ಮಂಗಳೂರಿನಲ್ಲಿ 13ರಂದು ಪ್ರಧಾನಿ ನರೇಂದ್ರ ಮೋದಿ ಪ್ರಚಾರ

ಮಂಗಳವಾರ, ಏಪ್ರಿಲ್ 23, 2019
25 °C
ಬಿಗಿ ಬಂದೋಬಸ್ತ್; ಸಂಚಾರದಲ್ಲಿ ಬದಲಾವಣೆ

ಮಂಗಳೂರಿನಲ್ಲಿ 13ರಂದು ಪ್ರಧಾನಿ ನರೇಂದ್ರ ಮೋದಿ ಪ್ರಚಾರ

Published:
Updated:
Prajavani

ಮಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇದೇ 13ರಂದು ನಗರಕ್ಕೆ ಬರಲಿದ್ದು, ಅಂದು ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ವಾಹನಗಳ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಐವರು ಎಸ್ಪಿ, ಡಿಸಿಪಿ, 10 ಮಂದಿ ಡಿವೈಎಸ್ಪಿ, ಎಸಿಪಿ, 36 ಪೊಲೀಸ್ ಇನ್‌ಸ್ಪೆಕ್ಟರ್, 67 ಸಬ್‌ ಇನ್‌ಸ್ಪೆಕ್ಟರ್‌, 147 ಎಎಸ್‌ಐ, 1,207 ಹೆಡ್ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್‌ ಸೇರಿದಂತೆ ಒಟ್ಟು 1,472 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 92 ಗೃಹರಕ್ಷಕರನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ.

5 ಕೆಎಸ್‌ಆರ್‌ಪಿ ತುಕಡಿ, 19 ಸಿಎಆರ್ ತುಕಡಿ ಹಾಗೂ 2 ಸಿಆರ್‌ಪಿಎಫ್ ತುಕಡಿಗಳ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಪ್ರಧಾನಿ ಸಂಚರಿಸುವ ಸ್ಥಳಗಳ ತಪಾಸಣೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮ ನಡೆಯುವ ನೆಹರೂ ಮೈದಾನದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಗರದ ಹೋಟೆಲ್, ಲಾಡ್ಜ್‌ಗಳಲ್ಲಿ ತಪಾಸಣೆ ನಡೆಸಿ, ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಪಾರ್ಕಿಂಗ್ ವ್ಯವಸ್ಥೆ: ಇದೇ 13ರಂದು ಬೆಳಿಗ್ಗೆ 8 ಗಂಟೆಯಿಂದ ಪ್ರಧಾನಿ ನರೇಂದ್ರ ಮೋದಿ ನಿರ್ಗಮಿಸುವವರೆಗೆ ಬಜ್ಪೆ ವಿಮಾನ ನಿಲ್ದಾಣದಿಂದ ನಗರದ ನೆಹರೂ ಮೈದಾನದವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಪ್ರಧಾನಿ ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿದೆ.

ಉಡುಪಿ- ಮೂಲ್ಕಿ- ಸುರತ್ಕಲ್ ಹಾಗೂ ಕಟೀಲು- ಬಜ್ಪೆ- ಕಾವೂರು- ಕೂಳೂರು- ಕೊಟ್ಟಾರಚೌಕಿ ಮೂಲಕ ನಗರ ಪ್ರವೇಶಿಸುವ ವಾಹನಗಳ ಪೈಕಿ ಬಸ್‌ಗಳಿಗೆ ಕರಾವಳಿ ಉತ್ಸವ ಮೈದಾನ, ಉರ್ವ ಮಾರ್ಕೆಟ್ ಮೈದಾನ, ಲೇಡಿ
ಹಿಲ್ ಚರ್ಚ್ ಮೈದಾನ ಮತ್ತು ಕೂಳೂರು ಗೋಲ್ಡ್ ಫಿಂಚ್ ಸಿಟಿ ಗ್ರೌಂಡ್‌
ನಲ್ಲಿ ಹಾಗೂ ಕಾರುಗಳಿಗೆ ಮಣ್ಣಗುಡ್ಡೆ ಕೆನರಾ ಹೈಸ್ಕೂಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಕಾರ್ಕಳ- ಮೂಡುಬಿದಿರೆ- ಸುಳ್ಯ- ಪುತ್ತೂರು- ಬೆಳ್ತಂಗಡಿ- ಬಂಟ್ವಾಳ- ಬಿ.ಸಿ.ರೋಡ್‌ನಿಂದ ನಂತೂರು ಮೂಲಕ ನಗರ ಪ್ರವೇಶಿಸುವ ವಾಹನಗಳ ಪೈಕಿ ಬಸ್‌ಗಳಿಗೆ ಬಂಟ್ಸ್ ಹಾಸ್ಟೆಲ್‌ನ ರಾಮಕೃಷ್ಣ ಶಾಲಾ ಮೈದಾನ, ಮಲ್ಲಿಕಟ್ಟೆಯ ಕದ್ರಿ ಮೈದಾನ, ಪದವು ಪ್ರೌಢಶಾಲಾ ಮೈದಾನ ಮತ್ತು ಆಗ್ನೆಸ್ ಶಾಲಾ ಮೈದಾನ ಹಾಗೂ ಕಾರುಗಳಿಗೆ ಬಲ್ಮಠದ ಶಾಂತಿ ನಿಲಯ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಸರಗೋಡು, ಉಪ್ಪಳ, ಉಳ್ಳಾಲ, ಕೊಣಾಜೆ, ದೇರಳಕಟ್ಟೆ, ತೊಕ್ಕೊಟ್ಟಿನಿಂದ ಪಂಪ್‌ವೆಲ್- ಕಂಕನಾಡಿ- ಮಂಗಳಾದೇವಿ ಮೂಲಕ ನಗರ ಪ್ರವೇಶಿಸುವ ವಾಹನಗಳ ಪೈಕಿ ಬಸ್‌ಗಳಿಗೆ ಎಮ್ಮೆಕೆರೆ ಮೈದಾನ ಮತ್ತು ನಂದಿಗುಡ್ಡೆಯ ವಾಮನ ನಾಯ್ಕೆ ಮೈದಾನ ಹಾಗೂ ಕಾರುಗಳಿಗೆ ಮೋರ್ಗನ್ಸ್ ಗೇಟ್‌ನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !