ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನಲ್ಲಿ ‘ಸ್ವಾಭಿಮಾನದ ನಡಿಗೆ’ಗೆ ಚಾಲನೆ

ನಾರಾಯಣ ಗುರುವಿನ ಹತ್ತಾರು ಸ್ತಬ್ಧಚಿತ್ರಗಳು, ನೂರಾರು ಅನುಯಾಯಿಗಳು ಭಾಗಿ
Last Updated 26 ಜನವರಿ 2022, 12:12 IST
ಅಕ್ಷರ ಗಾತ್ರ

ಮಂಗಳೂರು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುವಿನ ಸ್ತಬ್ಧಚಿತ್ರವನ್ನು ನಿರಾಕರಿಸಿರುವ ಕೇಂದ್ರದ ನಿಲುವು ಖಂಡಿಸಿ ಬಿಲ್ಲವ ಸಂಘಟನೆಗಳು ಮತ್ತು ಗುರುಗಳ ಅನುಯಾಯಿಗಳು ಹಮ್ಮಿಕೊಂಡಿರುವ ನಾರಾಯಣ ಗುರುವಿನ ಸ್ತಬ್ಧಚಿತ್ರದ ಮೆರವಣಿಗೆ ಮತ್ತು ಸ್ವಾಭಿಮಾನದ ನಡಿಗೆಗೆ ಬುಧವಾರ ಮಂಗಳೂರಿನ ಕಂಕನಾಡಿ ಗರಡಿಯಲ್ಲಿ ಚಾಲನೆ ನೀಡಲಾಯಿತು.

ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ನಾರಾಯಣ ಗುರುವಿನ ಹತ್ತಾರು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ನೂರಾರು ಮಂದಿ ಗುರುಗಳ ಅನುಯಾಯಿಗಳು ಹಳದಿ ಶಾಲು ಹಾಕಿಕೊಂಡು ನಡಿಗೆಯಲ್ಲಿ ಹೆಜ್ಜೆ ಹಾಕಿದರು. ಹಲವು ಮಂದಿ ಹಳದಿ ಬಾವುಟದೊಂದಿಗೆ ಕಾರು, ದ್ವಿಚಕ್ರ ವಾಹನದಲ್ಲಿ ಪಾಲ್ಗೊಂಡರು. ಮೆರವಣಿಗೆಯ ಮುಂದೆ ಚೆಂಡೆ ಪ್ರದರ್ಶನ ಗಮನ ಸೆಳೆಯಿತು.

ನಾರಾಯಣ ಗುರುಗಳ ಸ್ತಬ್ಧಚಿತ್ರಗಳು ಪಂಪ್‌ವೆಲ್‌ಗೆ ಬರುತ್ತಿದ್ದಂತೆ ಎರಡು ಜೆಸಿಬಿಗಳ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ನಂತರ ಮೆರವಣಿಗೆಯು ಜ್ಯೋತಿ ಸರ್ಕಲ್‌, ಹಂಪನಕಟ್ಟೆ ಸಿಗ್ನಲ್‌, ಕೆ.ಎಸ್‌.ರಾವ್‌ ರಸ್ತೆ, ನವಭಾರತ್‌ ಸರ್ಕಲ್‌, ಪಿವಿಎಸ್‌, ಎಂ.ಜಿ.ರಸ್ತೆ, ಲೇಡಿಹಿಲ್‌, ಮಣ್ಣಗುಡ್ಡೆ ಮೂಲಕ ಕುದ್ರೋಳಿ ಕ್ಷೇತ್ರಕ್ಕೆ ತಲುