ಸೋಮವಾರ, ಸೆಪ್ಟೆಂಬರ್ 16, 2019
27 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ

105 ಕುಟುಂಬಗಳಿಗೆ ಪರ್ಯಾಯ ನಿವೇಶನ

Published:
Updated:
Prajavani

ಮಂಗಳೂರು: ಕಡಲ್ಕೊರೆತ, ಭೂಕುಸಿತ ಹಾಗೂ ತ್ಯಾಜ್ಯದಿಂದಾಗಿ ಸಂತ್ರಸ್ತರಾದ 105 ಕುಟುಂಬಗಳಿಗೆ ನಿವೇಶನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರವಾಹ ಸ್ಥಿತಿ, ಪರಿಹಾರ ಕಾರ್ಯಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಹಾಗೂ ಪರಿಹಾರ ಕಾರ್ಯ ಕೈಗೊಳ್ಳಲು ಹಣಕಾಸಿನ ಕೊರತೆ ಇಲ್ಲ. ಸಂಪೂರ್ಣವಾಗಿ ಮನೆಗೆ ಹಾನಿಯಾಗಿರುವವರಿಗೆ ₹5 ಲಕ್ಷ ಪರಿಹಾರ ನೀಡಲಾಗುವುದು. ಅಲ್ಲದೇ ಪ್ರತಿ ತಿಂಗಳು ₹5 ಸಾವಿರ ಮನೆ ಬಾಡಿಗೆ ನೀಡಲಾಗುವುದು. ಪರಿಹಾರ ಕಾರ್ಯಗಳಿಗೆ ಅನುಕೂಲವಾಗುವಂತೆ ಕೂಡಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲೆಯ ಪ್ರವಾಹದ ಸ್ಥಿತಿಯ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ಉಳ್ಳಾಲದ ಕಡಲ್ಕೊರೆತ, ಪಚ್ಚನಾಡಿ ತ್ಯಾಜ್ಯ ಸಮಸ್ಯೆ ಹಾಗೂ ಬೆಳ್ತಂಗಡಿ ತಾಲ್ಲೂಕಿನ ಗಣೇಶನಗರ, ಮಕ್ಕಿಯಲ್ಲಿ ಭೂಕುಸಿತದಿಂದ ಸಂತ್ರಸ್ತರಾದವರಿಗೆ ಪರ್ಯಾಯ ನಿವೇಶನ ಕಲ್ಪಿಸಲು ವಿಶೇಷ ಪ್ಯಾಕೇಜ್‌ ನೀಡಲು ಸರ್ಕಾರಕ್ಕೆ ಪ್ರಸ್ತಾವ ಕಳಹಿಸಲಾಗಿದೆ ಎಂದರು.

ಕಡಲ್ಕೊರೆತದಿಂದ ಉಳ್ಳಾಲದಲ್ಲಿ 45, ಪಚ್ಚನಾಡಿಯಲ್ಲಿ ತ್ಯಾಜ್ಯ ಸಮಸ್ಯೆಯಿಂದ 27 ಹಾಗೂ ಭೂಕುಸಿತದಿಂದ ಗಣೇಶನಗರ, ಮಕ್ಕಿಯಲ್ಲಿ 16 ಮನೆಗಳು ಸೇರಿದಂತೆ ಜಿಲ್ಲೆಯಲ್ಲಿ 105 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಈಗಾಗಲೇ ತುರ್ತು ಪರಿಹಾರವಾಗಿ ₹1.91 ಕೋಟಿಯನ್ನು ವಿತರಿಸಲಾಗಿದೆ. ಜಿಲ್ಲಾಡಳಿತದ ಖಾತೆಯಲ್ಲಿ ₹15 ಕೋಟಿ ಇದೆ ಎಂದು ಜಿಲ್ಲಾಧಿಕಾರಿ ಸೆಂಥಿಲ್‌, ಪ್ರವಾಹದಿಂದಾಗಿ ಇಬ್ಬರು ಮೃತಪಟ್ಟಿದ್ದು, 12 ದನಗಳು ಮೃತಪಟ್ಟಿವೆ. 31 ಪರಿಹಾರ ಕೇಂದ್ರಗಳನ್ನು ಆರಂಭಿಸಿ, 1,015 ಜನರಿಗೆ ಆಶ್ರಯ ಒದಗಿಸಲಾಗಿತ್ತು. ತೋಟಗಾರಿಕೆ ಹಾಗೂ ಕೃಷಿ ಸೇರಿದಂತೆ ₹12.29 ಕೋಟಿ ಮೊತ್ತದ ಬೆಳೆ ನಷ್ಟವಾಗಿದೆ ಎಂದು ವಿವರಿಸಿದರು.

ಮೂಲಸೌಕರ್ಯದಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ವ್ಯಾಪ್ತಿಯಲ್ಲಿ ₹60 ಕೋಟಿ, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ₹250 ಕೋಟಿ ಹಾನಿಯಾಗಿದೆ. ₹672 ಕೋಟಿ ಮೊತ್ತದ 1,415 ಕಿ.ಮೀ. ರಸ್ತೆ ಹಾಳಾಗಿದೆ. 424 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದು, ₹55 ಕೋಟಿ ಅಂದಾಜಿಸಲಾಗಿದೆ. ಜಿಲ್ಲಾ ಪಂಚಾಯಿತಿಯ 257 ಕಟ್ಟಡಗಳಿಗೆ ಹಾನಿ ಉಂಟಾಗಿದ್ದು, ₹12.16 ಕೋಟಿ ನಷ್ಟ ಅಂದಾಜಿಸಲಾಗಿದೆ. 222 ಪ್ರಾಥಮಿಕ ಶಾಲೆಗಳಿಗೆ ₹10 ಕೋಟಿಯಷ್ಟು ಹಾನಿಯಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ₹36 ಕೋಟಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ₹6.77 ಕೋಟಿ, ಮೆಸ್ಕಾಂ ವ್ಯಾಪ್ತಿಯಲ್ಲಿ ₹11 ಕೋಟಿ, ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ₹24 ಲಕ್ಷದಷ್ಟು ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್ 21ರವರೆಗೆ 3,249 ಮಿ.ಮೀ. ವಾಡಿಕೆ ಮಳೆ ಇದೆ. ಆದರೆ, ಈ ಅವಧಿಯಲ್ಲಿ 2,583 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,024 ಮಿ.ಮೀ. ಮಳೆ ದಾಖಲಾಗಿತ್ತು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಎಚ್‌. ಅನಿಲ್‌ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್. ಸೆಲ್ವಮಣಿ, ನಗರ ಪೊಲೀಸ್ ಕಮಿಷನರ್‌ ಡಾ.ಪಿ.ಎಸ್‌. ಹರ್ಷ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್‌ ಆರ್‌. ಇದ್ದರು.

Post Comments (+)