‘ಸಂಸದರನ್ನು ಟೀಕಿಸುವ ನೈತಿಕತೆ ರೈಗಿಲ್ಲ’

7

‘ಸಂಸದರನ್ನು ಟೀಕಿಸುವ ನೈತಿಕತೆ ರೈಗಿಲ್ಲ’

Published:
Updated:

ಮಂಗಳೂರು: ಸಂಸದ ನಳಿನ್‌ಕುಮಾರ್‌ ಅವರನ್ನು ಸೋಮಾರಿ ಸಂಸದ ಎಂದು ಟೀಕಿಸಿರುವ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಹರಿಕೃಷ್ಣ ಬಂಟ್ವಾಳ, ನಳಿನ್‌ಕುಮಾರ್‌ ಅವರನ್ನು ಟೀಕಿಸುವ ನೈತಿಕತೆ ರಮಾನಾಥ ರೈ ಅವರಿಗಿಲ್ಲ ಎಂದು ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಿನಿಂದ ಹತಾಶರಾಗಿರುವ ರಮಾನಾಥ ರೈ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ರಮಾನಾಥ ರೈ ಅವರು ಒಳ್ಳೆಯ ಕೆಲಸ ಮಾಡಿದ್ದರೆ, ಮತದಾರರನ್ನು ಅವರನ್ನು ತಿರಸ್ಕರಿಸಿದ್ದು ಏಕೆ? ಒಳ್ಳೆಯ ಕೆಲಸಗಳು ಅವರ ಕೈ ಹಿಡಿಬೇಕಿತ್ತು. ಆದರೆ, ಮತದಾರರು 16 ಸಾವಿರ ಮತಗಳ ಅಂತರದಿಂದ ಅವರನ್ನು ಸೋಲಿಸಿದ್ದಾರೆ ಎಂದು ಹೇಳಿದರು.

ಮರಳು ಗಣಿಗಾರಿಕೆ, ಮರ ಮಾಫಿಯಾ, ವರ್ಗಾವಣೆ ದಂಧೆಗಳೇ ರಮಾನಾಥ ರೈ ಅವರ ಒಳ್ಳೆಯ ಕೆಲಸಗಳು ಎಂದು ಟೀಕಿಸಿದ ಅವರು, ರಮಾನಾಥ ರೈ ಅವರ ಆಪ್ತರಾಗಿರುವ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು ಸರ್ಕಾರಿ ಜಮೀನಿನಲ್ಲಿ ಯಾವುದೇ ಅನುಮತಿ ಇಲ್ಲದೇ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಹೈಕೋರ್ಟ್‌ ಆದೇಶದ ನಂತರ ಕೆಲ ದಿನಗಳ ಹಿಂದಷ್ಟೇ ಅಧಿಕಾರಿಗಳು ಈ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ಪಡೆಯಲು ರಮಾನಾಥ ರೈ ಉತ್ಸುಕರಾಗಿದ್ದಾರೆ. ಅದಕ್ಕಾಗಿಯೇ ಅಧಿಕಾರದಲ್ಲಿ ಇಲ್ಲದೇ ಇದ್ದರೂ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ರಾಜಕೀಯದಲ್ಲಿ ಇರುವುದನ್ನು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇನ್ನೂ ರಮಾನಾಥ ರೈ ಅವರು ಯಾವುದೇ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಅವಧಿ ಸುವರ್ಣ ಯುಗ ಎಂದು ರಮಾನಾಥ ರೈ ಹೇಳಿದ್ದಾರೆ. ಆದರೆ, ಈ ಅವಧಿಯಲ್ಲಿ ಹಿಂದೂಗಳ ಕೊಲೆ, ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ಯಾರೂ ನೋಡಿರದಂತಹ ಕೆಟ್ಟ ಸರ್ಕಾರವನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯ ಪ್ರೇಮಾನಂದ ಶೆಟ್ಟಿ, ಜಿತೇಂದ್ರ ಕೊಟ್ಟಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !