ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಸರೋದ್‌ನಲ್ಲಿ ಮಲ್ಹಾರ್‌ ಅಲೆ; ರಾಗದ ಮಳೆ

Last Updated 4 ಜುಲೈ 2022, 14:25 IST
ಅಕ್ಷರ ಗಾತ್ರ

ಮಂಗಳೂರು: ಕೆಲವು ದಿನಗಳಿಂದ ಧಾರಾಕಾರ ಮಳೆಯ ತಂಪುಂಡ ನಗರದ ಸಂಗೀತ ಪ್ರಿಯರು ಭಾನುವಾರ ಸಂಜೆ ರಾಗರಸದ ಸೊಂಪಿನಲ್ಲಿ ಮುದಗೊಂಡರು. ಸಂಗೀತ ಭಾರತಿ ಪ್ರತಿಷ್ಠಾನ ಆಯೋಜಿಸಿದ್ದ ಸರೋದ್ ವಾದನ ಕಾರ್ಯಕ್ರಮದಲ್ಲಿಕೊಲ್ಕತ್ತಾದ ಪಂಡಿತ್ ತೇಜೇಂದ್ರ ನಾರಾಯಣ ಮಜುಂದಾರ್ ಅವರು ರಾಮದಾಸಿ ಮಲ್ಹಾರ್ ಮತ್ತು ಸರಸ್ವತಿ ರಾಗಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದರು.

ಹಂಪನಕಟ್ಟಾದಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೇಜೇಂದ್ರ ಅವರು ಮೊದಲು ನುಡಿಸಿದ್ದು ಮಳೆರಾಗಗಳಲ್ಲಿ ಒಂದಾದ ರಾಮದಾಸಿ ಮಲ್ಹಾರ್‌. ಕೋಮಲ ಮತ್ತು ಶುದ್ಧ ಗಾಂಧಾರಗಳೆರಡೂ ಬಳಕೆಯಾಗುವುದರಿಂದ ಹೆಚ್ಚು ಮಾಧುರ್ಯ ನೀಡುವ ಈ ರಾಗದ ಸಂ‍ಪೂರ್ಣ ಸೊಬಗನ್ನು ಸಹೃದಯರ ಎದೆಯಾಳಕ್ಕೆ ಇಳಿಸುವಲ್ಲಿ ತೇಜೇಂದ್ರ ಕುಮಾರ್ ಯಶಸ್ವಿಯಾದರು.

ಆರಂಭದ ಆಲಾಪ್‌–ಜೋಡ್–ಜಾಲಾದ ನಂತರ ಯೋಗೇಶ್ ಸಂಶಿ ಅವರ ತಬಲಾ ಕೂಡ ಜೊತೆಗೂಡಿದಾಗ ಸಭಾಂಗಣದಲ್ಲಿ ರೋಮಾಂಚನದ ಅಲೆ ಎದ್ದಿತು. ಸರೋದ್‌ನ ಸೊಗಸಾದ ಮೀಂಡ್‌ಗಳ ನಡುವಿನ ಝೇಂಕಾರಕ್ಕೆ ಯೋಗೇಶ್ ಅವರ ಬೆರಳ ತುದಿಯಲ್ಲಿ ಅರಳಿದ ಬೋಲ್‌–ಅಂಗ್‌ಗಳು ಸೇರಿದಾಗ ಮೋಹಕ ಲೋಕ ಸೃಷ್ಟಿಯಾಯಿತು.

ವಿಳಂಬಿತ್ ತೀನ್‌ತಾಳ್‌ನಲ್ಲಿನಿಧಾನಗತಿಯ ನುಡಿಸಾಣಿಕೆಗೆ ಸಂಗೀತ ಪ್ರಿಯರುತಲೆದೂಗಿದರೆ, ಜಪ್‌ತಾಳ್‌ನ ಧೃತ್‌ ಗತ್‌ಗೆ ಅವರ ಮನ ಕುಣಿದಾಡಿತು.

ಆಯೋಜಕರ ಬೇಡಿಕೆ ಮೇರೆಗೆ ರಾಗ್‌ ಸರಸ್ವತಿ ಪ್ರಸ್ತುತಗೊಂಡಿತು. ರೂಪಕ್‌ ತಾಳ್‌ನಲ್ಲಿ ಪ್ರೇಕ್ಷಕರನ್ನು ಕಲಾವಿದರು ಮತ್ತೊಮ್ಮೆ ರಾಗದ ಅಲೆಯಲ್ಲಿ ತೇಲಿಸಿದರು. ತೀನ್‌ತಾಳ್‌ನಲ್ಲಿ ಕಚೇರಿ ಮುಂದುವರಿದು ಸವಾಲ್–ಜವಾಬ್‌ನಲ್ಲಿ ಕೊನೆಗೊಂಡಿತು. ಕಚೇರಿಯುದ್ದಕ್ಕೂ ತಾದಾತ್ಮ್ಯರಾಗಿ ಸಾಥ್ ನೀಡಿದ ಯೋಗೇಶ್ ಸಂಶಿ ಅವರು ಸವಾಲ್–ಜವಾಬ್‌ನಲ್ಲಿ ಮತ್ತಷ್ಟು ಚಮಾತ್ಕಾರ ಮೆರೆದರು.

ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್ ರಫೀಕ್‌ ಖಾನ್ ಮತ್ತು ಉಪಾಧ್ಯಕ್ಷ ನರೇಂದ್ರ ಎಲ್. ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT