ಸೋಮವಾರ, ಜನವರಿ 17, 2022
19 °C

ಜನವರಿ 9 ಸಾಗರದಲ್ಲಿ ರಾಜ್ಯಮಟ್ಟದ `ನಾರಾಯಣ ಗುರು ಧಾರ್ಮಿಕ ಸಮಾವೇಶ - 2022

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ವೈದಿಕ ಸಮಿತಿ ವತಿಯಿಂದ ರಾಜ್ಯಮಟ್ಟದ ‘ನಾರಾಯಣ ಗುರು ಧಾರ್ಮಿಕ ಸಮಾವೇಶ - 2022’ ಹಾಗೂ ಈಡಿಗ ಬಿಲ್ಲವ ನಾಮಧಾರಿ, ದೀವರು, ತೀಯಾ ಸಮಾಜದ 26 ಒಳ ಪಂಗಡಗಳ 501 ಅರ್ಚಕರಿಂದ (ಶಾಂತಿಗಳು) ‘ವಿಶ್ವಶಾಂತಿ ಯಾಗ’ ಜ.9 ರಂದು ಶಿವಮೊಗ್ಗ ಜಿಲ್ಲೆ ಸಾಗರದ ಈಡಿಗರ ಭವನದಲ್ಲಿ ನಡೆಯಲಿದೆ ಎಂದು ಸೈದಪ್ಪ ಕೆ. ಗುತ್ತೇದಾರ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ರಾಜ್ಯದಾದ್ಯಂತ ಇರುವ ಸಮಾಜದ ಎಲ್ಲ ದೇವಸ್ಥಾನ ಹಾಗೂ ದೈವಸ್ಥಾನಗಳಿಗೆ ಸರ್ಕಾರದ ವತಿಯಿಂದ ಪ್ರತಿ ವರ್ಷವೂ ಬಜೆಟ್‌ನಲ್ಲಿ ಅನುದಾನ ನೀಡಬೇಕು. ಕೋಟಿ ಚನ್ನಯರ 266 ಗರಡಿಗಳು ಹಾಗೂ ದೇವಸ್ಥಾನ, ದೈವಸ್ಥಾನಗಳಿಗೆ ಸರ್ಕಾರದ ವತಿಯಿಂದ ತಕ್ಷಣವೇ ಆರ್‌ಟಿಸಿ ನೀಡಬೇಕು ಎಂದು ಒತ್ತಾಯಿಸಿದರು.

ಸಮುದಾಯದ ಅರ್ಚಕರಿಗೆ ಮಾಸಾಶನ ನೀಡಬೇಕು. ಸರ್ಕಾರದ ಆಡಳಿತಕ್ಕೆ ಒಳಪಡುವ ದೇವಸ್ಥಾನಗಳ ಅರ್ಚಕರಿಗೆ ಸರ್ಕಾರದಿಂದ ಉದ್ಯೋಗ ನೀಡಬೇಕು. ಬ್ರಹ್ಮವಿದ್ಯಾಲಯ ಸ್ಥಾಪನೆಗೆ 50 ಎಕರೆ ಜಮೀನು ಹಾಗೂ ಅನುದಾನ ಮಂಜೂರಿ ಮಾಡಬೇಕು ಎಂದು ಒತ್ತಾಯಿಸಿದರು.

‘ವಿಶ್ವಶಾಂತಿ ಯಾಗ’ದ ಉದ್ಘಾಟನೆಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಪುಷ್ಪಾರ್ಚನೆ ಮಾಡಲಿದ್ದಾರೆ. ಶಾಸಕ ಹರತಾಳು ಹಾಲಪ್ಪ ಬ್ರಹ್ಮವಿದ್ಯಾಲಯ ಯೋಜನೆಗೆ ಚಾಲನೆ ನೀಡಲಿದ್ದಾರೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಪಾಲ್ಗೊಳ್ಳಲಿದ್ದಾರೆ. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು 2022ರ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ವಿವಿಧ ಮಠಗಳ ಸ್ವಾಮೀಜಿಗಳು, ಸಚಿವರು, ಶಾಸಕರು, ಮಾಜಿ ಸಚಿವರು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರಮುಖರಾದ ಶಿರ್ತಾಡಿ ಸೋಮನಾಥ ಶಾಂತಿ, ರವಿಶಾಂತಿ, ನವೀನ್ ಚಂದ್ರ ಪೂಜಾರಿ, ಕಾಂತರಾಜ್ ಎಲ್. ಆರ್ಯ ಇದ್ದರು.

ಜಾಗ ಮರಳಿಸಲು ಆಗ್ರಹ

‘ಸರ್ಕಾರ ಮುಂದಿನ ದಿನಗಳಲ್ಲಿ ಸಮಾಜದ ಧಾರ್ಮಿಕ ಮುಖಂಡರಿಗೆ ದೇವಸ್ಥಾನದ ಜಾಗ ಮರಳಿ ನೀಡಬೇಕು. ಸಮಾಜದ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮನವಿಗೆ ಸ್ಪಂದಿಸಿ ಸರ್ಕಾರ ಸಮಾಜದ ಮಠ, ಮಂದಿರ ದೇವಸ್ಥಾನದ ಹಾಗೂ ದೈವಸ್ಥಾನಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು’  ಎಂದು ರಾಜ್ಯಾಧ್ಯಕ್ಷ ಸೈದಪ್ಪ ಕೆ. ಗುತ್ತೇದಾರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು