ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ್ಕಿ | ಪ್ರಯತ್ನದಿಂದ ಕಲೆಯಲ್ಲಿ ಪರಿಪಕ್ವತೆ ಸಾಧ್ಯ: ದೇವದಾಸ ಕಾಪಿಕಾಡ್

ಕಟೀಲು: ಭ್ರಮರ-– ಇಂಚರ ನುಡಿಹಬ್ಬದ ತುಳು ಉಚ್ಚಯ
Last Updated 4 ಡಿಸೆಂಬರ್ 2022, 7:09 IST
ಅಕ್ಷರ ಗಾತ್ರ

ಮೂಲ್ಕಿ: ‘ಕಲೆಯಲ್ಲಿ ನಾವೆಷ್ಟು ಪ್ರಯತ್ನ ನಡೆಸುತ್ತೇವೆಯೋ ಅದು ನಮ್ಮನ್ನು ಪರಿಪಕ್ವವಾಗಿ ಬೆಳೆಸುತ್ತದೆ. ನಾವೆಷ್ಟು ಪ್ರಭುದ್ಧರಾಗುತ್ತೇವೆಯೇ ಅಲ್ಲಿಯವರೆಗೆ ಪ್ರಯತ್ನ ಬಿಡಬಾರದು. ಎಲ್ಲರಿಗೂ ಅವಕಾಶ ಸಿಗದೇ ಇರಬಹುದು. ಆದರೆ, ಸಿಕ್ಕ ಅವಕಾಶದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಚಿತ್ರನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಹೇಳಿದರು.

ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ಶ್ರೀವಿದ್ಯಾ ಸಭಾಭವನದಲ್ಲಿ ನಡೆಯುತ್ತಿರುವ ಭ್ರಮರ - ಇಂಚರ ನುಡಿಹಬ್ಬದ ತುಳು ಉಚ್ಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ವಿದ್ವಾಂಸ ಡಾ.ಗಣೇಶ ಅಮೀನ್ ಸಂಕಮಾರ್ ಮಾತನಾಡಿ, ‘ತುಳುನಾಡಿನ ಬದುಕು ಸುಂದರ ಹಾಗೂ ಅಷ್ಟೇ ಪರಂಪರೆಯನ್ನು ಪ್ರಾಮಾಣಿಕತೆಯೊಂದಿಗೆ ನಮ್ಮನ್ನು ಬೆಳೆಸಿದೆ. ಕೃಷಿ ಬದುಕು, ಅದರೊಂದಿಗೆ ಇರುವ ಜೀವನದ ಸಾರವನ್ನು ತಿಳಿ ಹೇಳುವ ಪ್ರಯತ್ನ ನಡೆಯುತ್ತಲೇ ಇರಬೇಕು. ಹಿರಿಯರನ್ನು ಗೌರವಿಸುವುದೇ ಒಂದು ದೊಡ್ಡ ಪಾಠವಾಗಿದೆ. ನಮ್ಮಲ್ಲಿ ಹಿರಿಯರು ತುಳು ಬದುಕನ್ನು ನೀಡಿದ್ದಾರೆ ಅದನ್ನು ಮುಂದಿನ ಪೀಳಿಗೆಗೆ ಈ ರೀತಿಯ ಕಾರ್ಯಕ್ರಮದ ಮೂಲಕ ದಾಟಿಸಬೇಕು’ ಎಂದರು.

ತುಳುನಾಡ ಇತಿಹಾಸದ ಬಗ್ಗೆ ಜನಪದ ಸಂಶೋಧಕ ತುಕಾರಾಮ ಪೂಜಾರಿ ಮಾತನಾಡಿ, ‘ತುಳುನಾಡಿನ ಇತಿಹಾಸವನ್ನು ಸದಾ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ವಿದೇಶಿಗರು ಮೆಚ್ಚುಗೆ ವ್ಯಕ್ತಪಡಿಸಿ ವಿಶ್ವಕ್ಕೆ ಪರಿಚಯಿಸಿದ್ದಾರೆ’ ಎಂದರು.

ತುಳುನಾಡಿನ ದೇವಾಲಯ ಸಂಸ್ಕೃತಿ ಬಗ್ಗೆ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಮಾತನಾಡಿ, ‘ರಾಜ್ಯದಲ್ಲಿ ದೇವಸ್ಥಾನಗಳು ಕೇವಲ ಧಾರ್ಮಿಕ ಕ್ಷೇತ್ರವಾಗಿರದೇ ರಾಜ್ಯದ ಬೊಕ್ಕಸವನ್ನು ತುಂಬಿಸುವ ಮೂಲಕ ಆರ್ಥಿಕ ಶಕ್ತಿಯನ್ನು ನೀಡುವ ದೇವಳಲ್ಲಿ ಸುಬ್ರಹ್ಮಣ್ಯ, ಕೊಲ್ಲೂರು, ಕಟೀಲು ಮೊದಲ ಮೂರು ಸ್ಥಾನಮಾನ ಪಡೆದಿದೆ. ಇದರಿಂದ ಧಾರ್ಮಿಕ ನಂಬಿಕೆಯೊಂದಿಗೆ ಅನೇಕ ವೈಶಿಷ್ಟ್ಯಗಳೊಂದಿಗೆ ಆರ್ಥಿಕತೆಯ ಶಕ್ತಿಯನ್ನು ನೀಡಿದೆ. ಇದು ತುಳುನಾಡಿನ ಹೆಮ್ಮೆಯ ವಿಷಯವಾಗಿದೆ’ ಎಂದರು.

ಕಿರುತೆರೆ ಸಾಹಿತ್ಯ ಬದುಕಿನ ಬಗ್ಗೆ ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಮಾತನಾಡಿ, ‘ಬದುಕಿಗೆ ಹತ್ತಿರವಾದ ಕಥೆಗಳು ಕಿರುತೆರೆಯಲ್ಲಿ ಯಶಸ್ಸಾಗುತ್ತದೆ. ಧಾರಾವಾಹಿಗಳ ಕಥೆಗಳು ಬದುಕನ್ನು ನಿರ್ಣಹಿಸುವ ಕಥೆಗಳಾಗಬೇಕು, ನಮ್ಮ ಬದುಕಿನಲ್ಲಿ ನಡೆಯುವ ಘಟನೆಗಳೇ ಕಥೆಗಳಾಗಲು ಸಾಧ್ಯವಿದೆ. ನಮ್ಮ ಸುತ್ತಮುತ್ತಲೇ ನಡೆಯುವುದನ್ನೇ, ಆತ್ಮಕ್ಕೆ ಹತ್ತಿರವಾದ, ಮನಸ್ಸಿಗೆ ತಾಗುವ ಕಥೆಗಳು ಎಂದಿಗೂ ವಿಫಲವಾಗುವುದಿಲ್ಲ’ ಎಂದರು.

ಧಾರಾವಾಹಿ ಕಥೆಗಾರ ಶ್ರೀನಿಧಿ ಡಿ.ಎಸ್. ಅನುಭವ ಹಂಚಿಕೊಂಡರು. ತುಳು ಗೊಬ್ಬುಲು ಬಗ್ಗೆ ಡಾ.ಗಣನಾಥ ಎಕ್ಕಾರು ಮಾತನಾಡಿದರು.

‘ಯಕ್ಷಗಾನ ಸಾಹಿತ್ಯ ಯಕ್ಷಗಾನ ದಿಂದ ಬದುಕು’ ಗೋಷ್ಠಿಯಲ್ಲಿ ಸುಣ್ಣಂಬಳ ವಿಶ್ವೇಶ್ವರ ರಾವ್, ಡಾ.ಪೃಥ್ವಿರಾಜ್ ಕವತ್ತಾರು, ವಾಸುದೇವ ರಂಗಾ ಭಟ್, ವಾದಿರಾಜ ಕಲ್ಲೂರಾಯ ಮಾತನಾಡಿದರು.‌ ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

ಇದೇ ವೇಳೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಫ್ರೌಢಶಾಲಾ ವಾರ್ಷಿಕೋತ್ಸವವನ್ನು ನಡೆಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿವಿಧ ದತ್ತಿ ನಿಧಿಯನ್ನು ನೀಡಿ ಗೌರವಿಸಲಾಯಿತು.

ಕಟೀಲು ದೇವಳದ ಆನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಆಸ್ರಣ್ಣ, ವೆಂಕಟರಮನ ಆಸ್ರಣ್ಣ ಇದ್ದರು.

