ಯುವಕನ ಕೊಲೆ: ಇಬ್ಬರು ದೋಷಿಗಳು

7
ಮಾಜಿ ಪ್ರಿಯತಮೆ, ಆಕೆಯ ಪ್ರಿಯಕರ ಅಪರಾಧಿಗಳು

ಯುವಕನ ಕೊಲೆ: ಇಬ್ಬರು ದೋಷಿಗಳು

Published:
Updated:

ಮಂಗಳೂರು: ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಕ್ಕ ಬಳಿ 2014ರ ಏಪ್ರಿಲ್‌ 1ರ ನಸುಕಿನ ಜಾವ ಅವಿನಾಶ್ ಸುವರ್ಣ ಎಂಬ ಯುವಕನ ಬೈಕ್‌ಗೆ ಟಾಟಾ ಸುಮೊ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮೃತನ ಪ್ರಿಯತಮೆ ಮತ್ತು ಆಕೆಯ ಪ್ರಿಯಕರ ಅಪರಾಧಿಗಳು ಎಂದು ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಮಾನಿಸಿದೆ.

‘ಕಾರ್ಕಳ ತಾಲ್ಲೂಕು ಬೋಳ ಗ್ರಾಮದ ಕೆಂದೊಟ್ಟು ಪದವು ನಿವಾಸಿ ಅವಿನಾಶ್ ಸುವರ್ಣ (21) ಕೊಲೆಯಲ್ಲಿ ತಿಪಟೂರು ತಾಲ್ಲೂಕು ಅಂಧನಕೆರೆ ಗ್ರಾಮದ ರಂಗ ಅಲಿಯಾಸ್ ಗವಿರಂಗ ಅಲಿಯಾಸ್ ಹರೀಶ್ (28) ಮತ್ತು ಮೂಲ್ಕಿ ಕಾರ್ನಾಡು ಪಡುಬೈಲು ನಿವಾಸಿ ಸುಷ್ಮಾ ಪ್ರೆಸಿಲ್ಲಾ (28) ತಪ್ಪಿತಸ್ಥರು. ಸುಷ್ಮಾ ಕೊಲೆಗೆ ಸಂಚು ರೂಪಿಸಿ, ಪ್ರೇರಣೆ ನೀಡಿದ್ದು, ರಂಗ ಕೊಲೆ ಮಾಡಿದ್ದಾನೆ’ ಎಂದು ನ್ಯಾಯಾಧೀಶ ಡಿ.ಟಿ.ಪುಟ್ಟರಂಗಸ್ವಾಮಿ ಗುರುವಾರ ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಅವಿನಾಶ್ ಕೂಲಿ ಕಾರ್ಮಿಕನಾಗಿದ್ದ. ಸುಷ್ಮಾ ಎಂಫಸಿಸ್‌ ಕಂಪೆನಿಯಲ್ಲಿ ಕಸ್ಟಮರ್‌ ಸಪೋರ್ಟ್‌ ಅಧಿಕಾರಿ ಹುದ್ದೆಯಲ್ಲಿದ್ದಳು. ಇಬ್ಬರೂ ಪ್ರೀತಿಸುತ್ತಿದ್ದರು. ಅದೇ ಕಂಪೆನಿಯ ಸಿಬ್ಬಂದಿ ಕರೆದೊಯ್ಯುತ್ತಿದ್ದ ವಾಹನದ ಚಾಲಕ ರಂಗನನ್ನು ಕೆಲವು ದಿನಗಳ ಬಳಿಕ ಸುಷ್ಮಾ ಪ್ರೀತಿಸಿದ್ದಳು. 2014ರ ಮಾರ್ಚ್‌ 31ರ ಸಂಜೆ ಮೋರ್ಗನ್‌ಗೇಟ್‌ ಬಳಿ ಇರುವ ಎಂಫಸಿಸ್‌ ಕಂಪೆನಿ ಕಚೇರಿಗೆ ಹೋಗಿದ್ದ ಅವಿನಾಶ್‌ ಈ ಬಗ್ಗೆ ಸುಷ್ಮಾ ಜೊತೆ ಮಾತನಾಡಲು ಯತ್ನಿಸಿದ್ದ.

