ಶನಿವಾರ, ಫೆಬ್ರವರಿ 27, 2021
30 °C

ಕೋವಿಡ್ ಲಸಿಕಾ ಕಾರ್ಯಕ್ರಮ ಆರಂಭ; 53 ಸಾವಿರ ಮಂದಿಗೆ ಮೊದಲ ಹಂತದಲ್ಲಿ‌ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಿಲ್ಲೆಯ 6 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ‌ ಎಸ್. ಅಂಗಾರ ಚಾಲನೆ ನೀಡಿದರು.

ಇಲ್ಲಿನ ಸರ್ಕಾರಿ ವೆನ್ಲಾಕ್‌‌ ಆಸ್ಪತ್ರೆಯ ಆಯುಷ್‌‌‌ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಶಾಸಕ ವೇದವ್ಯಾಸ ಕಾಮತ್. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಇಲಾಖೆ ಅಧಿಕಾರಿಗಳು, ವೈದ್ಯರು ಉಪಸ್ಥಿತರಿದ್ದರು.

ಜಿಲ್ಲೆಗೆ 24,000 ಡೋಸ್‌ ಲಸಿಕೆ ವಿತರಣೆಯಾಗಿದ್ದು, ಶನಿವಾರ ಜಿಲ್ಲೆಯ 6 ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 52,381 ಗುರುತಿಸಲಾಗಿದೆ.

ಜಿಲ್ಲಾ ವೆನ್ಲಾಕ್‌‌ ಆಸ್ಪತ್ರೆ ಆಯುಷ್‌ ವಿಭಾಗ, ಸುರತ್ಕಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಶನಿವಾರ ಈ ಲಸಿಕೆ ನೀಡಲಾಗುತ್ತದೆ.

ಒಂದು ಲಸಿಕಾ ಶಿಬಿರದಲ್ಲಿ ದಿನಕ್ಕೆ ನೂರು ಮಂದಿ ಫಲಾನುಭವಿಗಳಿಗೆ ಮಾತ್ರ ಲಸಿಕೆ ವಿತರಣೆಯಾಗಲಿದ್ದು, ಶಿಬಿರವು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಫಲಾನುಭವಿಗಳಿಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗುವುದು. ಶಿಬಿರದಲ್ಲಿ ಲಸಿಕೆಗೆ ಯಾವುದೇ ಫಲಾನುಭವಿಗಳಿಗೆ ನೋಂದಣಿ ಇರುವುದಿಲ್ಲ. ಈಗಾಗಲೇ ನೋಂದಣಿಯಾಗಿರುವ ಫಲಾನುಭವಿಗಳನ್ನು ಗುರುತಿಸಿ ಲಸಿಕೆ ನೀಡಲಾಗುವುದು.

ಲಸಿಕೆ ನೀಡಿದ ಬಳಿಕ ಆರೋಗ್ಯ ಕಾರ್ಯಕರ್ತರ ನಿಗಾವಣೆಯಲ್ಲಿ ಅರ್ಧ ಗಂಟೆ ಕಡ್ಡಾಯವಾಗಿ ವಿಶ್ರಾಂತಿ ಪಡೆದುಕೊಳ್ಳಬೇಕು. ಲಸಿಕೆಯ ಬಳಿಕ ಅಡ್ಡ ಪರಿಣಾಮ ಕಾಣಿಸಿಕೊಂಡಲ್ಲಿ ವೈದ್ಯಕೀಯ ತಂಡದ ಮೂಲಕ ಚಿಕಿತ್ಸೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ.

ಇದೇ18 ರಿಂದ ಜಿಲ್ಲೆಯ ಒಟ್ಟು 89 ಸರ್ಕಾರಿ ಹಾಗೂ 17 ಖಾಸಗಿ ಸಂಸ್ಥೆಗಳಲ್ಲಿ ಲಸಿಕೆ ನೀಡಲಾಗುವುದು‌ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು