ಮಂಗಳೂರು: ವಿವಿಧ ವಸತಿ ಯೋಜನೆಗಳಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಫಲಾನುಭವಿಗಳಿಗೆ ಮನೆಗಳನ್ನು ಹಂಚುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಶಾಸಕರು ಜನರಲ್ಲಿ ಅರಿವು ಮೂಡಿಸದೇ ಇರುವುದು ಕೂಡ ಇದಕ್ಕೆ ಕಾರಣ ಎಂದು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಮಂಡಳಿ ವತಿಯಿಂದ 2013ರಿಂದ 2023ರ ವರೆಗೆ 1,67,600 ಮನೆಗಳು ಮಂಜೂರಾಗಿವೆ. ಆದರೆ, ಒಂದು ಮನೆಯನ್ನು ಕೂಡ ಹಂಚಲು ಸಾಧ್ಯವಾಗಿಲ್ಲ. ಮನೆಯೊಂದಕ್ಕೆ ₹ 7.50 ಲಕ್ಷ ಖರ್ಚಾಗುತ್ತದೆ. ಕೇಂದ್ರ ಸರ್ಕಾರ ₹ 1.50 ಲಕ್ಷ ಮತ್ತು ರಾಜ್ಯ ಸರ್ಕಾರ ₹ 1.20 ಲಕ್ಷ ಸಬ್ಸಿಡಿ ನೀಡುತ್ತದೆ. ಉಳಿದ ಮೊತ್ತವನ್ನು ಫಲಾನುಭವಿಗಳು ಭರಿಸಬೇಕು’ ಎಂದು ತಿಳಿಸಿದರು.
‘ಶಾಸಕರು ಮನೆಗಳನ್ನು ಮಂಜೂರು ಮಾಡಿದ್ದರ ಬಗ್ಗೆ ಹೇಳಿಕೊಂಡು ಓಡಾಡುತ್ತಾರೆಯೇ ಹೊರತು ಅವುಗಳನ್ನು ಫಲಾನುಭವಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ ಫಲಾನುಭವಿ ಭರಿಸಬೇಕಾದ ಹಣ ಪಾವತಿಯಾಗುವುದಿಲ್ಲ. ಗುತ್ತಿಗೆದಾರರು ಸಬ್ಸಿಡಿ ಹಣದಲ್ಲಿ ಭಾಗಶಃ ಕೆಲಸ ಮಾಡುತ್ತಾರೆ. ಕೇಂದ್ರ ನೀಡುವ ಸಬ್ಸಿಡಿ ಮೊತ್ತಕ್ಕೆ ಶೇಕಡ 18ರಷ್ಟು ಜಿಎಸ್‍ಟಿ ಕಟ್ಟಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವಸತಿ ಯೋಜನೆ ‘ಫಲ’ ನೀಡಿಲ್ಲ’ ಎಂದು ಸಚಿವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.