ವಿದ್ಯಾರ್ಥಿಗಳು ವಿದ್ವಾಂಸರೊಂದಿಗೆ ಸಂವಾದ ನಡೆಸಿದರು. ಹರಿನಾರಾಯಣದಾಸ ಆಸ್ರಣ್ಣ ನುಡಿಹಬ್ಬದ ಬಗ್ಗೆ ಮಾತನಾಡಿದರು.
ಲೋಕಯ್ಯ ಸಾಲ್ಯಾನ್ ಕಟೀಲು, ಪ್ರಾಂಶುಪಾಲ ಕುಸುಮಾವತಿ , ಉಪ ಪ್ರಾಂಶುಪಾಲ ಸೋಮಪ್ಪ ಅಲಂಗಾರ್ ಇದ್ದರು.

‘ಮಕ್ಕಳಲ್ಲಿ ಓದುವ ಹವ್ಯಾಸ ಕಲಿಸಿ’

ಮಕ್ಕಳಿಗೆ ಅಮೂಲ್ಯವಾದ ಧಾರವಾಹಿಗಳೊಂದಿಗೆ ಸಾಹಿತ್ಯವನ್ನು ಓದುವುದನ್ನು ಕಲಿಸಿರಿ. ವೃತ್ತ ಪತ್ರಿಕೆಗಳನ್ನು ಪ್ರತಿದಿನ ಓದುವ ಬಗ್ಗೆ ಪೋಷಕರು ಪ್ರೋತ್ಸಾಹಿಸಬೇಕು. ಲೋಕಜ್ಞಾನ ಇದ್ದಲ್ಲಿ ಸಾಹಿತಿ ಹುಟ್ಟುತ್ತಾನೆ. ಕನ್ನಡದ ಬದುಕನ್ನು, ಕಲಿಸುವ ಹೊಣೆಗಾರಿಕೆ ನಮ್ಮದಾಗಿದೆ. ಮೊಬೈಲ್ ಮೂಲಕ ಪಬ್ಜಿ, ಆನ್ಲೈನ್ ಬುಕ್ಕಿಂಗ್‌ ಆಟಗಳನ್ನು ಆಡಿಸುವುದೇ ಬದುಕಾಗುವುದಿಲ್ಲ. ಹಿರಿಯ ಸಾಹಿತಿಗಳ ಜೀವನ ಚರಿತ್ರೆಯನ್ನು ಅಭ್ಯಸಿಸಿ, ಕನ್ನಡ ಪುಸ್ತಕ, ಕಾದಂಬರಿ, ಕಥೆ, ಕವನಗಳ ಬಗ್ಗೆ ಓದಿಸಿದಾಗ ಕನ್ನಡವನ್ನು ಉಳಿಸಿದಂತಾಗುತ್ತದೆ ಎಂದು ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಹೇಳಿದರು.

ಇಂದಿನ ಗೋಷ್ಠಿಯಲ್ಲಿ ನಟ ಸುದೀಪ್‌

ನುಡಿಹಬ್ಬದಲ್ಲಿ ಭಾನುವಾರ ಸಮ್ಮೇಳನಾಧ್ಯಕ್ಷ ಡಾ.ಪಾದೇಕಲ್ಲು ವಿಷ್ಣು ಭಟ್ಟರ ಸಾಹಿತ್ಯ ಕೃತಿಗಳ ಬಗ್ಗೆ ಹಾಗೂ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದೆ. ಚಿತ್ರನಟ ಕಿಚ್ಚ ಸುದೀಪ್ ‘ನಮ್ಮ ಹೆಮ್ಮೆಯ ಕರ್ನಾಟಕ’ ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹಾಗೂ ನಾಡುನುಡಿ ಮತ್ತು ನಡೆಯ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತನಾಡುವರು.

ಸಮಾರೋಪ ಸಮಾರಂಭದಲ್ಲಿ ಕಟೀಲಿನಲ್ಲಿ ಆಸ್ಪತ್ರೆ ಕಟ್ಟಿರುವ ಡಾ.ಸುರೇಶ್ ರಾವ್ ಮುಂಬೈ, ಕಟೀಲಿನ ಹಳೆ ವಿದ್ಯಾರ್ಥಿ, ಡಾ.ಸುಧೀರ್ ಶೆಟ್ಟಿ ಮೈಸೂರು, ರಾಮಪ್ರಕಾಶ ಹೊಳ್ಳ ಬೆಂಗಳೂರು, ಜೆ.ಸಿ.ಕುಮಾರ್ ಮುಂಬೈ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಚಿಂತಕ ವೈ.ಎಸ್.ವಿ.ದತ್ತ ಸಮಾರೋಪ ಭಾಷಣ ಮಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT