ಭಾನುವಾರ, ನವೆಂಬರ್ 17, 2019
28 °C
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ತೆರಿಗೆ ಪಾವತಿಸದ ಟವರ್‌: ನೋಟಿಸ್ ನೀಡಿ

Published:
Updated:
Prajavani

ಮಂಗಳೂರು: ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಮೊಬೈಲ್ ಫೋನ್ ಟವರ್ ಕಂಪನಿಗಳು ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ಪಾವತಿ ಮಾಡುತ್ತಿಲ್ಲ ಎಂಬ ದೂರುಗಳು ಬಂದಿವೆ. ತೆರಿಗೆ ಪಾವತಿಸುವಂತೆ ಅಂತಹ ಕಂಪನಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪೆರ್ಮುದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಜಮೀನು ಕಾದಿರಿಸುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಇನ್ನೂ ಕೆಲವು ಜಮೀನುಗಳ ವಿಚಾರಗಳು ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿವೆ. ಆದಷ್ಟೂ ಬೇಗನೆ ಈ ಕಾರ್ಯ ಪೂರ್ಣಗೊಳ್ಳುವ ಭರವಸೆ ಇದೆ ಎಂದ ಅವರು, ರಾಜೀವ್ ಗಾಂಧಿ ನಿವೇಶನ ಯೋಜನೆ ಅಡಿಯಲ್ಲಿ ಖಾಲಿ ಇರುವ ಸರ್ಕಾರಿ ಜಮೀನುಗಳನ್ನು ಸರ್ವೆ ಮಾಡಿ, ನಿವೇಶನ ಇಲ್ಲದವರಿಗೆ ನ್ಯಾಯ ಬದ್ಧವಾಗಿ ವಿತರಿಸಬೇಕು ಎಂದು ಸೂಚಿಸಿದರು.

ರಾಜ್ಯೋತ್ಸವ ಪ್ರಶಸ್ತಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡುವ ಸಂದರ್ಭದಲ್ಲಿ ನಿಯಮಾನುಸಾರವಾಗಿ ಸರ್ಕಾರದ ಮಾನದಂಡದ ಮೂಲಕ ಆಯ್ಕೆ ಮಾಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನಿರೀಕ್ಷೆ ಇದ್ದವರಿಗೆ ಅಲ್ಲಿ ಪ್ರಶಸ್ತಿ ಸಿಗದೇ ಇದ್ದಾಗ, ಜಿಲ್ಲಾ ಮಟ್ಟದಲ್ಲಿ ನೀಡುವುದು ಸಮಾಧಾನಕರ ಆಗಿರುತ್ತದೆ ಎಂದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಂದಿರುವ ಅರ್ಜಿಗಳ ಮಾಹಿತಿ ಪಡೆದ ಅವರು, ಎಲ್ಲ ಕ್ಷೇತ್ರಗಳಿಗೆ ಹಂಚಿಕೆಯಾಗುವಂತೆ ಕನಿಷ್ಠ 25 ಪ್ರಶಸ್ತಿಗಳನ್ನು ನೀಡಬೇಕು ಎಂದು ತಿಳಿಸಿದರು.

ಅಬ್ಬಕ್ಕ ಉತ್ಸವ: ಜಿಲ್ಲಾಡಳಿತದ ಮೂಲಕ ನಡೆಯುವಂತಹ ಪ್ರತಿ ಉತ್ಸವಗಳಿಗೆ ಸಂಬಂಧಪಟ್ಟ ಸಮಿತಿಗಳು ತಮ್ಮ ಸಲಹೆಗಳನ್ನು ನೀಡಬಹುದು. ಅದರಂತೆ ಅಬ್ಬಕ್ಕ ಉತ್ಸವಕ್ಕೆ ಸಂಬಂಧಿಸಿದ ಎರಡು ಸಮಿತಿಗಳನ್ನು ಸೇರಿಸಿ ಸಭೆ ನಡೆಸುವ ಹಾಗೂ ಅವರ ಅಭಿಪ್ರಾಯಗಳನ್ನು ಪಡೆದು ಸರ್ಕಾರದ ನಿಯಮದ ಪ್ರಕಾರ ಉತ್ಸವ ನಡೆಸುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಶಾಸಕರಾದ ಯು.ಟಿ. ಖಾದರ್, ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್. ಸೆಲ್ವಮಣಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)