ಭದ್ರತಾ ಸಿಬ್ಬಂದಿ ಒಳಕ್ಕೆ ಪ್ರವೇಶ ನೀಡಿರಲಿಲ್ಲ. ಬಲವಂತದಿಂದ ಕಚೇರಿ ಒಳಕ್ಕೆ ನುಗ್ಗಿದ್ದ ಆತನನ್ನು ಕಚೇರಿ ವ್ಯವಸ್ಥಾಪಕರು ಮಂಗಳೂರು ದಕ್ಷಿಣ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಕಚೇರಿ ವ್ಯವಸ್ಥಾಪಕರು ಸುಷ್ಮಾಳಿಗೂ ಬುದ್ಧಿ ಹೇಳಿ ಕಳುಹಿಸಿದ್ದರು. ಬಳಿಕ ಆಕೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಳು.

‘ಕೆಲಸ ತ್ಯಜಿಸಿದ ಬಳಿಕ ರಂಗನಿಗೆ ದೂರವಾಣಿ ಕರೆಮಾಡಿದ್ದ ಸುಷ್ಮಾ, ಎಲ್ಲದಕ್ಕೂ ಅವಿನಾಶ್ ಕಾರಣ ಎಂದು ಹೇಳಿದ್ದಳು. ಇಬ್ಬರೂ ಕೊಲೆಗೆ ಸಂಚು ರೂಪಿಸಿದ್ದರು. ಬಳಿಕ ಅವಿನಾಶ್‌ಗೆ ಕರೆ ಮಾಡಿದ್ದ ಸುಷ್ಮಾ, ನಿನ್ನ ಜೊತೆ ಮಾತನಾಡಬೇಕಿದೆ ನಾಳೆ (ಏ.1) 4.45ಕ್ಕೆ ಮುಕ್ಕ ಚೆಕ್‌ಪೋಸ್ಟ್‌ ಬಳಿ ಬಾ ಎಂದಿದ್ದಳು. ಆಕೆಯ ಮಾತು ನಂಬಿದ್ದ ಅವಿನಾಶ್ ಬೈಕ್‌ನಲ್ಲಿ ಬಂದಿದ್ದ. ಹಿಂದಿನಿಂದ ಬಂದಿದ್ದ ರಂಗ ಬೈಕ್‌ಗೆ ಟಾಟಾ ಸುಮೊ ಡಿಕ್ಕಿ ಹೊಡೆಸಿದ್ದ’ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ತಿಳಿಸಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ಅವಿನಾಶ್‌ನನ್ನು ಮೀನು ಮಾರಾಟಗಾರರೊಬ್ಬರು ನೋಡಿ, ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದ. ಅದು ಅಪಘಾತವಲ್ಲ, ಕೊಲೆ ಎಂದು ಮೃತನ ತಂದೆ ಮೂಲ್ಕಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮೂಲ್ಕಿ ಠಾಣೆ ಇನ್‌ಸ್ಪೆಕ್ಟರ್‌ ರಾಮಚಂದ್ರ ನಾಯಕ್‌ ಮತ್ತು ತಂಡ, ರಂಗ ಹಾಗೂ ಸುಷ್ಮಾ ಸೇರಿ ಕೊಲೆ ಮಾಡಿರುವುದನ್ನು ಪತ್ತೆಹಚ್ಚಿತ್ತು. ನ್ಯಾಯಾಲಯ 28 ಸಾಕ್ಷಿಗಳ ವಿಚಾರಣೆ ನಡೆಸಿ, 40 ದಾಖಲೆಗಳನ್ನು ಪರಿಶೀಲಿಸಿತು. ಪಬ್ಲಿಕ್‌ ಪ್ರಾಸಿಕ್ಯೂಟರ್ ಜುಡಿತ್‌ ಒ.ಎಂ. ಕ್ರಾಸ್ತಾ ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದ್ದರು. ಸುಷ್ಮಾ ಮತ್ತು ರಂಗ ಅಪರಾಧಿಗಳು ಎಂದು ನ್ಯಾಯಾಲಯ ಸಾರಿದ್ದು, ಶಿಕ್ಷೆಯ ಪ್ರಮಾಣವನ್ನು ಇನ್ನೂ ಪ್ರಕಟಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !