ಮಂಗಳೂರು: ‘ಸಂವಿಧಾನದ 370ನೇ ವಿಧಿ ಅಡಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಪಡಿದ ಸಂದರ್ಭವದು, ಊರಿನಿಂದ ಮಂಗಳೂರಿಗೆ ಬಂದಿದ್ದ ‘ನನ್ನವಳು’ ಮತ್ತು ನಾನು ರಾತ್ರಿ ಟಿ.ವಿ ನೋಡುತ್ತಿದ್ದೆವು. ಕಾಶ್ಮೀರದ ಬೀದಿಗಳಲ್ಲಿ ಜನರು ಕಣ್ಮರೆಯಾಗಿ, ಮಿಲಿಟರಿ ಪಡೆಗಳು ಸಂಚರಿಸುತ್ತಿದ್ದ ದೃಶ್ಯ ಹಾದು ಹೋಗುತ್ತಿತ್ತು. ಪತ್ನಿ ಪ್ರಶ್ನಿಸಿದಳು, ‘ನೀನು ಕಾಲೇಜಿನಲ್ಲಿರುವಾಗ ಎಷ್ಟು ಕ್ರಾಂತಿಕಾರಿಯಾಗಿದ್ದೆ, ಈಗೆಲ್ಲಿ ಹೋಯ್ತು ನಿನ್ನ ಕ್ರಾಂತಿ? ಕಲೆಕ್ಟರ್ (ಜಿಲ್ಲಾಧಿಕಾರಿ) ಆಗಿ, ಬಂಗಲೆ, ವಾಹನ ಎಲ್ಲವೂ ಇದೆ, ಐಷಾರಾಮದ ಜೀವನ, ದೇಶದ ಚಿಂತೆ ಇಲ್ಲವಾ ನಿನಗೆ?’.
ಆತ್ಮಸಾಕ್ಷಿ ಕಲುಕಿತು, ಇಡೀ ರಾತ್ರಿ ನಿದ್ದೆ ಸುಳಿಯಲಿಲ್ಲ. ಮರುದಿನವೇ ನಿರ್ಧಾರಕ್ಕೆ ಬಂದೆ. ಇದಾಗಿ, ಮೂರನೇ ದಿನ ರಾಜೀನಾಮೆ ನೀಡಿ ಹೊರಟೇ ಬಿಟ್ಟೆ...
ತಮಿಳುನಾಡಿನ ತಿರುವಳ್ಳುವರ್ ಕ್ಷೇತ್ರದ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಹೀಗೆ ಅಚ್ಚ ಕನ್ನಡದಲ್ಲಿ ಮಾತನಾಡುತ್ತಿದ್ದರೆ, ಇಡೀ ಸಭಾಭವನದಲ್ಲಿ ಸೇರಿದ್ದವರು ಬೆರಗಿನಿಂದ ಅವರ ಮಾತಿಗೆ ಕಿವಿಯಾಗಿದ್ದರು.
‘ರಾಯಚೂರಿನಿಂದ ವರ್ಗವಾಗಿ ಬಂದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗ, 2019ರಲ್ಲಿ ನಾನು ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಇಲ್ಲಿಂದ ನಿರ್ಗಮಿಸಿದೆ. ರಾಜಕೀಯ ಒತ್ತಡ ಅಥವಾ ಇನ್ನಾವುದೋ ಬಾಹ್ಯ ಒತ್ತಡದಿಂದ ನಾನು ರಾಜೀನಾಮೆ ನೀಡಿರಬಹುದೆಂದು ಅನೇಕರು ವಿಶ್ಲೇಷಿಸಿದರು. ಇಂದು ಸಂಸದನಾಗಿ ಮಂಗಳೂರಿಗೆ ಬಂದಿದ್ದೇನೆ. ನನ್ನ ಕುಟುಂಬವಾಗಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಜ ಸಂಗತಿ ತಿಳಿಸಬೇಕೆಂಬ ಹಂಬಲ, ಮೊದಲ ಬಾರಿಗೆ ನಾನು ಈ ವಿಷಯವನ್ನು ಹೊರಹಾಕುವಂತೆ ಮಾಡಿತು’ ಎಂದು ಹೇಳಿದಾಗ ಚಪ್ಪಾಳೆಯ ಸುರಿಮಳೆ.
ಮಂಗಳವಾರ ನಡೆದ ‘ಸೆಂಥಿಲ್ ಜೊತೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ರಾಜಕೀಯ ಪ್ರವೇಶಿಸಿದ ಅನುಭವವನ್ನು ‘ಆತ್ಮಕಥನ’ದಂತೆ ಹೇಳಿಕೊಂಡರು.
‘ತಮಿಳುನಾಡಿನ ಸಾಮಾನ್ಯ ದಲಿತ ಕುಟುಂಬದ ನನ್ನ ತಂದೆ, ಆ ತಲೆಮಾರಿನ ಮೊದಲ ಸಾಕ್ಷರರು. ಕುಟುಂಬಕ್ಕೆ ಹಿಡಿ ಭೂಮಿಯೂ ಇಲ್ಲ. ಪದವಿ ಪಡೆದು, ವಕೀಲರಾಗಿ ಚೆನ್ನೈಗೆ ಬಂದು ನೆಲೆಸಿದರು. ಸಣ್ಣವರಿರುವಾಗ ನಿತ್ಯವೂ ಸ್ನಾನ ಮಾಡಿಸುತ್ತ ಅವರು, ತಮ್ಮ ಬದುಕಿನ ಕಷ್ಟ–ಕೋಟಲೆಗಳ ಕಥೆಗಳನ್ನು ಬಿಚ್ಚಿಡುತ್ತಿದ್ದರು. ‘ನೀನು ದೊಡ್ಡ ಎಂಜಿನಿಯರ್ ಆಗಿ ದುಡಿದರೆ, ಅದು ನನಗೆ ಖುಷಿ ತರದು, ನೀನು ಬಂದಿರುವ ಹಾದಿಯನ್ನು ಹಿಂದಿರುಗಿ ನೋಡುವ ಸಹೃದಯಿಯಾದರೆ, ಅದು ನನ್ನ ಸಂತೋಷದ ಕ್ಷಣ. ನನ್ನ ಒಬ್ಬ ಮಗ ದೇಶಕ್ಕೆ ಇನ್ನೊಬ್ಬ ಮಗ ಮನೆಗೆ’ ಎನ್ನುತ್ತಿದ್ದರು. ದೇಶಕ್ಕೆ ಮೀಸಲಾದವ ನಾನೇ ಎಂದುಕೊಂಡು, ಕಾಲೇಜು ದಿನಗಳಿಂದ ಸಾಮಾಜಿಕ ಹೋರಾಟದ ಮೂಲಕವೇ ಬದುಕನ್ನು ರೂಪಿಸಿಕೊಳ್ಳುತ್ತ ಬಂದೆ’ ಎನ್ನುವಾಗ ಅವರಿಗೆ ತಂದೆಯ ಬಗ್ಗೆ ಹೆಮ್ಮೆಯ ಭಾವ ಹೊರಹೊಮ್ಮುತ್ತಿತ್ತು.
‘ಖಾಸಗಿ ಜೀವನ ತ್ಯಜಿಸಿ, ಸಾರ್ವಜನಿಕ ಜೀವನವನ್ನೇ ಅಪ್ಪಿಕೊಳ್ಳಲು ಮನಸ್ಸು ಹಾತೊರೆಯುತ್ತಿತ್ತು. ಅದನ್ನೇ ನೆಚ್ಚಿಕೊಂಡಿದ್ದೇನೆ, ಸಾರ್ವಜನಿಕ ಸೇವೆಗೆ ಕುಟುಂಬ ಬಂಧಗಳು ಅಡ್ಡಿಯಾಗಬಾರದೆಂದು ಮಕ್ಕಳು, ಆಸ್ತಿ ಯಾವುದನ್ನೂ ಬೇಡವೆಂಬ ತೀರ್ಮಾನದೊಂದಿಗೆ ನನ್ನ ಕಾಲೇಜು ಸಹಪಾಠಿಯೇ ನನ್ನ ಸಂಗಾತಿಯಾಗಿದ್ದಾಳೆ. ಅಧಿಕಾರಿಯಾಗಿದ್ದಾಗ, ರಾಜಕೀಯವನ್ನು ಹತ್ತಿರದಿಂದ ಗಮನಿಸಿದೆ, ಜನರನ್ನು ಜನರ ಮೇಲೆ ಎತ್ತಿ ಕಟ್ಟುವ ರಾಜಕೀಯ ನೋಡಿ ನನಗೆ ಸಹಿಸಲು ಆಗಲಿಲ್ಲ, ಇದು ಬೆಂಕಿಯಂತೆ ಇಡೀ ಪರಿಸರವನ್ನು ಪಸರಿಸಿ ವ್ಯವಸ್ಥೆಯನ್ನೇ ಹಾಳುಗೆಡವುತ್ತದೆ. ದೇಶದಲ್ಲಿ ಬದಲಾವಣೆ ಸಾಧ್ಯವಿದ್ದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು, ಕಾಂಗ್ರೆಸ್ ಪಕ್ಷ ಸೇರಿದೆ. ಪಕ್ಷ ನನ್ನನ್ನು ಆಹ್ವಾನಿಸಿದ್ದಲ್ಲ, ನಾನಾಗಿಯೇ ಹೋಗಿ ಪಕ್ಷವನ್ನು ಸೇರಿದೆ’ ಎಂದು ಹೇಳಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.