ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಹುದ್ದೆಗಳಿಗೆ ಮೊಗವೀರ ಮುಖಂಡರ ರಾಜೀನಾಮೆ

Last Updated 29 ಜುಲೈ 2022, 14:19 IST
ಅಕ್ಷರ ಗಾತ್ರ

ಮಂಗಳೂರು: ಮೊಗವೀರ ಸಮುದಾಯದವರಿಗೆ ನಾಲ್ಕು ದಶಕಗಳಿಂದ ಯಾವ ಸ್ಥಾನವನ್ನೂ ನೀಡಲಿಲ್ಲವೆಂದು ಆರೋಪಿಸಿ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ರಾಮಚಂದರ್ ಬೈಕಂಪಾಡಿ ಸೇರಿದಂತೆ ಪ್ರಮುಖರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮಚಂದರ್‌ ಅವರು ‘ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮೀನುಗಾರ ಪ್ರಕೋಷ್ಠದ ಅಧ್ಯಕ್ಷ ಗಿರೀಶ್ ಕರ್ಕೇರ ತಣ್ಣೀರುಬಾವಿ ಮತ್ತು 9 ಮಂದಿ ಸದಸ್ಯರು, ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಪ್ರೇಮನಾಥ ಉಳ್ಳಾಲ, ಪ್ರಕೋಷ್ಠದಲ್ಲಿ ಅಧ್ಯಕ್ಷರಾಗಿದ್ದ ನವೀನ್ ತಣ್ಣೀರುಬಾವಿ, ಶೋಭೇಂದ್ರ ಸಸಿಹಿತ್ಲು, ಯಶವಂತ ಉಳ್ಳಾಲ, ನಗರಸಭಾ ಸದಸ್ಯ ಬಾಬು ಬಂಗೇರ ಉಳ್ಳಾಲ, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಹುದ್ದೆಯಲ್ಲಿರುವವರು ರಾಜೀನಾಮೆ ಸಲ್ಲಿಸಿದ್ದಾರೆ. ನಾನು ರಾಜ್ಯೋತ್ಸವ ಪ್ರಶಸ್ತಿ ಹಿಂದಿರುಗಿಸಿದ್ದೇನೆ’ ಎಂದು ತಿಳಿಸಿದರು.

‘ಮೊಗವೀರ ಸಮುದಾಯಕ್ಕೆ ಬಿಜೆಪಿ ನಿರಂತರವಾಗಿ ಮೋಸ ಮಾಡುತ್ತ ಬಂದಿದೆ. ರಾಜ್ಯ ಮೀನುಗಾರರ ನಿಗಮಕ್ಕೆ ಬೇರೆ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈ ಕುರಿತು ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಜಾಗೃತಿ ಮೂಡಿಸಲಾಗುವುದು. ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಿ ಸಮುದಾಯದ ಶಕ್ತಿಯನ್ನು ಸಾಬೀತು ಮಾಡಲಾಗುವುದು. ಗಂಗಾಮತಸ್ಥ ಸಮುದಾಯದ ರಾಜ್ಯ ಘಟಕ, ರಾಜ್ಯ ಬೆಸ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಮಹಾಜನ ಸಂಘು, ಉತ್ತರ ಕನ್ನಡದ ಖಾರ್ವಿ ಮತ್ತು ಹರಿಕಾಂತ ಸಮುದಾಯದ ಮುಖಂಡರು ಇದಕ್ಕೆ ಬೆಂಬಲ ಘೋಷಿಸಿದ್ದಾರೆ’ ಎಂದು ಅವರು ವಿವರಿಸಿದರು.

‘2005ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ನನಗೆ ಟಿಕೆಟ್ ನೀಡಿ ಕೊನೆಯ ಕ್ಷಣದಲ್ಲಿ ಮನೋರಮಾ ಮಧ್ವರಾಜ್‌ ಅವರನ್ನು ಕರೆತಂದರು. ಅಣು ಒಪ್ಪಂದದಲ್ಲಿ ₹ 73 ಕೋಟಿ ಲಂಚ ಪಡೆದು ಮನೋರಮಾ ಮತ್ತು ಪ್ರಮೋದ್ ಮಧ್ವರಾಜ್ ದ್ರೋಹ ಬಗೆದರು. ಪಕ್ಷಕ್ಕಾಗಿ 30 ವರ್ಷಗಳಿಂದ ದುಡಿಯುತ್ತಿರುವ ಯಶ್‌ಪಾಲ್ ಸುವರ್ಣ, ಲಾಲಜಿ ಮೆಂಡನ್ ಮತ್ತು ನಯನಾ ಗಣೇಶ್ ಅವರಿಗೆ ಬಿಜೆಪಿ ದ್ರೋಹ ಬಗೆಯುತ್ತಿದೆ. ಕಾಪು ಕ್ಷೇತ್ರವನ್ನು ಅನ್ಯರ ಪಾಲಾಗಿಸಲು ಪಕ್ಷದ ಪ್ರಮುಖ ಮುಖಂಡರೇ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಅವರು ದೂರಿದರು.

ಗಿರೀಶ್ ಕರ್ಕೇರ, ಪ್ರೇಮನಾಥ ಉಳ್ಳಾಲ, ನವೀನ್‌ ತಣ್ಣೀರುಬಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT