ ಈ ವರ್ಷ ಗ್ರಾಮ ಪಂಚಾಯಿತಿಗೆ ಒಂದು ಕೆರೆಯಂತೆ, ಪ್ರತಿ ತಾಲ್ಲೂಕಿನಲ್ಲಿ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಕೆರೆ ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಪ್ರತಿ ತಾಲ್ಲೂಕಿಗೆ ಐದು ಕೆರೆಯಂತೆ ಕನಿಷ್ಠ 35 ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಕೆಲವೆಡೆಗಳಲ್ಲಿ ಕಾಮಗಾರಿಗಳು ಪ್ರಾರಂಭವಾಗಿವೆ’ ಎಂದು ವಿವರಿಸಿದರು.

‘ನರೇಗಾದಿಂದ ನಮಗೆ ಊರಿನಲ್ಲೇ ಕೆಲಸ ಸಿಕ್ಕಂತಾಗಿದೆ. ಗೃಹಿಣಿಯರಾಗಿದ್ದ ನಾವು ಮನೆಯಲ್ಲಿ ಖಾಲಿ ಇದ್ದೆವು. ನನ್ನಂತೆ ಅನೇಕ ಮಹಿಳೆಯರು ಈಗ ಕೆಲಸಕ್ಕೆ ಹೋಗುತ್ತಿದ್ದಾರೆ. ಬಾಳಿಲ ವರತೆ ಕೆರೆ ಅಭಿವೃದ್ಧಿ ಆಗಿರುವುದರಿಂದ ಆರು ತೋಟಗಳಿಗೆ ಅನುಕೂಲವಾಗಿದೆ. ತೋಡಿನ ಹೂಳೆತ್ತುವ ಕೆಲಸವನ್ನೂ ಮುಗಿಸಿದ್ದೇವೆ. ನೀರಿನ ಕೆಲಸವನ್ನು ನಾವು ಮಹಿಳೆಯರು ಖುಷಿಯಿಂದ ಮಾಡುತ್ತಿದ್ದೇವೆ’ ಎಂದು ಸುಳ್ಯ ತಾಲ್ಲೂಕು ಬಾಳಿಲದ ಹರಿಣಾಕ್ಷಿ ಪ್ರತಿಕ್ರಿಯಿಸಿದರು.

‘ಸಕಾಲಕ್ಕೆ ಕೂಲಿ ಹಣ ನೀಡಿ’
ನರೇಗಾದಲ್ಲಿ ಪ್ರಸ್ತುತ ದಿನಕ್ಕೆ ಕೂಲಿ ಹಣ ₹ 309 ಸಿಗುತ್ತಿದೆ. ಕೂಲಿ ಹಾಗೂ ಸಾಮಗ್ರಿ ಹಣಗಳ ಜಮಾ ವಿಳಂಬ ಆಗುತ್ತಿದೆ. ದಿನದ ತುತ್ತಿಗಾಗಿ ದುಡಿಯುವ ಕಾರ್ಮಿಕರಿಗೆ ವಾರಕ್ಕೊಮ್ಮೆಯಾದರೂ ಕೂಲಿ ಹಣ ಕೈಗೆ ದೊರೆತರೆ, ಮನೆ ಖರ್ಚಿಗೆ ಅನುಕೂಲ. ಸಕಾಲಕ್ಕೆ ಸರ್ಕಾರ ಕೂಲಿ ನೀಡಿದರೆ, ಹೆಚ್ಚು ಜನರು ಈ ಯೋಜನೆಯಡಿ ಕೆಲಸಕ್ಕೆ ಬರಲು ಇಷ್ಟಪಡುತ್ತಾರೆ ಎಂಬುದು ನರೇಗಾದಲ್ಲಿ ಉದ್ಯೋಗ ಕಾರ್ಡ್ ಪಡೆದವರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT