ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮರೆಯಾದ ಧರ್ಮದ ಕುರುಹುಗಳ ಗುಡಿಹಳ್ಳಿ ಶಾಸನ 

Last Updated 20 ಮೇ 2018, 14:19 IST
ಅಕ್ಷರ ಗಾತ್ರ

ದೇಶದಲ್ಲಿ ಕ್ರಿ.ಪೂ. 6ನೇ ಶತಮಾನದಿಂದ ಕ್ರಿ.ಶ.1500ರವರೆಗೆ ಒಟ್ಟು ಎರಡು ಸಾವಿರ ವರ್ಷ ಆಜೀವಿಕ ಎಂಬುದೊಂದು ಧರ್ಮ ಇತ್ತು. ಅತ್ಯಂತ ತಳಸ್ತರದಿಂದ ಬಂದ ಮಕ್ಖಲಿ ಗೋಸಲ ಹುಟ್ಟುಹಾಕಿದ ಧರ್ಮವಿದು. ತಳಸ್ತರದ, ಧ್ವನಿಹೀನರ ಮತ್ತು ಸಂಖ್ಯಾ ಪ್ರಮಾಣದಲ್ಲಿ ಬಲಿಷ್ಠವಲ್ಲದ ಜಾತಿಯ ವ್ಯಕ್ತಿಯೊಬ್ಬನ ಅಪರೂಪದ ಕಾಣ್ಕೆ, ಕನಸು ಮತ್ತು ಮೇಧಾವಿತನ ಈ ಧರ್ಮದಲ್ಲಿವೆ.

ಈ ಅಪರೂಪದ ಧರ್ಮದ ಕುರಿತ ಮಾಹಿತಿಯು ತಾಲ್ಲೂಕಿನ ಗುಡಿಹಳ್ಳಿಯ ಸೋಮೇಶ್ವರಸ್ವಾಮಿ ದೇವಾಲಯಯದ ತಳಪಾಯದ ಕಲ್ಲಿನ ಮೇಲೆ ಶಾಸನದಲ್ಲಿದೆ. ಆಜೀವಿಕರಿಗೆ ಹೆಚ್ಚುವರಿಯಾಗಿ ವಿಶೇಷ ತೆರಿಗೆ ವಿಧಿಸಲಾಗಿದೆಯೆಂಬ ಅಂಶವನ್ನು ಈ ಶಾಸನ ಒಳಗೊಂಡಿದೆ. ಕ್ರಿ.ಶ.1346ರ ಶಾಸನದಲ್ಲಿ, ಸಾಮಂತ ಅಧಿಪತಿ ಅಂಕಯ್ಯ ನಾಯ್ಕರ್ ಅವರನ್ನು ಒಳಗೊಂಡು ಕೆಲವರು ನಾಡವರು ದೇವಾಲಯಕ್ಕೆ ನೀಡಿರುವ ಕೊಡುಗೆಗಳಲ್ಲಿ ಸ್ಥಳೀಯ ತೆರಿಗೆಗಳನ್ನು ಸೇರಿಸಿದೆ. ಅದರ ಬಲಿಪಶುಗಳ ಯಾದಿಯಲ್ಲಿ ‘ಆಚುವಮ್‌ ಅವಲಂಬವಮ್‌’ ತೆರಿಗೆಯೂ ಸೇರಿದೆ.

ಸುಮಾರು 2000 ವರ್ಷ ಕಾಲ ಭಾರತೀಯ ತಳಸ್ತರದ ಧಾರ್ಮಿಕ ಜನಜೀವನವನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸಿದ್ದ ಆಜೀವಿಕದ ತತ್ವದರ್ಶನವನ್ನು ಅದರ ನಿಜ ತಾತ್ವಿಕತೆಯ ಅಂತಃಸತ್ವವನ್ನು ಇನ್ನೂ ಅರಿಯಬೇಕಿದೆ.

ಉತ್ತರ ಪ್ರದೇಶದಲ್ಲಿ ಹುಟ್ಟಿ ಶ್ರಾವಸ್ತಿಯನ್ನು ಕೇಂದ್ರವಾಗಿರಿಸಿಕೊಂಡು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದ ಆಜೀವಿಕವು ಕಾಶ್ಮೀರದಿಂದ ಗುಜರಾತ್‌ ಹಾಗೂ ದಕ್ಷಿಣ ಭಾರತವನ್ನು ವ್ಯಾಪಿಸಿತ್ತು. ಅಲ್ಲದೆ ಶ್ರೀಲಂಕಾ, ಚೀನಾ ಮತ್ತು ಜಪಾನ್‌ಗಳಿಗೂ ಬೌದ್ಧರ ಮಾರ್ಗಗಳಲ್ಲೇ ಚಲಿಸಿ ಅತ್ಯಂತ ಅಸ್ಥಿರದ ಹೆಜ್ಜೆಯೂರಿ ‘ಅಶಿಭಿಕಾಸ್‌’ ಎಂದು ಗುರುತಿಸಿಕೊಂಡಿತ್ತು.

‘ಒಂದು ಸಹಸ್ರಮಾನದ ಕಾಲಾವಧಿಯಲ್ಲಿ ವಿವಿಧ ಪ್ರದೇಶ ಮತ್ತು ಕಾಲಘಟ್ಟಗಳಲ್ಲಿ ದಕ್ಷಿಣ ದಂಡಾಜೀವಿಕರಿಗೆ ಸಂಬಂಧಿಸಿದ ಹದಿನೇಳು ಶಾಸನಗಳು ಕರ್ನಾಟಕ, ಆಂಧ್ರ ಮತ್ತು ತಮಿಳುನಾಡುಗಳಲ್ಲಿ ಲಭಿಸಿವೆ. ಅವುಗಳ ಪೈಕಿ ಎಂಟು ಶಾಸನಗಳು ಅವಿಭಜಿತ ಕೋಲಾರ ಜಿಲ್ಲೆಯಲ್ಲಿವೆ. ಈ ಎಲ್ಲ ಶಾಸನಗಳ ಕಾಲಾವಧಿಯನ್ನು ಕ್ರಿ.ಶ. 449ರಿಂದ 1346ರವರೆಗೂ ವಿಸ್ತರಿಸಬಹುದಾಗಿದೆ.

ತಮಿಳು ಮತ್ತು ಕನ್ನಡದ ಪ್ರಾಚೀನ ಕೃತಿಗಳಲ್ಲೂ ದಕ್ಷಿಣ ಆಜೀವಿಕರ ಕುರಿತಂತೆ ಸಂಕ್ಷಿಪ್ತ ಉಲ್ಲೇಖಗಳ ಆಧಾರಗಳೂ ಲಭಿಸುತ್ತವೆ. ಈ ಆಧಾರದ ಮೇಲೆ ದಕ್ಷಿಣ ದಂಡಾಜೀವಿಕನು ಕನಿಷ್ಠ 1300 ವರ್ಷ ದಕ್ಷಿಣದಲ್ಲಿದ್ದ ಎಂದಾಗುತ್ತದೆ. ತುಮಕೂರಿನ ಸಿದ್ದಗಂಗಾ ಮಠದ ಮೂಲಪುರುಷನೂ ಆಜೀವಿಕ ಪರಂಪರೆಯ ಗೋಸಲ ಸಿದ್ದೇಶ್ವರ ಎನ್ನಲಾಗಿದೆ. ಕೋಲಾರದ ಆವಣಿ, ಚಿಂತಾಮಣಿ ಬಳಿಯ ಕೈವಾರ, ಆಂಧ್ರದ ಗುಂಟೂರು, ಕೃಷ್ಣ, ನೆಲ್ಲೂರು, ತಮಿಳುನಾಡಿನ ಆರ್ಕಾಟ್‌ ಪ್ರದೇಶವು ಆಜೀವಿಕರ ಕೇಂದ್ರಗಳಾಗಿದ್ದವು. ತಮಿಳುನಾಡಿನಲ್ಲಿ ಆಚುವಿ, ಆಚುವಿ ಮಕ್ಕಳ್‌ ಎಂದೂ, ತೆಲುಗಿನಲ್ಲಿ ಆಜೀವಿಕ, ಆಚುವುಲು ಎಂದು ಕರೆಯುವ ಪದ್ಧತಿಯಿತ್ತು’.

‘ಗುಡಿಹಳ್ಳಿಯ ಶಾಸನದಲ್ಲಿ ‘ಆಚುವಮ್‌’ ಪದ ಬಳಕೆಯಾಗಿದೆ. ದಕ್ಷಿಣ ಭಾರತದಲ್ಲಿ ಸಿಕ್ಕಿರುವ ಆಜೀವಿಕರ ಪ್ರಸ್ತಾಪವಿರುವ ಶಾಸನಗಳೆಲ್ಲವೂ ಆಜೀವಿಕರ ಮೇಲೆ ಹೆಚ್ಚುವರಿಯಾಗಿ ವಿಧಿಸಿರುವ ತೆರಿಗೆಯ ಶಾಸನಗಳಾಗಿರುವುದು ದಂಗುಬಡಿಸುವ ವಿಚಾರವಾಗಿದೆ. ಗುಡಿಹಳ್ಳಿಯ ಶಾಸನ ಕಾಲಾನುಕ್ರಮದಲ್ಲಿ ಕಡೆಯ ಶಾಸನವಾದ್ದರಿಂದ ಬಹುಶಃ ಆಜೀವಿಕರು ಅವಿಭಾಜ್ಯ ಕೋಲಾರ ಜಿಲ್ಲೆಯಲ್ಲೂ ಹದಿನೈದನೇ ಶತಮಾನದವರೆಗೂ ಜೀವಿಸಿದ್ದರೆಂದೇ ಭಾವಿಸಬಹುದಾಗಿದೆ. ಅವರಿಗೆ ವಿಧಿಸಿದ ತೆರಿಗೆಯು ಆಜೀವಿಕ ಪರಿವ್ರಾಜಕರೋ ಅಲೆಮಾರಿಗಳೋ ಆದ ಸನ್ಯಾಸಿಗಳಿಗೆ ಅಲ್ಲದಿರಬಹುದು, ಬದಲಿಗೆ ಆಜೀವಿಕ ಅನುಯಾಯಿಗಳಾದ ಸಮುದಾಯದ ಮೇಲೆ ವಿಧಿಸಿದ ತೆರಿಗೆಯಿರಬಹುದು. ಈ ನೀತಿಯ ಪ್ರಕಾರ ಆಜೀವಿಕರು ಹತ್ತಿಪ್ಪತ್ತು ಪಟ್ಟು ಹೆಚ್ಚು ತೆರಿಗೆಯನ್ನು ನೀಡಬೇಕಾಗಿತ್ತು’

‘ಆಜೀವಿಕ ಧರ್ಮದ ಅನೇಕ ಉತ್ತಮವೆನ್ನಬಹುದಾದ ಅಂಶಗಳು ಜೈನ, ಬೌದ್ಧ, ವೈದಿಕ ಮತ್ತು ಶೈವ ಧಾರೆಗಳಲ್ಲಿ ಲುಪ್ತವಾಗಿ ಇಂದಿಗೂ ಉಳಿದುಬಂದಿದೆ. ಭಾರತದಾದ್ಯಂತ ಜನಪದರಲ್ಲೂ ಆಜೀವಿಕದ ಹೆಜ್ಜೆ ಗುರುತುಗಳು, ಗಾದೆಗಳು, ಉದ್ಗಾರಗಳು, ಆಚರಣೆಗಳು, ಮರುರೂಪಾಂತರಗೊಂಡ ದೈವಾರಾಧನೆಯ ಸ್ವರೂಪದಲ್ಲಿ ಉಳಿದೇ ಇವೆ’ ಎಂದು ಲಕ್ಷ್ಮೀಪತಿ ಅವರು ತಿಳಿಸುವರು.

ಅಶೋಕನ ಕಾಲದಲ್ಲಿ ಪ್ರಮುಖ ಧರ್ಮ

ಸಾಹಿತಿ ಲಕ್ಷ್ಮೀಪತಿ ಕೋಲಾರ ಅವರು ‘ದಕ್ಷಿಣ ದಂಡಾಜೀವಿಕ’ ಎಂಬ ಸಂಶೋಧನ ಕೃತಿಯಲ್ಲಿ ಆಜೀವಿಕ ಧರ್ಮ ಹಾಗೂ ಅದರ ಬೆಳವಣಿಗೆಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

ಆಜೀವಿಕ ಎಂಬ ಧರ್ಮವನ್ನು ಅಶೋಕನ ಕಾಲದಲ್ಲಿ ಭಾರತದ ಮೂರನೇ ಪ್ರಮುಖ ಧರ್ಮ ಎಂದು ಘೋಷಿಸಲ್ಪಟ್ಟಿತ್ತು. ಕ್ರಿಸ್ತ ಪೂರ್ವ ಏಳನೇ ಶತಮಾನಕ್ಕೂ ಮೊದಲಿನಿಂದಲೇ ಅಸ್ತಿತ್ವದಲ್ಲಿ ಇದ್ದಿರಬಹುದೆಂಬುದು ನಂಬಿಕೆ. ಅದೀಗ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಭಾರತದ ಧಾರ್ಮಿಕ ನೆಲದಿಂದ ನಾಮಾಶೇಷವಾದ ಪ್ರಮುಖ ಧರ್ಮ ಇದು. ಆಜೀವಿಕ ಪಂಥವನ್ನು ಭಾರತದ ಆ ಕಾಲದ ಬಹುದೊಡ್ಡ ಧರ್ಮದ ಎತ್ತರಕ್ಕೆ ನಿಲ್ಲಿಸಿದ ಮಕ್ಖಲಿ ಗೋಸಲನು ಕೆಳಜಾತಿ ಎಂದೇ ಪರಿಗಣಿಸಿದ್ದ ಅನಾರ್ಯಕುಲದವನು ಎಂಬುದು ವಿಶೇಷ.

ಉತ್ತರಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳ ಒಲಗೊಂಡು ಗಂಗಾನದಿಯ ವಿಸ್ತೃತ ಬಯಲು ಪ್ರದೇಶವನ್ನು ಈ ಧರ್ಮ ಆವರಿಸಿಕೊಂಡಿತ್ತು. ‘ಆಜೀವಿಕ’ ಎಂಬ ಪದವನ್ನು ‘ಜೀವನ ಪರ್ಯಂತ ತಾವು ನಂಬಿದ ತತ್ವಾದರ್ಶಗಳಿಗೆ ಬದ್ಧರಾಗಿರುವವರು’ ಎಂಬರ್ಥದಲ್ಲಿ ವ್ಯಾಖ್ಯಾನಿಸುತ್ತಾರೆ.

ಈ ಅಲೆಮಾರಿ ಪರಿವ್ರಾಜಕರು ಯತಿ, ವ್ರಾತ್ಯರಂತೆ ಶೈವ ಮೂಲದವರಾಗಿದ್ದರು. ದಕ್ಷಿಣ ಭಾರತದಲ್ಲಿ ಆಜೀವಿಕರನ್ನು ‘ದಂಡಾಜೀವಿಕ’ ಎಂದೇ ಕರೆಯುತ್ತಿದ್ದ ಪದ್ಧತಿಯಿತ್ತು. ಅಲ್ಲದೆ ಭಾರತದೆಲ್ಲೆಡೆಯೂ ಆಜೀವಿಕರನ್ನು ಅವರ ಕೈಯಲ್ಲಿನ ದಂಡದ ಕಾರಣದಿಂದಾಗಿ ‘ಏಕದಂಡಿನ್‌’ ಎಂದು ಗುರುತಿಸಲಾಗಿದೆ’ ಎಂದು ಲಕ್ಷ್ಮೀಪತಿ ಕೋಲಾರ ವಿವರಿಸುವರು.

ಡಿ.ಜಿ.ಮಲ್ಲಿಕಾರ್ಜುನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT