ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಕಾಡು: ಸಂಕಷ್ಟದಲ್ಲಿ 16 ಕುಟುಂಬ

ಜನಜೀವನ ಅಸ್ತವ್ಯಸ್ತಗೊಳಿಸಿದ ಭೂಕುಸಿತ, ಪ್ರವಾಹ
Last Updated 16 ಆಗಸ್ಟ್ 2019, 10:41 IST
ಅಕ್ಷರ ಗಾತ್ರ

ಮಂಗಳೂರು: ಪಶ್ಚಿಮಘಟ್ಟ ಶ್ರೇಣಿಯಲ್ಲಿ ಆಗಸ್ಟ್‌ 9ರಂದು ಭಾರಿ ಮಳೆಯಿಂದ ಉಂಟಾದ ಭೂಕುಸಿತ ಮತ್ತು ಪ್ರವಾಹ ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಕಾಡಿನ 16 ಕುಟುಂಬಗಳ ಜೀವನವನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ.

ನಂದಿಕಾಡು ಜನವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೇ ತುಂಡರಿದು ಹೋಗಿದೆ. ಮರದ ದಿಮ್ಮಿಗಳು, ಕಲ್ಲು ಬಂಡೆಗಳನ್ನು ಹೊತ್ತು ಬಂದು ಅಪ್ಪಳಿಸಿದ ಪ್ರವಾಹಕ್ಕೆ ಹಲವು ಮನೆಗಳ ಸ್ವರೂಪವೇ ಬದಲಾಗಿದೆ. ಧರೆ ಕುಸಿತದಿಂದ ಕೆಲವು ಮನೆಗಳಿಗೆ ಭಾರಿ ಹಾನಿಯಾಗಿದೆ. ತೋಟ, ಗದ್ದೆಗಳು ಕೃಷಿ ಮಾಡಲಾಗದ ಸ್ಥಿತಿ ತಲುಪಿದೆ.

‘ಧರೆ ಕುಸಿದು ನಮ್ಮ ಮನೆಯ ಮೇಲೆ ಬಂದು ಬಿದ್ದಿದೆ. ಈಗಾಗಲೇ ಮನೆಯ ಶೇಕಡ 45ರಷ್ಟು ಭಾಗಕ್ಕೆ ಹಾನಿಯಾಗಿದೆ. ಭೂಕುಸಿತದಿಂದ ಬಿದ್ದಿರುವ ಮಣ್ಣನ್ನು ತೆಗೆದರೆ ಮನೆಯೇ ಉರುಳಿಬೀಳುವ ಸಾಧ್ಯತೆ ಕಾಣಿಸುತ್ತಿದೆ’ ಎಂದು ನಂದಿಕಾಡು ನಿವಾಸಿ ಉಮೇಶ್‌ ಸದ್ಯದ ಅಲ್ಲಿನ ಚಿತ್ರಣವನ್ನು ವಿವರಿಸಿದರು.

ಅರಣ್ಯ ಪ್ರದೇಶದೊಳಗಿನ ಜನವಸತಿಯಲ್ಲಿ ಆರು ಕೋಣೆಗಳುಳ್ಳ ಮುಚ್ಚಿಗೆ ಮನೆಯಲ್ಲಿ ಇವರ ದೊಡ್ಡ ಕುಟುಂಬ ವಾಸವಿತ್ತು. ಮನೆಯೊಂದಿಗೆ ಕೃಷಿ ಜಮೀನಿಗೂ ಹಾನಿಯಾಗಿರುವುದರಿಂದ ಈ ಕುಟುಂಬ ಕಂಗಾಲಾಗಿ ಕುಳಿತಿದೆ.

‘ಕೋಟ್ರಡ್ಕ– ನಂದಿಕಾಡು ನಡುವಿನ 2.5 ಕಿಲೋ ಮೀಟರ್‌ ಉದ್ದದ ಸಂಪರ್ಕ ರಸ್ತೆಯ ಮೇಲೆ ಮರದ ದಿಮ್ಮಿಗಳು, ಕಲ್ಲು ಬಂಡೆಗಳು ಬಂದು ಬಿದ್ದಿವೆ. ಜನರು ಸಂಚರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ರಸ್ತೆ ಇದೆ. ಮನೆಯಲ್ಲಿದ್ದ 74 ವರ್ಷದ ನನ್ನ ತಾಯಿ ಹಾಸಿಗೆ ಹಿಡಿದಿದ್ದರು. ಅಣ್ಣನಿಗೆ ಬೆನ್ನುಹುರಿಯ ತೊಂದರೆ ಇದ್ದು, ಅವರೂ ಮಲಗಿದ್ದರು. ಅವರೊಂದಿಗೆ ಅತ್ತಿಗೆ, ಮಕ್ಕಳನ್ನು ಬಂಧುಗಳ ಮನೆಗೆ ಸ್ಥಳಾಂತರಿಸಲಾಗಿದೆ. ಅಮ್ಮ ಮತ್ತು ಅಣ್ಣನನ್ನು 5 ಕಿ.ಮೀ. ದೂರದ ಕಾಡಿನ ದಾರಿಯಲ್ಲಿ ಸ್ಥಳೀಯರು ಹೊತ್ತು ತಂದು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದರು’ ಎಂದು ಉಮೇಶ್‌ ತಿಳಿಸಿದರು.

ಮನೆಯಲ್ಲಿದ್ದ 23 ಕ್ವಿಂಟಲ್‌ ಒಣ ಅಡಿಕೆ, 5,000 ತೆಂಗಿನ ಕಾಯಿಗಳು ನೀರು ಪಾಲಾಗಿವೆ. ಮನೆ, ತೋಟಕ್ಕೆ ನೀರು ಹಾಯಿಸುವ ಪಂಪ್‌ಗಳು, ಪಂಪ್‌ ಶೆಡ್ ಕೊಚ್ಚಿಕೊಂಡು ಹೋಗಿವೆ. 1,650 ಅಡಿಕೆ ಮರಗಳು, 55 ತೆಂಗಿನ ಮರಗಳು, 650 ರಬ್ಬರ್ ಮರಗಳು ನಾಶವಾಗಿವೆ. ಮನೆಯಲ್ಲಿದ್ದ ಪೀಠೋಪಕರಣ, ಗೃಹೋಪಯೋಗಿ ವಸ್ತುಗಳು ಹಾಳಾಗಿವೆ ಎಂದು ವಿವರಿಸಿದರು.

ಊರಿನ ಇನ್ನೂ 15 ಕುಟುಂಬಗಳಿಗೆ ಇದೇ ರೀತಿಯ ತೊಂದರೆಯಾಗಿದೆ. ಮನೆ, ಜಮೀನು ಎಲ್ಲವೂ ಹಾಳಾಗಿವೆ. ಸಂಕಷ್ಟದ ಸ್ಥಿತಿಯಲ್ಲಿ ಸಂಬಂಧಿಗಳ ಮನೆ, ಪರಿಹಾರ ಕೇಂದ್ರಗಳಲ್ಲಿ ದಿನ ಕಳೆಯುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT