ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಕಾರ್ಯಕರ್ತನಿಂದ ಸಂಸತ್‌ಗೆ: ವಿಜಯಯಾತ್ರೆಯಲ್ಲಿ ನಳಿನ್‌ ಹ್ಯಾಟ್ರಿಕ್‌

ಸಾಧನೆ
Last Updated 24 ಮೇ 2019, 15:13 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 28 ವರ್ಷಗಳಿಂದ ಬಿಜೆಪಿಯ ವಿಜಯಯಾತ್ರೆ ಮುಂದುವರಿದಿದ್ದು, ಈ ಬಾರಿಯೂ ಕ್ಷೇತ್ರದ ಮತದಾರರು ಬಿಜೆಪಿಗೇ ಮನ್ನಣೆ ನೀಡಿದ್ದಾರೆ. 1977 ರಿಂದ ಸತತ ನಾಲ್ಕು ಬಾರಿ ಮಂಗಳೂರು ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದ ಬಿ. ಜನಾರ್ದನ ಪೂಜಾರಿ ಅವರನ್ನು 1991 ರಲ್ಲಿ ಸೋಲಿಸುವ ಮೂಲಕ ವಿ. ಧನಂಜಯಕುಮಾರ್ ಅವರು ಬಿಜೆಪಿಗೆ ನೆಲೆ ಒದಗಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ನಿರಂತರವಾಗಿ ಬಿಜೆಪಿ ಗೆಲ್ಲುತ್ತಲೇ ಬಂದಿದೆ.

2009 ರಲ್ಲಿ ನಡೆದ ಲೋಕಸಭೆ ಚುನಾವಣೆ ಬಿಜೆಪಿ ಪಾಲಿಗೆ ಸ್ಪಲ್ಪ ಕಠಿಣವಾಗಿತ್ತು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಇದೇ ವರ್ಷ ಮಂಗಳೂರು ಕ್ಷೇತ್ರವು ದಕ್ಷಿಣ ಕನ್ನಡ ಕ್ಷೇತ್ರವಾಗಿ ಪರಿವರ್ತನೆಯಾಗಿತ್ತು. 2004 ರಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಡಿ.ವಿ. ಸದಾನಂದಗೌಡರು, ಕಾರ್ಯಕರ್ತರ ಒತ್ತಾಯದಿಂದ ಉಡುಪಿ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾದರೂ, 2009 ರ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳ ಕೊರತೆ ಕಾಡುತ್ತಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಹೊಸ ಮುಖವೊಂದನ್ನು ಕಣಕ್ಕೆ ಇಳಿಸಿತ್ತು. ಅವರೇ ನಳಿನ್‌ಕುಮಾರ್ ಕಟೀಲ್‌.

ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದ ನಳಿನ್‌ಕುಮಾರ್‌ ಕಟೀಲ್‌, ರಾಜಕೀಯ ವಲಯದಲ್ಲಿ ಅಷ್ಟೇನೂ ಪರಿಚಿತರಾಗಿರಲಿಲ್ಲ. ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ನಳಿನ್‌, ಪಕ್ಷದ ನಿರ್ಧಾರದಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದರು. ಮೊದಲ ಪ್ರಯತ್ನದಲ್ಲಿಯೇ ಹಿರಿಯ ಕಾಂಗ್ರೆಸ್‌ ನಾಯಕ ಜನಾರ್ದನ ಪೂಜಾರಿ ಅವರ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸುವ ಮೂಲಕ ನಾಯಕರ ವಿಶ್ವಾಸವನ್ನು ಉಳಿಸುವಲ್ಲಿ ಸಫಲರಾಗಿದ್ದರು.

2009ರಲ್ಲಿ ಕಾಂಗ್ರೆಸ್‌ನಲ್ಲೂ ರಾಜಕೀಯ ಸ್ಥಿತಿ ಅಷ್ಟೊಂದು ಸರಿಯಾಗಿರಲಿಲ್ಲ. ಸತತ ಸೋಲು ಅನುಭವಿಸಿದ್ದ ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹಾಗೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿತ್ತು. ನಾಮಪತ್ರ ಸಲ್ಲಿಕೆಗೆ ಎರಡು ದಿನ ಬಾಕಿ ಇರುವಾಗ ಕಾಂಗ್ರೆಸ್‌ ಹೈಕಮಾಂಡ್‌, ಜನಾರ್ದನ ಪೂಜಾರಿ ಅವರಿಗೆ ಟಿಕೆಟ್‌ ನೀಡಿತು. ಮೊಯಿಲಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿದರು.

2008ರ ವಿಧಾನಸಭಾ ಚುನಾವಣೆ ವೇಳೆ ಶಾಸಕಿ ಶಕುಂತಳಾ ಶೆಟ್ಟಿ ಅವರಿಗೆ ಟಿಕೆಟ್‌ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದಿದ್ದ ಮಾಜಿ ಶಾಸಕ ಉರಿಮಜಲು ಕೆ. ರಾಮಭಟ್‌, ಸ್ವಾಭಿಮಾನಿ ವೇದಿಕೆಯಿಂದ ಕಣಕ್ಕಿಳಿಯುವ ಮೂಲಕ ಬಿಜೆಪಿಗೆ ಬಂಡಾಯದ ಬಾವುಟ ಹಾರಿಸಿದ್ದರು. ಜನಾರ್ದನ ಪೂಜಾರಿ ಅವರಂತಹ ದಿಗ್ಗಜ ಅಭ್ಯರ್ಥಿ ಎದುರು ಬಿಜೆಪಿ ಅಷ್ಟೇನೂ ಪ್ರಭಾವಿಯಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಆಗ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್‌ ಹಾಗೂ ನಾಲ್ಕರಲ್ಲಿ ಬಿಜೆಪಿ ಶಾಸಕರಿದ್ದರು.

2009ರ ಮೇ 2ರಂದು ನಡೆದ ಚುನಾವಣೆಯಲ್ಲಿ 10,15,922 ಮಂದಿ ಮತ ಚಲಾಯಿಸಿದರು. ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ಗೆ ಮತ್ತೆ ಸೋಲುಣಿಸಿತು. 4,99,385 ಮತ ಪಡೆದ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್‌ ಕಟೀಲ್‌ ಅವರು ಜನಾರ್ದನ ಪೂಜಾರಿ (4,58,965 ಮತ) ಅವರನ್ನು 40,420 ಮತಗಳಿಂದ ಸೋಲಿಸಿದ್ದರು.

2014ರಲ್ಲಿಯೂ ಹಾಲಿ ಸಂಸದ ನಳಿನ್‌ ಅವರಿಗೇ ಬಿಜೆಪಿ ಟಿಕೆಟ್‌ ನೀಡಿತು. ಆಗಲೂ ಕಾಂಗ್ರೆಸ್‌ನ ಆಂತರಿಕ ಚುನಾವಣೆಯಲ್ಲಿ ಕಣಚೂರು ಮೋನು ಅವರನ್ನು ಸೋಲಿಸಿದ್ದ ಜನಾರ್ದನ ಪೂಜಾರಿ ಅವರೇ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಆದರೆ, ಫಲಿತಾಂಶ ಮಾತ್ರ ಮತ್ತೆ ಬಿಜೆಪಿ ಪರವಾಗಿಯೇ ಬಂದಿತ್ತು. ಜತೆಗೆ ನಳಿನ್‌ ಅವರ ಗೆಲುವಿನ ಅಂತರ 1.40 ಲಕ್ಷವನ್ನು ದಾಟಿತ್ತು.

ಇದೀಗ ಮೂರನೇ ಬಾರಿಗೆ ಸಾಕಷ್ಟು ವಿರೋಧದ ಮಧ್ಯೆಯೇ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದ ನಳಿನ್‌ಕುಮಾರ್ ಕಟೀಲ್‌, ಬಿಜೆಪಿಯ ವಿಜಯಯಾತ್ರೆಯನ್ನು ಮುಂದುವರಿಸಿದ್ದಾರೆ. 2014 ಕ್ಕಿಂತ ದುಪ್ಪಟ್ಟು ಮತಗಳ ಅಂತರದಿಂದ ಮತ್ತೊಮ್ಮೆ ಸಂಸತ್ತಿಗೆ ಪ್ರವೇಶ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT