ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆಗೆ ಮಂಗಳೂರು ವಿವಿ ಘಟಕ ಕಾಲೇಜು: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭ

Last Updated 29 ಆಗಸ್ಟ್ 2021, 3:59 IST
ಅಕ್ಷರ ಗಾತ್ರ

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜು ಮೂಡುಬಿದಿರೆಗೆ ಮಂಜೂರಾಗಿದ್ದು, ಮೂಡುಬಿದಿರೆ ಜನತೆಯ ಎರಡು ದಶಕಗಳ ಕನಸು ಈಡೇರಿದಂತಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಬನ್ನಡ್ಕದ ಪಾಡ್ಯಾರು ಪ್ರಾಥಮಿಕ ಶಾಲೆ ಆವರಣದ ಕಟ್ಟಡದಲ್ಲಿ ಕಾಲೇಜು ಆರಂಭಗೊಳ್ಳಲಿದೆ. ಶುಕ್ರವಾರ ನಡೆದ ಮಂಗಳೂರು ವಿ.ವಿ. ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮಂಗಳೂರು ವಿವಿಯ ವ್ಯಾಪ್ತಿ ಯೊಳಗೆ ಈಗಾಗಲೇ ಮಂಗಳೂರು ವಿ.ವಿ. ಕ್ಯಾಂಪಸ್ ಕಾಲೇಜು, ಮಡಿ ಕೇರಿಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ, ಹಂಪನಕಟ್ಟೆಯ ವಿ.ವಿ. ಕಾಲೇಜು, ಸಂಧ್ಯಾ ವಿವಿ ಕಾಲೇಜು ಹಾಗೂ ನೆಲ್ಯಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗ ಹೊಸದಾಗಿ ಮೂಡುಬಿದಿರೆ ಘಟಕ ಕಾಲೇಜು ಸೇರ್ಪಡೆಗೊಂಡಿದೆ.

ಪ್ರಾರಂಭದಲ್ಲಿ ಮೂರು ಕೋರ್ಸ್‌

ಪ್ರಚಲಿತ ಹೆಚ್ಚು ಬೇಡಿಕೆ ಇರುವ ಬಿ.ಕಾಂ. ಬಿ.ಬಿ.ಎಂ. ಹಾಗೂ ಬಿ.ಸಿ.ಎ. ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ. ಪ್ರತಿ ಕೋರ್ಸ್‌ಗೆ ತಲಾ 60 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಲ್ಯಾಬ್ ವ್ಯವಸ್ಥೆಯನ್ನು ಮಾಡಿ ಭವಿಷ್ಯದಲ್ಲಿ ಬಿಎಸ್ಸಿ ಕೋರ್ಸ್ ಆರಂಭಿಸಲು ಚಿಂತನೆ ನಡೆದಿದೆ.

ಶೀಘ್ರದಲ್ಲೆ ತಾತ್ಕಾಲಿಕ ವ್ಯವಸ್ಥೆ

ಬನ್ನಡ್ಕದ ಶಾಲಾ ಆವರಣದಲ್ಲಿರುವ ಹಳೆ ಕಟ್ಟಡದ ದುರಸ್ತಿ ಕಾರ್ಯ ಸೋಮವಾರದಿಂದ ಆರಂಭಗೊಳ್ಳಲಿದೆ. ಶೀಘ್ರದಲ್ಲೇ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆಯಲಿದೆ.

ಮೂಡುಬಿದಿರೆಯಲ್ಲಿ ಸದ್ಯ ಮೂರು ಖಾಸಗಿ ಪದವಿ ಕಾಲೇಜುಗಳಿವೆ. ಬಡವರ್ಗದ ವಿದ್ಯಾರ್ಥಿಗಳು ಸರ್ಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ದೂರದ ವೇಣೂರು, ಸಿದ್ದಕಟ್ಟೆ ಅಥವಾ ಕಾರ್ಕಳಕ್ಕೆ ಹೋಗಬೇಕಾಗುತ್ತದೆ. ಇನ್ನು ಮುಂದೆ ಇದೇ ಊರಲ್ಲಿ ಪದವಿ ಓದುವ ಅವಕಾಶ ಬಡವಿದ್ಯಾರ್ಥಿಗಳಿಗೆ ಲಭಿಸಲಿದೆ.

ಮಾತು ಉಳಿಸಿದ ಶಾಸಕರು

‘ನಾನು ಶಾಸಕನಾಗಿ ಆಯ್ಕೆಯಾದಲ್ಲಿ ಮೂಡುಬಿದಿರೆಗೆ ಸರ್ಕಾರಿ ಕಾಲೇಜು ಮಂಜೂರು ಮಾಡುತ್ತೇನೆ ಎಂದು ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ವಿಶೇಷ ಸಹಕಾರ ನೀಡಿದ್ದಾರೆ. ಪದವಿ ಕಾಲೇಜು ಇಲ್ಲಿನ ಜನರ ಬಹಳ ವರ್ಷಗಳ ಕನಸು ಕೂಡ ಆಗಿದೆ. ಕಾಲೇಜಿನ ಹೊಸಕಟ್ಟಡಕ್ಕೆ ಜಾಗ ಗುರುತಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಮಾಧ್ಯಮಕ್ಕೆ ತಿಳಿಸಿದರು.

ಅಳಿಯೂರಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರಾತಿಗೆ ಪ್ರಕ್ರಿಯೆ ನಡೆಯುತ್ತಿದ್ದು, ಈ ವರ್ಷ ಇಲ್ಲದಿದ್ದಲ್ಲಿ ಮುಂದಿನ ವರ್ಷ ಪ್ರಾರಂಭವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT