ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಪಂಚಾಯಿತಿ ರದ್ದು: ವ್ಯವಸ್ಥೆಯ ಬುಡಮೇಲು ಹುನ್ನಾರ

ರಾಜ್ಯ ಸಂಪುಟ ವಿಸ್ತರಣೆ: ಶಾಸಕರ ಬ್ಲಾಕ್‌ಮೇಲ್ ತಂತ್ರದ ಅನುಮಾನ -ಶಾಸಕ ಖಾದರ್‌
Last Updated 14 ಜನವರಿ 2021, 11:17 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದಲ್ಲಿ ತಾಲ್ಲೂಕು ಪಂಚಾಯಿತಿ ವ್ಯವಸ್ಥೆ ರದ್ದು ಪಡಿಸುವ ಪ್ರಸ್ತಾಪವನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಈ ಬಗ್ಗೆ ಹೇಳಿಕೆ ನೀಡಿರುವ ಸಚಿವರು ಹಾಗೂ ಸರ್ಕಾರ ಕೂಡಲೇ ಸ್ಪಷ್ಟನೆ ನೀಡಬೇಕು’ ಎಂದು ಶಾಸಕ ಯು.ಟಿ.ಖಾದರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಮೂರು ಹಂತಗಳ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಹಾಳು ಮಾಡುವುದಕ್ಕೆ ಮುಂದಾಗಿದೆ. ಇದನ್ನು ತೀವ್ರವಾಗಿ ಖಂಡಿಸಲಾಗುತ್ತದೆ. ತಾಲ್ಲೂಕು ಪಂಚಾಯಿತಿ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡಲು ಹೊರಟಿರುವ ಸರ್ಕಾರ ಈ ಪ್ರಸ್ತಾಪವನ್ನು ಏಕಾಏಕಿಯಾಗಿ ಏಕೆ ಮುಂದಿಟ್ಟಿದೆ? ಈ ಬಗ್ಗೆ ವಿರೋಧ ಪಕ್ಷದ ಸದಸ್ಯರ ಜತೆ ಅಥವಾ ಗ್ರಾಮಾಭಿವೃದ್ಧಿ ತಜ್ಞರ ಜತೆ ಚರ್ಚೆ ನಡೆಸಬೇಕಿತ್ತು. ಸಂವಿಧಾನದ 73 ನೇ ತಿದ್ದುಪಡಿಗೆ ಯಾವುದೇ ಬೆಲೆಯೇ ಇಲ್ಲವೇ? ತಾಲ್ಲೂಕು ಪಂಚಾಯಿತಿ ರದ್ದು ಮಾಡುವಂತಹ ನಿರ್ಧಾರ ಅಸಂವಿಧಾನಿಕ ವಿರೋಧಿ ನೀತಿಯಾಗಿದೆ ಎಂದು ತಿಳಿಸಿದರು.

ಎರಡು ಹಂತದ ಪಂಚಾಯಿತಿ ವ್ಯವಸ್ಥೆಯಲ್ಲಿ ಆಡಳಿತ ನಡೆಸುವುದು ಸುಲಭವಲ್ಲ. ಜಿಲ್ಲಾ ಪಂಚಾಯತಿಗೆ ಅಥವಾ ಶಾಸಕರಿಗೆ ನೇರವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ನೋಡಿಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ. ತಾಲ್ಲೂಕು ಪಂಚಾಯಿತಿ ಅಸ್ತಿತ್ವ ರದ್ದುಗೊಳಿಸುವುದರಿಂದ ವ್ಯವಸ್ಥೆಯ ಬುಡಮೇಲು ಮಾಡುವ ಹುನ್ನಾರ ಇದರ ಹಿಂದೆ ಇದೆ ಎಂದು ಆಕ್ರೋಶ ಹೊರ ಹಾಕಿದರು.

ತಾಲ್ಲೂಕು ಪಂಚಾಯಿತಿ ವ್ಯವಸ್ಥೆಯನ್ನು ರದ್ದು ಮಾಡುವ ಬದಲು, ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಕೆಲಸ ಸರ್ಕಾರದಿಂದ ಆಗಬೇಕು. ಪಂಚಾಯತ್‌ ರಾಜ್ ವ್ಯವಸ್ಥೆಯಲ್ಲಿ ತಾಲ್ಲೂಕು ಪಂಚಾಯಿತಿ ಕೂಡ ಒಂದು ಭಾಗವಾಗಿದ್ದು, ಅದನ್ನು ರದ್ದು ಪಡಿಸುವುದರಿಂದ ಸರ್ಕಾರ ಏನನ್ನೂ ಸಾಧಿಸಿದಂತೆ ಆಗುವುದಿಲ್ಲ ಎಂದು ತಿಳಿಸಿದರು.

ಅನುದಾನ ಬೇಡಿಕೆ: ಸೋಮೇಶ್ವರದ ಉಚ್ಚಿಲದಲ್ಲಿ ಕಡಲ್ಕೊರೆತದಿಂದ ಸಂಪರ್ಕ ರಸ್ತೆ ಕಡಿತಗೊಂಡ ಜಾಗದಲ್ಲಿ ರಸ್ತೆ ಸರಿಪಡಿಸಲು ಲೋಕೋಪಯೋಗಿ ಇಲಾಖೆ ₹ 50 ಲಕ್ಷ ಬಿಡುಗಡೆ ಮಾಡಿದೆ. ಆದರೆ, ಸಮುದ್ರ ತೀರದಲ್ಲಿ ತಡೆಗೋಡೆ ನಿರ್ಮಾಣ ಮಾಡದೆ ರಸ್ತೆ ಕಾಮಗಾರಿ ನಡೆಸುವಂತಿಲ್ಲ. ತಡೆಗೋಡೆಗೆ ₹ 4.50 ಕೋಟಿ ಬಿಡುಗಡೆ ಮಾಡುವಂತೆ ಬಂದರು, ಒಳನಾಡು ಜಲಸಾರಿಗೆ ಇಲಾಖೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.

ಅಂಗಾರಗೆ ಸಚಿವ ಸ್ಥಾನ– ಅಭಿನಂದನೆ: ಸುಳ್ಯ ಶಾಸಕ ಎಸ್. ಅಂಗಾರ ಸಚಿವರಾಗಿರುವುದು ಸಂತೋಷದ ಸಂಗತಿ ಮತ್ತು ಅವರನ್ನು ಅಭಿನಂದಿಸುತ್ತೇನೆ. ಕೋಟ ಶ್ರೀನಿವಾಸ್ ಪೂಜಾರಿ ಅವರು ಸಚಿವರಾಗಿ ಚೆನ್ನಾಗಿ ಕಾರ್ಯನಿರ್ವಹಿಸಿದ್ದು, ಅವರನ್ನೇ ಉಸ್ತುವಾರಿ ಸಚಿವರನ್ನಾಗಿ ಮುಂದುವರಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ಜಿಲ್ಲೆಯವರೇ ಆದ ಅಂಗಾರ ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ಒಳ್ಳೆಯದು. ಕೋಟ ಅವರನ್ನು ಉಡುಪಿ ಜಿಲ್ಲೆಯ ಉಸ್ತುವಾರಿಯನ್ನಾಗಿ ಮಾಡಿದರೆ ಒಳ್ಳೆಯದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಚಂದ್ರಹಾಸ ಕರ್ಕೇರಾ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುದರ್ಶನ ಶೆಟ್ಟಿ, ಕಾಂಗ್ರೆಸ್ ಮುಖಂಡ ಈಶ್ವರ ಉಳ್ಳಾಲ್, ತಾಲ್ಲೂಕು ಪಂಚಾಯಿತಿ ಸದಸ್ಯ ಜಬ್ಬಾರ್, ಝಖಾರಿಯಾ ಇದ್ದರು.

‘ಸಂಪುಟ ವಿಸ್ತರಣೆ: ಹಲವು ಅನುಮಾನ’
ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿಂದೆ ಶಾಸಕರ ಬ್ಲಾಕ್‌ಮೇಲ್ ತಂತ್ರವಿದೆ ಎಂದು ಆಡಳಿತ ಪಕ್ಷದ ಬಿಜೆಪಿ ಶಾಸಕರೇ ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಹಾಗೂ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಡಿ ಬಾಂಬ್ ಸಿಡಿಸುವುದಾಗಿ ಹೇಳಿದ್ದಾರೆ. ಶಾಸಕ ಸುನಿಲ್ ಕುಮಾರ್ ಅವರು ಟ್ವೀಟ್ ಮಾಡಿ ನನಗೆ ಪಕ್ಷ ನಿಷ್ಠೆ ಮಾತ್ರ ಗೊತ್ತು, ಬ್ಲಾಕ್‌ಮೇಲ್ ಗೊತ್ತಿಲ್ಲ ಎಂದಿದ್ದಾರೆ. ಕೆಲವರು ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಟೀಕೆ ಮಾಡಿದ್ದಾರೆ. ಇಂತಹ ಘಟನೆಗಳನ್ನು ಗಮನಿಸಿದಾಗ, ಸಂಪುಟ ವಿಸ್ತರಣೆಯ ಹಿಂದೆ ಬ್ಲಾಕ್‌ಮೇಲ್ ತಂತ್ರ ಅಡಗಿದೆಯೇ ಎಂಬ ಸಂಶಯ ಬರುತ್ತಿದ್ದು, ಈ ಬಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

‘ಬೋಟ್‌ಗಳಿಗೆ ಸೀಮೆ ಎಣ್ಣೆ ಪೂರ್ತಿ ನೀಡಿ’
‘ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ, ಮೀನುಗಾರಿಕಾ ಬೋಟ್‌ಗಳಿಗೆ 400 ಲೀಟರ್ ಸೀಮೆಎಣ್ಣೆ ನೀಡಲಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅದನ್ನು 315 ಲೀಟರ್‌ಗೆ ಇಳಿಕೆ ಮಾಡಲಾಯಿತು. ಈಗ ಅದು ಮತ್ತೆ ಕಡಿಮೆಯಾಗಿ 130 ಲೀಟರ್‌ಗೆ ಇಳಿದಿದೆ. ಇದರಿಂದಾಗಿ ಸಣ್ಣ ಬೋಟ್‌ಗಳ ಮೀನುಗಾರರು ಮೀನುಗಾರಿಕೆ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ಸೀಮೆ ಎಣ್ಣೆ ಕೋಟಾವನ್ನು ಈ ಹಿಂದಿನಂತೆ ಮುಂದುವರಿಸಬೇಕು’ ಎಂದು ಶಾಸಕ ಯು.ಟಿ. ಖಾದರ್ ಸರ್ಕಾರವನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT