ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕತೆ ನಿಮ್ಮೊಳಗಿಂದ ಬರಲಿ: ವಿವೇಕ ರೈ

ಮಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ‍‍ಪತ್ರಕರ್ತರ ಸಂಘದಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ
Last Updated 19 ನವೆಂಬರ್ 2019, 13:32 IST
ಅಕ್ಷರ ಗಾತ್ರ

ಮಂಗಳೂರು: ‘ನೈತಿಕತೆಯು ನಮ್ಮೊಳಗಿಂದ ಬರಬೇಕು. ಇತರರಲ್ಲಿ ಹುಡುಕುವುದಲ್ಲ’ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಸಲಹೆ ನೀಡಿದರು.

ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮ
ವಾರ ನಡೆದ ‘ರಾಷ್ಟ್ರೀಯ ಪತ್ರಿಕಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಯುವ ಪತ್ರಕರ್ತರಲ್ಲಿ ಸಂಶೋಧನೆ, ಓದು ಹೆಚ್ಚಾಗಬೇಕು. ಗ್ರಂಥಾಲಯ ಆಪ್ತವಾಗಬೇಕು. ಸಂಶೋಧನಾತ್ಮಕ ವರದಿಗಳನ್ನು ಬರೆಯಬೇಕು. ಹಿರಿಯರ ಅನುಭವಗಳಿಂದ ಕಲಿಯಬೇಕು. ಈ ವೃತ್ತಿಯಲ್ಲಿ ಸಂಬಂಧಗಳೂ ಮುಖ್ಯವಾಗುತ್ತವೆ’ ಎಂದರು.

‘ಭಾಷೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಿ. ಪ್ರತಿನಿತ್ಯ ಪತ್ರಿಕೆ ಓದಿ’ ಎಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.

‘ಸುದ್ದಿ, ಮಾಹಿತಿ, ಜ್ಞಾನ, ತಿಳಿವಳಿಕೆ ನಡುವಿನ ಅಂತರ ಕಡಿಮೆಯಾಗುತ್ತಿದೆ’ ಎಂದರು.

‘ಪತ್ರಿಕೆಯಲ್ಲಿ ಸಂಪಾದಕೀಯವೇ ನನ್ನ ಮೊದಲ ಆಯ್ಕೆ. ಟಿ.ಎಸ್.ರಾಮಚಂದ್ರರಾಯರ ಛೂ ಬಾಣವು ನನಗೆ ಇಂದಿಗೂ ನೆನಪಿದೆ. ಅಂದು, ಪತ್ರಿಕಾ ಬರಹಕ್ಕೆ ಮುಖ್ಯಮಂತ್ರಿಯೂ ನಡುಗುತ್ತಿದ್ದರು. ಸಂಪಾದಕೀಯ ಇಲ್ಲದ ಹಾಗೂ ಗಟ್ಟಿ ಇಲ್ಲದ ಪತ್ರಿಕೆಯ ‘ಹೃದಯ ಇಲ್ಲದ ವ್ಯಕ್ತಿ’ಯ ಹಾಗೆ’ ಎಂದು ವಿಶ್ಲೇಷಿಸಿದರು.

‘ಪತ್ರಿಕೆ ಎಂಬುದು ಸಂಕೀರ್ಣ ರಚನೆಯಾಗಿದ್ದು, ವಿವಿಧ ಅಭಿ
ಪ್ರಾಯ– ಸಾಧ್ಯತೆಗಳು ಒಟ್ಟು ಪತ್ರಿಕೆಯನ್ನು ನಿರ್ಧರಿಸುತ್ತವೆ. ಕನ್ನಡ ಪತ್ರಿಕೋದ್ಯಮವು ಆನ್‌ಲೈನ್‌ನಲ್ಲಿ ಇನ್ನಷ್ಟು ವೇಗವಾಗಿ ಅಪ್‌ಡೇಟ್‌ ಆಗಬೇಕು. ಹವಾಮಾನ್ಯ ವೈಪರೀತ್ಯ, ಪರಿಸರದಲ್ಲಿನ ಬದಲಾವಣೆ, ಜನಜೀವನದ ಬಗೆಗಿನ ಮಾಹಿತಿ ಹೆಚ್ಚಾಗಿ ಬರಬೇಕು’ ಎಂದರು.

ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗ್ಡೆ ಮಾತನಾಡಿ, ‘ಉದ್ಯಮವಾಗಿ ಬದಲಾಗುತ್ತಿರುವ ಪತ್ರಿಕೋದ್ಯಮ ಸಾಕಷ್ಟು ಸವಾಲುಗಳನ್ನು ಎದುರಿ
ಸುತ್ತಿದೆ. ಈ ನಡುವೆಯೂ ಮೌಲ್ಯಗಳನ್ನು ಉಳಿಸಿಕೊಂಡು ಉತ್ತಮ ವರದಿ ನೀಡುವುದು ಪತ್ರಕರ್ತರ ಮುಂದಿರುವ ಸವಾಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ’ ನಂಟು ನೆನಪಿಸಿದ ರೈ

‘ಒಂದು ದಿನ ಅಚ್ಚರಿ ಎನ್ನುವಂತೆ ನಮ್ಮ ಮನೆಗೆ ‘ಪ್ರಜಾವಾಣಿ’ಯ ಎಂ.ಬಿ.ಸಿಂಗ್ ಮತ್ತು ಸೇತೂರಾಂ ಬಂದರು. ತಂದೆಯ ಬಳಿ ಬಂದು, ‘ನೀವು ನಮ್ಮ ಅರೆಕಾಲಿಕ ವರದಿಗಾರರು ಆಗಬೇಕು’ ಎಂದರು. ‘ನಾನು ಎಂಟನೇ ತರಗತಿ ಕಲಿತವನು. ‘ಪ್ರಜಾವಾಣಿ’ ಯಂತಹ ಪತ್ರಿಕೆಗೆ ಹೇಗೆ ವರದಿ ಕಳುಹಿಸಲಿ?’ ಎಂದು ತಂದೆ ಮುಜುಗರ ವ್ಯಕ್ತಪಡಿಸಿದರು. ‘ನಿಮ್ಮ ಬರಹ, ಸಾಮಾಜಿಕ ಕೊಡುಗೆಗಳನ್ನು ನೋಡಿಯೇ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ನೇಮಕಾತಿ ಮಾಡಿಯೇ ಬಿಟ್ಟರು’ ಎಂದು ಪ್ರೊ.ಬಿ.ಎ.ವಿವೇಕ ರೈ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

‘ಆ ಕಾಲದಲ್ಲಿ ಅಂದಿನ ದಿನದ ಪತ್ರಿಕೆ ಅಂದೇ ಸಿಗುವುದೇ ಕಷ್ಟವಾಗಿತ್ತು. ಈ ವಿಚಾರವನ್ನು ತಂದೆಯವರು ನೆಟಕಲ್ಲಪ್ಪ ಗಮನಕ್ಕೆ ತಂದಿದ್ದರು. ತಕ್ಷಣವೇ ಎಲ್ಲ ಅರೆಕಾಲಿಕ ವರದಿಗಾರರಿಗೆ ಪತ್ರಿಕೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಿದರು. ಹೀಗೆ ಎಂಟನೇ ತರಗತಿಯಿಂದಲೇ ನಾನು ‘ಪ್ರಜಾವಾಣಿ’ ಮತ್ತು ಡೆಕ್ಕನ್‌ ಹೆರಾಲ್ಡ್‌’ ಓದಿಕೊಂಡು ಬೆಳೆದೆನು’ ಎಂದರು.

‘ಮಂಗಳೂರಿನ ಜನರು ಕೇವಲ ತಮ್ಮ ಸುತ್ತಲಿನ ಸುದ್ದಿ ತಿಳಿದುಕೊಂಡರೆ ಸಾಲದು. ರಾಜ್ಯ ಸುದ್ದಿ ತಿಳಿದುಕೊಳ್ಳಲು ಸಮಗ್ರವಾಗಿರುವ ಪತ್ರಿಕೆ ಓದಬೇಕು. ನಾನು 1960ರಿಂದ ‘ಪ್ರಜಾವಾಣಿ’ ಓದುತ್ತಿದ್ದೇನೆ. ಈಗಲೂ 8ರಿಂದ 9 ಪತ್ರಿಕೆಗಳನ್ನು ಓದುತ್ತೇನೆ’ ಎಂದು ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT