ಗುರುವಾರ , ಅಕ್ಟೋಬರ್ 17, 2019
21 °C
ಮೀನುಗಾರಿಕೆ ಬಂದರಿಗೆ ಭೇಟಿ ನೀಡಿದ ಶಾಸಕ ವೇದವ್ಯಾಸ ಕಾಮತ್

ಆಧುನಿಕ ತಂತ್ರಜ್ಞಾನದ ತೇಲುವ ಜೆಟ್ಟಿ

Published:
Updated:
Prajavani

ಮಂಗಳೂರು: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಗರದ ಬಂದರಿನಲ್ಲಿ ಆಧುನಿಕ ತಾಂತ್ರಿಕತೆಯಲ್ಲಿ ತೇಲಾಡುವ ಕಾಂಕ್ರೀಟ್ ಜೆಟ್ಟಿ ನಿರ್ಮಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದರು.

ಭಾನುವಾರ ನಗರದ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಬಳಿಕ ಅವರು ಮಾತನಾಡಿದರು. ಇಂದಿನ ಆಧುನಿಕತೆಗೆ ಹೊಂದಿಕೊಳ್ಳುವಂತೆ ಸುಮಾರು ₹6.25 ಕೋಟಿ ವೆಚ್ಚದಲ್ಲಿ ತೇಲಾಡುವ ಕಾಂಕ್ರೀಟ್ ಜೆಟ್ಟಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಮೀನುಗಾರರ ಹಿತದೃಷ್ಟಿಗೆ ಪೂರಕವಾಗಿರುವ ಈ ಜೆಟ್ಟಿಯು 60 ಮೀಟರ್ ಉದ್ದ ಹಾಗೂ 6 ಮೀಟರ್ ಅಗಲ, 1 ಮೀಟರ್ ದಪ್ಪವಾಗಿದ್ದು ಸುಮಾರು, 180 ಟನ್ ತೂಕವಿರುತ್ತದೆ. 360 ಟನ್ ಭಾರವನ್ನು ಸುಲಭವಾಗಿ ಹೊರುವ ಸಾಮರ್ಥ್ಯ ಇದಕ್ಕಿರುತ್ತದೆ ಎಂದು ವಿವರಿಸಿದರು.

ಟೆಂಪೋಗಳು ಜೆಟ್ಟಿಯ ಮೂಲಕವೇ ಹಾದು ಮೀನುಗಾರಿಕಾ ಬೋಟ್‌ಗಳಲ್ಲಿರುವ ಮೀನುಗಳನ್ನು ತುಂಬಿಸಿಕೊಂಡು ಹೋಗಬಹುದಾದಷ್ಟು ಶಕ್ತಿಯುತವಾಗಿರುತ್ತದೆ. ಮೀನುಗಾರಿಕಾ ಬೋಟ್‌ಗಳು ಜೆಟ್ಟಿಯನ್ನು ಸೇರುವ ಸಂಪರ್ಕ ಪ್ರದೇಶದ ಜೆಟ್ಟಿಯ ಸುತ್ತಲೂ, ರಬ್ಬರಿನ ಪದರವನ್ನು ಅಳವಡಿಸಲಾಗುತ್ತಿದೆ. ಬೋಟ್‌ನ ಆವರಣಕ್ಕೆ ಹಾನಿಯಾಗದಂತೆ ತಡೆಗಟ್ಟಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಜೆಟ್ಟಿಯ ಒಳಗಡೆ ನೀರು, ವಿದ್ಯುತ್ ಸಂಪರ್ಕಗಳೂ ದೊರೆಯಲಿದೆ. ವಿಶೇಷವೆಂದರೆ, ನೀರಿನ ಮಟ್ಟಕ್ಕೆ ಅನುಗುಣವಾಗಿ ಜೆಟ್ಟಿಯು ತೇಲುತ್ತಿರುತ್ತದೆ. ಜೆಟ್ಟಿಯನ್ನು ಬೇರೆಡೆ ಸಿದ್ಧಪಡಿಸಿ, ಸಮುದ್ರದ ಮೂಲಕವೇ ತಂದು ಜೋಡಿಸಲಾಗುವುದು. ಇದರಿಂದ ಕಾಮಗಾರಿಯ ಸಂದರ್ಭದಲ್ಲಿ ಮೀನುಗಾರರಿಗೆ ಯಾವುದೇ ರೀತಿಯ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ಹೇಳಿದರು.

ಯೋಜನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಅನುಮೋದನೆ ದೊರೆತ ತಕ್ಷಣವೇ ಕಾಮಗಾರಿ ಪ್ರಾರಂಭವಾಗಲಿದೆ. ಆಧುನಿಕತೆಯತ್ತ ಜಗತ್ತು ಹೊರಳುತ್ತಿರುವಾಗ ನಮ್ಮ ಮಂಗಳೂರು ಅದಕ್ಕಿಂತ ಭಿನ್ನವಾಗಿರದೇ, ಸಾಂಸ್ಕೃತಿಕತೆಯನ್ನು ಉಳಿಸಿಕೊಂಡು ಆಧುನಿಕತೆಯತ್ತ ಹೆಜ್ಜೆ ಹಾಕಬೇಕು ಎನ್ನುವುದು ನಮ್ಮ ಗುರಿ ಎಂದು ಶಾಸಕ ಕಾಮತ ತಿಳಿಸಿದರು. ಜೆಟ್ಟಿಯ ವಿನ್ಯಾಸಕಾರ ಮಿಲಿಂದರ್ ಪ್ರಭು, ಅಮುಲ್, ಮೀನುಗಾರರ ಮುಖಂಡರಾದ ನಿತಿನ್ ಕುಮಾರ್, ರಾಜೇಶ್ ಉಳ್ಳಾಲ್, ಮೋಹನ್ ಬೆಂಗ್ರೆ, ನಿತಿನ್ ಬಂಗೇರ, ಇಬ್ರಾಹಿಂ ಬೆಂಗ್ರೆ, ಸಂದೀಪ್ ಉಳ್ಳಾಲ್, ನವೀನ್, ಬಿಜೆಪಿ ಮುಖಂಡರಾದ ಸಂಜಯ್ ಪ್ರಭು, ಪ್ರೇಮಾನಂದ ಶೆಟ್ಟಿ, ದಿವಾಕರ್ ಪಾಂಡೇಶ್ವರ, ವಸಂತ್ ಜೆ. ಪೂಜಾರಿ, ವಿನೋದ್ ಮೆಂಡನ್ ಇದ್ದರು.

Post Comments (+)