ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಸೂರಿನ ನೀರಿಕ್ಷೆಯಲ್ಲಿ ಗ್ರಂಥಾಲಯ

Last Updated 3 ಮಾರ್ಚ್ 2018, 6:18 IST
ಅಕ್ಷರ ಗಾತ್ರ

ಚೋರುನೂರು (ಸಂಡೂರು): ತಾಲ್ಲೂಕಿನ ಚೋರುನೂರು ಗ್ರಾಮದಲ್ಲಿನ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಜೀರ್ಣಾವಸ್ಥೆಯನ್ನು ತಲುಪಿದ್ದು, ಕಾಯಕಲ್ಪಕ್ಕೆ ಕಾಯುತ್ತಿದೆ.

ಪ್ರಾಥಮಿಕ ಹಂತದಿಂದ ಪದವಿಪೂರ್ವ ಕಾಲೇಜಿನವರೆಗೆ ಶಿಕ್ಷಣ ಕೇಂದ್ರಗಳನ್ನು ಹೊಂದಿರುವುದಲ್ಲದೆ, ಹೋಬಳಿ ಹಾಗೂ ಪ್ರಮುಖ ವ್ಯಾಪಾರಿ ಕೇಂದ್ರವಾಗಿರುವ ಚೋರುನೂರು ಗ್ರಾಮದ ಸಾರ್ವಜನಿಕ ಗ್ರಂಥಾಲಯದ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಕಟ್ಟಡ ಶಿಥಿಲಾವಸ್ಥೆ ತಲುಪಿರುವುದರಿಂದ ಓದುಗರು ಪುಸ್ತಕ, ಪತ್ರಿಕೆಗಳನ್ನು ಓದಬೇಕೆಂದರೂ ಗ್ರಂಥಾಲಯ ಪ್ರವೇಶಿಸಲು ಹಿಂದೆಮುಂದೆ ನೋಡುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ಸ್ವಂತ ಕಟ್ಟಡವಿಲ್ಲ : ಇಲ್ಲಿರುವ ಗ್ರಂಥಾಲಯದ ಸ್ಥಳ ಮತ್ತು ಕಟ್ಟಡ ಗ್ರಾಮದ ರೈತ ಸೇವಾ ಸಹಕಾರ ಸಂಘಕ್ಕೆ ಸೇರಿದ್ದಾಗಿದೆ. ಮೊದಲು ಗ್ರಂಥಾಲಯ ಕೇಂದ್ರವಾಗಿದ್ದ ಈಗಿರುವ ಕಟ್ಟಡ ಪೊಲೀಸ್‌ ಠಾಣೆಯಾಗಿ ಬದಲಾಗಿತ್ತು. ಆಗ ಗ್ರಂಥಾಲಯ ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ನೂತನ ಪೊಲೀಸ್ ಠಾಣೆ ನಿರ್ಮಾಣವಾದ ನಂತರದಲ್ಲಿ ಹಿಂದಿದ್ದ ಕಟ್ಟಡ ಪುನಾ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಇದೀಗ ಶಿಥಿಲಗೊಂಡ ಕಟ್ಟಡದ ಕಾರಣದಿಂದಾಗಿ, ಪುನಾ ಗ್ರಂಥಾಲಯದ ಕಟ್ಟಡವನ್ನು ಸ್ಥಳಾಂತರಿಸುವ ಅನಿವಾರ್ಯತೆ ಎದುರಾಗಿದೆ.

ನೂತನ ಕಟ್ಟಡಕ್ಕೆ ಹಣ ಮಂಜೂರಾಗಿದ್ದರೂ, ಸ್ವಂತ ಜಾಗವಿಲ್ಲ : ಹೋಬಳಿ ಕೇಂದ್ರದ ಗ್ರಂಥಾಲಯವಾದ್ದರಿಂದ, ಇಲ್ಲಿನ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಹತ್ತ ಲಕ್ಷ ಹಣ ಮಂಜೂರಾಗಿದೆ. ಆದರೆ, ಗ್ರಂಥಾಲಯಕ್ಕೆ ಸ್ವಂತ ಜಾಗವಿಲ್ಲದ ಕಾರಣ, ಮಂಜೂರಾದ ಹಣ ಬಳಕೆಯಾಗದೆ ಹಾಗೆಯೇ ಉಳಿದಿದೆ.

ಗ್ರಾಮ ಪಂಚಾಯ್ತಿಯವರು ಪಂಚಾಯ್ತಿ ಸಭೆಯಲ್ಲಿ ತೀರ್ಮಾನಿಸಿ, ಜಾಗವನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿದರೆ, ಇಲಾಖೆ ವತಿಯಿಂದ ಕಟ್ಟಡವನ್ನು ಕಟ್ಟಿಕೊಳ್ಳಲು ಇಲಾಖೆ ಸಿದ್ಧವಿದೆ. ಈ ಕುರಿತು ಹಲವು ಬಾರಿ ಇಲಾಖೆಯಿಂದ ಗ್ರಾಮ ಪಂಚಾಯ್ತಿಗೆ ಪತ್ರವನ್ನು ಬರೆಯಲಾಗಿದೆ ಎನ್ನುತ್ತಾರೆ ಗ್ರಂಥಾಲಯದ ಮೇಲ್ವಿಚಾರಕ ನಾಗರಾಜ್. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಜಾಗವನ್ನು ಬೇರೆ ಇಲಾಖೆಗೆ ರಿಜಿಸ್ಟರ್ ಮಾಡಿಸಲು ಬರುವುದಿಲ್ಲ. ನಾವು ಸರ್ಕಾರಿ ಜಾಗವನ್ನು ತೋರಿಸಿ, ಚಕ್ಕುಬಂದಿ ಹಾಕಿ ಕೊಡುತ್ತೇವೆ. ಹಾಗೆಯೇ ಗ್ರಂಥಾಲಯ ಕಟ್ಟಡ ಕಟ್ಟಿಕೊಳ್ಳಲು ಅನುಮತಿ ನೀಡಬಹುದು. ಗ್ರಂಥಾಲಯದ ಮೇಲ್ವಿಚಾರಕರು ತಾತ್ಕಾಲಿಕವಾಗಿ ಗ್ರಾಮ ಪಂಚಾಯ್ತಿ ಮೇಲಿರುವ ಕಟ್ಟಡಕ್ಕೆ ಗ್ರಂಥಾಲಯವನ್ನು ಸ್ಥಳಾಂತರಿಸಲು ಬಯಸಿ, ಅರ್ಜಿ ಸಲ್ಲಿಸಿದರೆ, ಗ್ರಾ,ಪಂ. ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಕೊಡಲು ಸಿದ್ಧರಿದ್ದೇವೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಟಿ. ನಾಗಪ್ಪ.

ಹಣ ಮಂಜೂರಾಗಿದ್ದರೂ, ಸ್ವಂತ ಸ್ಥಳವಿಲ್ಲದೆ, ನೂತನ ಕಟ್ಟಡ ನಿರ್ಮಾಣವಾಗದೆ, ಶಿಥಿಲಗೊಂಡ ಕಟ್ಟಡದಲ್ಲಿಯೇ ಗ್ರಂಥಾಲಯ ಮುಂದುವರೆದಿರುವುದು ವಿಪರ್ಯಾಸವಾಗಿದೆ. ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮತ್ತು ಓದುಗರಿಗೆ ಬಂದು ಹೋಗಲು ಅನುಕೂಲವಾಗುವ ಸ್ಥಳದಲ್ಲಿ ಸುಸಜ್ಜಿತ ಗ್ರಂಥಾಲಯದ ಕಟ್ಟಡ ನಿರ್ಮಾಣವಾಗಬೇಕಿದೆ. ಇದಕ್ಕೆ ಗ್ರಾಮ ಪಂಚಾಯ್ತಿ ಹಾಗೂ ಗ್ರಂಥಾಲಯ ಇಲಾಖೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಂಡು ಓದುಗರಿಗೆ ಅನುಕೂಲ ಕಲ್ಪಿಸಬೇಕಿದೆ.
***
ಸುಸಜ್ಜಿತ ಗ್ರಂಥಾಲಯದ ಕಟ್ಟಡ ನಿರ್ಮಾಣವಾದಲ್ಲಿ, ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ
– ಕೃಷ್ಣಮೂರ್ತಿ, ಗ್ರಾಮಸ್ಥ.
***

2. ಶೈಕ್ಷಣಿಕ ಮತ್ತು ಹೋಬಳಿ ಕೇಂದ್ರವಾಗಿರುವ ಚೋರನೂರು ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣದ ಅಗತ್ಯವಿದೆ
ಎಚ್.ಎಂ. ಮಂಜುನಾಥ್, ಮಾಜಿ ಎಪಿಎಂಸಿ ಸದಸ್ಯರು, ಚೋರುನೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT