ಮಂಗಳೂರು: ಮಂಗಳೂರು –ಮೂಡುಬಿದರೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಗರದ ಹೊರವಲಯದ ಕೆತ್ತಿಕಲ್‌ನಲ್ಲಿ ಸಾಗುವಾಗ ಪ್ರಯಾಣಿಕರು ಬಾಯ್ದೆದಿರುವ ಗುಡ್ಡದತ್ತ ದೃಷ್ಟಿನೆಟ್ಟು ಮುಂದಕ್ಕೆ ಹೋಗುತ್ತಾರೆ. ಬಗೆದಿರುವ ಗುಡ್ಡದ ಒಡಲಿನಿಂದ ಯಾವ ಕ್ಷಣದಲ್ಲಿ ಮಣ್ಣು ರಸ್ತೆಗೆ ಕುಸಿಯಬಹುದೆಂಬ ಆತಂಕ ಅವರಿಗೆ.
ಎತ್ತರದ ಗುಡ್ಡದ ಹೊಟ್ಟೆಯನ್ನು ಬಗೆದ ಜಾಗದಿಂದ ಮಳೆ ನೀರು ಧಾರೆಯಾಗಿ ಹರಿಯುತ್ತದೆ. ಅಲ್ಲಲ್ಲಿ ಸಣ್ಣ ಜಲಪಾತ ಸೃಷ್ಟಿಯಾಗಿದೆ. ಗುಡ್ಡದ ಒಂದು ಮೂಲೆಯಲ್ಲಿ ಸುರಂಗದಿಂದ ಒಂದೇಸವನೆ ನೀರು ತೊಟ್ಟಿಕ್ಕುತ್ತದೆ. ಅದಕ್ಕೆ ಅತಿ ಸನಿಹದಲ್ಲಿ ಕಾರ್ಕಳ ಕಡೆಯಿಂದ ಮಂಗಳೂರಿಗೆ ಬಂದಿರುವ ಹೈ ಟೆನ್ಶನ್ ವಿದ್ಯುತ್ ಮಾರ್ಗ ಹಾದುಹೋಗಿದೆ. ಕೆತ್ತಿಕಲ್‌ನ ಇಡೀ ಚಿತ್ರಣ ನೋಡುಗರಲ್ಲಿ ಭಯ ಹುಟ್ಟಿಸುವಂತಿದೆ. ಈ ಅಪಾಯಕಾರಿ ಸನ್ನಿವೇಶ ಸೃಷ್ಟಿಸುವಲ್ಲಿ ಮಣ್ಣು ಲಾಬಿಯ ಕೈವಾಡ ಇದೆ ಎಂಬುದು ಸ್ಥಳೀಯರ ನೇರ ಆರೋಪ.
ಗುಡ್ಡದ ಮೇಲ್ಭಾಗದಲ್ಲಿ ನೂರಾರು ಮನೆಗಳಿವೆ. ಗುಡ್ಡ ಕುಸಿದರೆ ಹತ್ತಕ್ಕೂ ಹೆಚ್ಚು ಮನೆಗಳಿಗೆ ಅಪಾಯ. ಗುಡ್ಡದ ತುದಿಯಲ್ಲಿ ಮಹಾನಗರ ಪಾಲಿಕೆಯ ಎಸ್‌ಟಿಪಿ ಘಟಕವೂ ಇದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಆಗುವ ಪೂರ್ವದಿಂದ ಇಲ್ಲಿ ಮಣ್ಣು ತೆಗೆಯುವ ಕಾರ್ಯ ನಡೆಯುತ್ತಿತ್ತು. ಹಗಲು–ರಾತ್ರಿ ಗುಡ್ಡದ ಹೊಟ್ಟೆ ಬಗೆದು ಮಣ್ಣು ಸಾಗಣೆ ಮಾಡಲಾಗಿದೆ. ಸ್ಥಳೀಯರ ಕೈವಾಡ ಇಲ್ಲದಿದ್ದರೆ ಹೊರಗಿನವರು ಬಂದು ಅವ್ಯಾಹತವಾಗಿ ಮಣ್ಣು ಹೊತ್ತೊಯ್ಯಲು ಸಾಧ್ಯವೇ’ ಎಂದು ಪ್ರಶ್ನಿಸುತ್ತಾರೆ ಕೆತ್ತಿಕಲ್‌ನ ಯೋಗೀಶ್.
‘ಪ್ರಾಕೃತಿಕವಾಗಿ ಸುಂದರವಾದ ಪ್ರದೇಶ. ಎದುರಿನಲ್ಲಿ ದೃಷ್ಟಿ ಹಾಯಿಸಿದರೆ ಹಸಿರು ಕಣ್ತುಂಬಿಕೊಳ್ಳುತ್ತದೆ. ಈ ಸೌಂದರ್ಯವನ್ನು ನೋಡಿ ನಾಲ್ಕು ತಿಂಗಳ ಹಿಂದೆ ಮನೆ ಖರೀದಿಸಿದೆ. ಈಗ ಮನೆಯೇ ಅಪಾಯದಲ್ಲಿದೆ’ ಎಂದು ಗುಡ್ಡದ ಮೇಲ್ಭಾಗದಲ್ಲಿ ಮನೆ ಖರೀದಿಸಿರುವ ವ್ಯಕ್ತಿಯೊಬ್ಬರು ಅಲವತ್ತುಕೊಂಡರು.
‘ಹೆದ್ದಾರಿಯನ್ನು ಕೆಳಭಾಗದ ಮೂಲಕ ಕೊಂಡೊಯ್ಯಲು ಸಾಧ್ಯವಿತ್ತು. ಸಾಧ್ಯತೆಗಳನ್ನು ಪರಿಶೀಲಿಸದೆ, ನೆಲದ ಮಣ್ಣಿನ ಅಧ್ಯಯನ ಮಾಡದೆ ಹೆದ್ದಾರಿ ನಿರ್ಮಿಸಲಾಗಿದೆ. ಸರ್ಕಾರಿ ಜಮೀನು ಎಂಬ ಕಾರಣಕ್ಕೆ ಬೇಕಾಬಿಟ್ಟಿ ಮಣ್ಣು ತೆಗೆಯಲಾಗಿದೆ. ಇಲ್ಲಿನ ಮಣ್ಣು ಯಾವುದಕ್ಕೆ ಬಳಕೆಯಾಗಿದೆ, ಎಲ್ಲಿಗೆ ಸಾಗಣೆಯಾಗಿದೆ? ಹೆದ್ದಾರಿ ಕಾಮಗಾರಿಗೆ ಎಷ್ಟು ಮಣ್ಣು ಬಳಸಲಾಗಿದೆ? ಯಾರೆಲ್ಲ ಇದರ ಪಾಲುದಾರರು ಎಂಬ ಸತ್ಯ ಹೊರಬರಬೇಕು’ ಎಂದು ಒತ್ತಾಯಿಸಿದರು ಸ್ಥಳೀಯರಾದ ಯುಸೂಫ್.
‘ನಿರಂತರ ಮಳೆಗೆ ಗುಡ್ಡದ ಮಣ್ಣು ಸಡಿಲಗೊಂಡಿದೆ. ಹಿಂಭಾಗದಲ್ಲಿ ಪಿಲಿಕುಳ ಉದ್ಯಾನದ ಸರೋವರ ಇದೆ. ಭೂಮಿ ಒಡಲಿನಿಂದ ಒತ್ತಡ ಸೃಷ್ಟಿಯಾಗುವ ಸಾಧ್ಯತೆ ಇದೆ. ಮಣ್ಣು ಮಾಫಿಯಾ ಸೃಷ್ಟಿಸಿರುವ ಅಪಾಯಕ್ಕೆ ಜನರು ಬೆಲೆ ತೆರಬೇಕಾಗಿದೆ. ಮಳೆಗಾಲ ಮುಗಿಯುವ ತನಕ ಜಿಲ್ಲಾಡಳಿತಕ್ಕೆ ಕೆತ್ತಿಕಲ್ ಗುಡ್ಡ ಕಾಯುವುದೇ ದೊಡ್ಡ ತಲೆನೋವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಹಿಂದೆಯೂ ಗುಡ್ಡ ಕುಸಿದಿತ್ತು...
‘1992ರಲ್ಲಿ ಇದೇ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿತ್ತು. ಆ ವೇಳೆ ಒಂದು ತಿಂಗಳು ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಈ ನೆಲದ ಮಣ್ಣಿಗೆ ಜಾರುವ ಗುಣವಿದೆ. ಇಲ್ಲಿ ಭೂಮಿ ಜಾರಿದ ಉದಾಹರಣೆಯೂ ಇದೆ. ಇವನ್ನೆಲ್ಲ ಅಧ್ಯಯನ ಮಾಡದೆ ಗುಡ್ಡ ಕಡಿದು ರಸ್ತೆ ಮಾಡಲಾಗಿದೆ. ಉಳಿದ ಕಡೆಗಳಲ್ಲಿ ರಸ್ತೆ ಕಾಮಗಾರಿಯ ಪೂರ್ವದಲ್ಲಿ ಚರಂಡಿ ನಿರ್ಮಿಸಿರುವ ಹೆದ್ದಾರಿ ಪ್ರಾಧಿಕಾರವು ಇಲ್ಲಿ ರಸ್ತೆಯನ್ನು ಮೊದಲು ನಿರ್ಮಿಸಿದೆ. ಇದು ಇನ್ನಷ್ಟು ಅವಾಂತರಕ್ಕೆ ಕಾರಣವಾಗಿದೆ’ ಎಂದು ಆರೋಪಿಸುತ್ತಾರೆ ಸ್ಥಳೀಯರಾದ ಯುಸೂಫ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.