ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಶಿಕ್ಷಣ ನೀತಿಯಿಂದ ದೇಶದಲ್ಲಿ ಬದಲಾವಣೆ

ಕಾರ್ಯಾಗಾರದಲ್ಲಿ ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ
Last Updated 15 ಅಕ್ಟೋಬರ್ 2019, 16:14 IST
ಅಕ್ಷರ ಗಾತ್ರ

ಮಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಯಾವುದೇ ಖಾಸಗಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಮಾರಕವಲ್ಲ. ಅದು ಪೂರಕವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.

ಇಲ್ಲಿನ ಶಕ್ತಿನಗರದ ಶಕ್ತಿ ವಸತಿಯುತ ಶಾಲೆ ಮತ್ತು ಶಕ್ತಿ ಪದವಿಪೂರ್ವ ಕಾಲೇಜಿನ ಅಧ್ಯಾಪಕರಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಈ ನೀತಿಯಿಂದ ಸಾಧ್ಯವಾಗಲಿದೆ ಎಂದರು.

ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವುದು ಆತಂಕಕಾರಿ ವಿಷಯ. ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಇಸ್ರೊ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕರಡನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ತಿಳಿಸಿದರು.

ಈ ದೇಶದಲ್ಲಿ ಭಾರತೀಯತೆಯ ಶಿಕ್ಷಣವನ್ನು ಜಾರಿಗೆ ತರಬೇಕು. ಆ ಶಿಕ್ಷಣದಲ್ಲಿ ಕೌಶಲವೂ ಸೇರಿರಬೇಕು ಎಂಬುದು ಸಮಿತಿಯ ಸಲಹೆ. ಒಂದು ಮಗು ತನ್ನ ಮೂರನೇ ವರ್ಷದಲ್ಲಿ ಶಿಕ್ಷಣವನ್ನು ಪಡೆಯಲು ಶಾಲೆಗೆ ಹೋಗಬೇಕು. ಆ ಮಗು ಒಂದು ವಸ್ತುವನ್ನು ನೋಡುತ್ತ ಶಿಕ್ಷಣ ಪಡೆಯಬೇಕು. ಈ ಶಿಕ್ಷಣವನ್ನು ನೀಡಬೇಕಾದ ಶಿಕ್ಷಕರು ಬದಲಾಗಬೇಕು. ಅದಕ್ಕಾಗಿ ನಾಲ್ಕು ವರ್ಷದ ಬಿಇಡಿ ಶಿಕ್ಷಣವನ್ನು ಪರಿಚಯಿಸಲು ಕರಡು ಪ್ರತಿಯಲ್ಲಿ ಸೂಚಿಸಲಾಗಿದೆ. ಮಗುವಿಗೆ ಜೀವನ ನಡೆಸಲು ಬೇಕಾಗಿರುವ ಕೌಶಲವನ್ನು ಶಿಕ್ಷಕರು ಕಲಿಸಿ ಕೊಡುವ ನಿಟ್ಟಿನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹಲವು ಕ್ರಮಗಳನ್ನು ಶಿಫಾರಸು ಮಾಡಿದೆ ಎಂದು ವಿವರಿಸಿದರು.

ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಸ್ವಯಂ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಿದೆ. ದೇಶ ಪ್ರಗತಿಯತ್ತ ಸಾಗಲಿದೆ ಎಂದ ಅವರು, ಈಗಾಗಲೇ ದೇಶದಲ್ಲಿ 2 ಲಕ್ಷ ಜನರು ಈ ಕರಡಿನಲ್ಲಿ ಅನೇಕ ಹೊಸ ವಿಷಯವನ್ನು ಸೇರಿಸುವ ಕುರಿತು ಸಲಹೆಗಳನ್ನು ಕಳುಹಿಸಿದ್ದಾರೆ. ಇದನ್ನು ನೋಡಿದರೆ, ದೇಶದಲ್ಲಿ ಇಂತಹ ರಾಷ್ಟ್ರೀಯ ಶಿಕ್ಷಣ ನೀತಿಯ ಅವಶ್ಯಕತೆಯಿದೆ ಎಂಬುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಸ್ಥಾಪಕ ಕೆ.ಸಿ ನಾಯಕ್, ಟ್ರಸ್ಟಿ ಮುರಳೀಧರ್ ನಾಯಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್., ಶಕ್ತಿ ವಸತಿಯುತ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಅಧ್ಯಾಪಕರು ಭಾಗವಹಿಸಿದ್ದರು. ಉಪನ್ಯಾಸಕಿ ಶಿಲ್ಪಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT