ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯ ಒಳನುಗ್ಗಿ ವಿದ್ಯಾರ್ಥಿಗಳನ್ನು ರಕ್ಷಿಸುತ್ತಿದ್ದೆ: ಟ್ರಂಪ್

Last Updated 27 ಫೆಬ್ರುವರಿ 2018, 20:02 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಫ್ಲಾರಿಡಾದ ಶಾಲೆಯಲ್ಲಿ ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ನಾನೇನಾದರೂ ಇದ್ದಿದ್ದರೆ ಶಸ್ತ್ರಾಸ್ತ್ರಗಳು ಇಲ್ಲದಿದ್ದರೂ ಶಾಲೆಯ ಒಳನುಗ್ಗಿ ವಿದ್ಯಾರ್ಥಿಗಳನ್ನು ರಕ್ಷಿಸುತ್ತಿದ್ದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಶ್ವೇತಭವನದಲ್ಲಿ ನಡೆದ ಗವರ್ನರ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ಶಾಲೆಯ ಭದ್ರತೆಗೆ ನಿಯೋಜಿಸಿದ್ದ ಶಸ್ತ್ರಸಹಿತ ಉಪ ಶೆರಿಫ್‌ಗಳು, ವಿದ್ಯಾರ್ಥಿಯೊಬ್ಬ ನಡೆಸಿದ ದಾಳಿಯನ್ನು ಸಮರ್ಥವಾಗಿ ಎದುರಿಸದೆ ಇರುವುದು ನಾಚಿಕೆಗೇಡಿನ ವಿಷಯ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದಾಳಿಯ ಸಂದರ್ಭದಲ್ಲಿ ಶಾಲೆಯ ಹೊರಗೆ ನಿಂತಿದ್ದ ಸಶಸ್ತ್ರಸಹಿತ ಸಂಪನ್ಮೂಲ ಅಧಿಕಾರಿಗೆ ಧೈರ್ಯವಿಲ್ಲ ಎಂದು ಟೀಕಿಸಿದ್ದಾರೆ.

ಇಂತಹ ದಾಳಿಗಳು ಆಗುತ್ತವೆ ಎಂದು ಶಾಲೆಗಳು ನೂರಾರು ಮಂದಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಆಗುವುದಿಲ್ಲ. ಸುಲಭವಾಗಿ ದಾಳಿಗೆ ಒಳಗಾಗದಂತೆ ಶಾಲೆಗಳು ಸುಧಾರಣಾ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.

‘ಮಾನಸಿಕ ಆರೋಗ್ಯ ಅತ್ಯಂತ ಮುಖ್ಯವಾದುದು. ದಾಳಿ ನಡೆಸಿದ ವಿದ್ಯಾರ್ಥಿ ಮಾನಸಿಕ ಅಸ್ವಸ್ಥನಾಗಿದ್ದ. ಆತನ ಬಳಿ 39 ಕೆಂಪು ಧ್ವಜಗಳು ಇದ್ದವು. ಈ ವಿಷಯ ಪೋಷಕರಿಗೆ ತಿಳಿದಿತ್ತು. ಆದರೆ ಅವರು ಈ ಕುರಿತು ಯಾವ ಕ್ರಮವನ್ನೂ ಕೈಗೊಂಡಿಲ್ಲ’ ಎಂದು ತಿಳಿಸಿದ್ದಾರೆ.

ಪಿಸ್ತೂಲ್ ಖರೀದಿಸಲು ಕನಿಷ್ಠ ವಯೋಮಿತಿ ಹೆಚ್ಚಿಸುವುದು, ಶಾಲೆಗಳಿಗೆ ಪಿಸ್ತೂಲ್ ಬಳಸಲು ತರಬೇತಿ ಪಡೆದ ಪ್ರಮಾಣೀಕೃತ ವ್ಯಕ್ತಿಗಳ ನೇಮಕ, ಇನ್ನಷ್ಟು ಮಾನಸಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಮುಂತಾದ ಕ್ರಮಗಳ ಬಗ್ಗೆ ಟ್ರಂಪ್ ಚರ್ಚಿಸಿದ್ದಾರೆ.

ಫೆಬ್ರುವರಿ 14ರಂದು ಫ್ಲಾರಿಡಾದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ 17 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT