ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಲಾಕ್‍ಡೌನ್ ಒಂದು ವಾರ ವಿಸ್ತರಣೆ: ಸಭೆಯಲ್ಲಿ ನಿರ್ಧಾರ
Last Updated 12 ಜೂನ್ 2021, 5:21 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ವಿಧಿಸಿರುವ ಕೋವಿಡ್‌ ಕರ್ಫ್ಯೂ (ಲಾಕ್‌ಡೌನ್‌) ಅನ್ನು ಮತ್ತಷ್ಟು ಬಿಗಿಗೊಳಿಸಿ ಸೋಂಕು ತಡೆಗೆ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಅಧಿಕಾರಿಗಳಿಗೆ ಸೂಚಿಸಿದರು.‌

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ರ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ
ಗೊಳಿಸಲು ಹಾಗೂ ಜಾರಿಯಲ್ಲಿರುವ ಲಾಕ್‍ಡೌನ್ ಅವಧಿಯನ್ನು ವಿಸ್ತರಿಸುವ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಸೋಂಕಿನ ಪ್ರಮಾಣವು ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಕಡಿಮೆಯಾಗುವಂತೆ ಅಧಿಕಾರಿಗಳು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕು ಹೆಚ್ಚಿರುವ ಗ್ರಾಮ ಪಂಚಾಯತಿ, ನಗರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ವಿಧಿಸಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಸೋಂಕನ್ನು ಪೂರ್ಣ ಹತೋಟಿಗೆ ತರಬೇಕು. ಸೋಂಕು ಹೊಂದಿರುವವರ ಮನೆಗಳನ್ನು ಸೀಲ್‍ಡೌನ್ ಮಾಡಬೇಕು. 5 ಕ್ಕಿಂತ ಹೆಚ್ಚು ಪ್ರಕರಣಗಳು ಗ್ರಾಮಗಳಲ್ಲಿ ಕಂಡುಬಂದಲ್ಲಿ ಕಂಟೈನ್‍ಮೆಂಟ್ ವಲಯಗಳಾಗಿ ಘೋಷಿಸಬೇಕು ಎಂದು ಸೂಚಿಸಿದರು.

ಕೋವಿಡ್ ದೃಢ ಪ್ರಮಾಣವು ಮಂಗಳೂರು ತಾಲ್ಲೂಕಿನಲ್ಲಿ ಶೇ 15, ಬಂಟ್ವಾಳದಲ್ಲಿ ಶೇ 12, ಬೆಳ್ತಂಗಡಿಯಲ್ಲಿ ಶೇ 24, ಪುತ್ತೂರಿನಲ್ಲಿ ಶೇ 22, ಸುಳ್ಯದಲ್ಲಿ ಶೇ 27 ರಷ್ಟಿದೆ ಎಂದ ಅವರು, ಕೋವಿಡ್ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಬಂಟ್ವಾಳ ತಾಲ್ಲೂಕಿನಲ್ಲಿ ಹಳ್ಳಿಯ ಕಡೆ ವೈದ್ಯರ ನಡೆ ಕಾರ್ಯಕ್ರಮವು ಉತ್ತಮವಾಗಿ ನಡೆಯುತ್ತಿದೆ. ಅದೇ ರೀತಿ ಇತರೆ ತಾಲ್ಲೂಕುಗಳಲ್ಲೂ ಪರಿಣಾಮಕಾರಿಯಾಗಿ ಆಗಬೇಕು ಎಂದು ತಿಳಿಸಿದರು.

ಲಾಕ್‍ಡೌನ್ ಅವಧಿಯಲ್ಲಿ ಬ್ಯಾಂಕ್‌ ಕಾರ್ಯ ಚಟುವಟಿಕೆಗಳು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲು ಅವಕಾಶ ಮಾಡಿಕೊಡಬೇಕು. ಅಗತ್ಯ ವಸ್ತುಗಳ ಖರೀದಿಗೆ ನೀಡಿರುವ ಅವಧಿಯಲ್ಲಿ ಕನ್ನಡಕ ಮಾರಾಟ ಅಂಗಡಿ ಹಾಗೂ ಅವುಗಳ ದುರಸ್ತಿ ಅಂಗಡಿಗಳಿಗೆ, ಗ್ಯಾರೇಜ್‌ ಹಾಗೂ ವಾಹನಗಳ ಸರ್ವಿಸ್ ಸೆಂಟರ್ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದರು.

ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯ್ಕ್, ಮೇಯರ್ ಪ್ರೇಮಾನಂದ ಶೆಟ್ಟಿ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಎಸ್‌ಪಿ ಹೃಷಿಕೇಶ್ ಸೋನಾವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ, ಡಿಸಿಪಿ ಹರಿರಾಂ ಶಂಕರ್, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿ ಡಾ.ಕಿಶೋರ್‌ಕುಮಾರ್‌ ಇದ್ದರು.

40 ಗ್ರಾಮ ಪೂರ್ಣ ಲಾಕ್‌: ಡಿಸಿ

ಜಿಲ್ಲೆಯ 40 ಗ್ರಾಮಗಳಲ್ಲಿ ಹಾಗೂ ಉಳ್ಳಾಲ, ಸೋಮೇಶ್ವರ, ಕೋಟೆಕಾರು, ಬೆಳ್ತಂಗಡಿ ಪಟ್ಟಣ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಲ್ಲಿ ಸೋಂಕು ನಿಯಂತ್ರಿಸಬಹುದು ಈ ಪ್ರದೇಶಗಳ ಸಂಪೂರ್ಣ ಲಾಕ್‍ಡೌನ್ ವಿಧಿಸಲು ಆದೇಶಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲು ಅಗತ್ಯವಿರುವ ಪರಿಕರಗಳು, ವಾಹನ, ಲ್ಯಾಬ್ ಟೆಕ್ನಿಷಿಯನ್‍ಗಳನ್ನು ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಲು ಕ್ರಮವಹಿಸಲಾಗಿದೆ’ ಎಂದರು.

ಸಂಚಾರಿ ತಂಡ, ಸಹಾಯವಾಣಿ ಆರಂಭ

ಸೋಂಕಿನ ಲಕ್ಷಣ ಇರುವ ವ್ಯಕ್ತಿಗಳು ತಪಾಸಣೆ, ಪ್ರಾಥಮಿಕ ಸಂಪರ್ಕಿತರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸಂಚಾರಿ ಗಂಟಲು ದ್ರವ ಮಾದರಿ ಸಂಗ್ರಹಿಸುವ ತಂಡವನ್ನು (ಮೊಬೈಲ್‌ ಸ್ವಾಬ್‌ ಕಲೆಕ್ಷನ್‌ ಟೀಮ್‌) ರಚಿಸಲಾಗಿದೆ.

ಪಾಲಿಕೆ ವತಿಯಿಂದ ‘ಕೋವಿಡ್ ಪರೀಕ್ಷೆಗಾಗಿ ಕರೆ ಮಾಡಿ’ (Call For Covid Test) ಪರಿಕಲ್ಪನೆಯಲ್ಲಿ ನಗರದ ಲಾಲ್‌ಬಾಗ್‌ನ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ದೂರವಾಣಿ ಸಂಖ್ಯೆ 0824-2455674 ಗೆ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಸಾರ್ವಜನಿಕರು ಕರೆ ಮಾಡಿ ಈ ಸೌಲಭ್ಯ ಪಡೆಯಬಹುದು.

ದಂಡ: ಪಾಲಿಕೆ ವ್ಯಾಪ್ತಿಯಲ್ಲಿ ಶುಕ್ರವಾರ ಮಾರ್ಗಸೂಚಿ ಉಲ್ಲಂಘಿಸಿದ ಒಟ್ಟು 20 ಪ್ರಕರಣಗಳಲ್ಲಿ ₹16,500 ದಂಡ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT