ನಿವೇಶನ ಮಂಜೂರಾತಿ ಸುತ್ತೋಲೆ ವಾಪಸ್‌ಗೆ ಆಗ್ರಹ

7
ಬೀದಿಗಿಳಿದು ಹೋರಾಡುತ್ತೇವೆ– ಕೋಟ ಶ್ರೀನಿವಾಸ ಪೂಜಾರಿ

ನಿವೇಶನ ಮಂಜೂರಾತಿ ಸುತ್ತೋಲೆ ವಾಪಸ್‌ಗೆ ಆಗ್ರಹ

Published:
Updated:

ಮಂಗಳೂರು: ಪರಿಭಾವಿತ (ಡೀಮ್ಡ್) ಅರಣ್ಯ, ಕುಮ್ಕಿ, ಗೋಮಾಳ ಮತ್ತು ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿರುವ ಜಮೀನಿನಲ್ಲಿ ಮನೆ ಕಟ್ಟಿಕೊಂಡವರು 94ಸಿ ಮತ್ತು 94ಸಿಸಿ ಅಡಿ ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸುವಂತೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದು, ತಕ್ಷಣ ಅದನ್ನು ವಾಪಸ್ ಪಡೆಯಬೇಕು ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಂದಾಯ ಸಚಿವರ ಸುತ್ತೋಲೆಯಿಂದಾಗಿ ಲಕ್ಷಾಂತರ ಮಂದಿ ಬಡವರು ನಿವೇಶನ ಹಕ್ಕುಪತ್ರದಿಂದ ವಂಚಿತರಾಗಲಿದ್ದಾರೆ. ತಕ್ಷಣವೇ ಸುತ್ತೋಲೆ ಹಿಂದಕ್ಕೆ ಪಡೆಯದಿದ್ದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 94ಸಿ ಅಡಿಯಲ್ಲಿ ಹಕ್ಕುಪತ್ರ ಕೋರಿ 98,593 ಅರ್ಜಿಗಳು ಬಂದಿದ್ದವು. 41,981 ಅರ್ಜಿಗಳನ್ನು ತಿರಸ್ಕರಿಸಿದ್ದು, 15,586 ಅರ್ಜಿಗಳು ಬಾಕಿ ಇವೆ. 41,000 ಮಂದಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ. 94ಸಿಸಿ ಅಡಿಯಲ್ಲಿ 36,689 ಅರ್ಜಿಗಳು ಬಂದಿದ್ದವು. 10,007 ಅರ್ಜಿಗಳನ್ನು ತಿರಸ್ಕರಿಸಿದ್ದು, 10,097 ಅರ್ಜಿಗಳು ಬಾಕಿ ಇವೆ. 16,585 ಅರ್ಜಿದಾರರಿಗೆ ಮಾತ್ರ ನಿವೇಶನ ಮಂಜೂರು ಮಾಡಲಾಗಿದೆ. ಅಂತಹ ಪ್ರಕರಣಗಳಲ್ಲೂ ಸಂಪೂರ್ಣವಾಗಿ ಹಕ್ಕುಪತ್ರ ವಿತರಿಸಿಲ್ಲ ಎಂದು ಆರೋಪಿಸಿದರು.

1.13 ಲಕ್ಷ ಬಗರ್‌ ಹುಕುಂ ಸಾಗುವಳಿದಾರರು ಹಕ್ಕುಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 61,000 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇದು ಈ ಸರ್ಕಾರಕ್ಕೆ ಬಡವರು ಮತ್ತು ರೈತರ ಮೇಲೆ ಇರುವ ಕಾಳಜಿಗೆ ಸಾಕ್ಷಿ. ಜನವಸತಿ ಮತ್ತು ಸರ್ಕಾರಿ ಕಟ್ಟಡಗಳಿರುವ ಪ್ರದೇಶವನ್ನು ಡೀಮ್ಡ್‌ ಅರಣ್ಯದ ವ್ಯಾಪ್ತಿಯಿಂದ ಕೈಬಿಡುವಂತೆ ಜಿಲ್ಲಾಧಿಕಾರಿಗಳು ಶಿಫಾರಸು ಮಾಡಿದ್ದರೂ, ಆದೇಶ ಹೊರಡಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿಗೆ ನಿರಾಸಕ್ತಿ: ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ನಿರ್ಮಾಣ ಯೋಜನೆಯನ್ನು ರಾಜ್ಯ ಸರ್ಕಾರ ವಿಫಲಗೊಳಿಸುತ್ತಿದೆ. ಮಂಗಳೂರಿನಲ್ಲಿ ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕವಾದ ವ್ಯವಸ್ಥಾಪಕ ನಿರ್ದೇಶಕರನ್ನೇ ನೇಮಿಸಿಲ್ಲ. ₹ 215 ಕೋಟಿ ಅನುದಾನ ಬಿಡುಗಡೆ ಆಗಿದ್ದರೆ, ₹ 43 ಲಕ್ಷ ಮೊತ್ತದ ಎರಡು ಕಾಮಗಾರಿಗಳು ಮಾತ್ರ ಆರಂಭವಾಗಿವೆ. ರಾಜ್ಯ ಸರ್ಕಾರದ ನಿರಾಸಕ್ತಿಯೇ ಇದಕ್ಕೆ ಕಾರಣ ಎಂದು ಟೀಕಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 102 ಶುದ್ಧ ಕುಡಿಯುವ ನೀರು ಪೂರೈಕೆ ಘಟಕಗಳನ್ನು ಸ್ಥಾಪಿಸಲಾಗಿದೆ. 45 ಘಟಕಗಳು ಕೆಟ್ಟು ನಿಂತಿವೆ. ಗಂಗಾ ಕಲ್ಯಾಣ ಯೋಜನೆಯಡಿ ನಾಲ್ಕು ವರ್ಷಗಳಲ್ಲಿ 395 ಕೊಳವೆ ಬಾವಿಗಳನ್ನು ಕೊರೆಯಲಾಗಿತ್ತು. 250 ಕೊಳವೆ ಬಾವಿಗಳಿಗೆ ಇದುವೆರಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ವಾಜಪೇಯಿ ನಗರ ವಸತಿ ಯೋಜನೆಯಡಿ 2016–17ರಲ್ಲಿ 1,785 ಮನೆಗಳ ನಿರ್ಮಾಣದ ಗುರಿ ಇತ್ತು. 170 ಮನೆಗಳ ನಿರ್ಮಾಣ ಆಗಿದೆ. 2017–18ರಲ್ಲಿ 1,407 ಮನೆ ನಿರ್ಮಾಣದ ಗುರಿ ಇದ್ದರೆ, 570 ಮನೆಗಳ ಕಾಮಗಾರಿ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ನೀಡುವ ಅನುದಾನದ ಬಳಕೆ ಸರಿಯಾಗಿ ಆಗುತ್ತಿಲ್ಲ. ಸಾಮಾನ್ಯ ಜನರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಎರಡು ತಿಂಗಳೊಳಗೆ ಪರಿಸ್ಥಿತಿ ಸುಧಾರಿಸದಿದ್ದರೆ ಬಿಜೆಪಿ ರಾಜ್ಯದಾದ್ಯಂತ ಹೋರಾಟ ಆರಂಭಿಸಲಿದೆ ಎಂದರು.

ಶಾಸಕ ಡಿ.ವೇದವ್ಯಾಸ ಕಾಮತ್, ಬಿಜೆಪಿ ಮುಖಡರಾದ ರವಿಶಂಕರ ಮಿಜಾರ್, ಸಂಜಯ ಪ್ರಭು, ದಿನೇಶ್ ಅಮ್ಟೂರು ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !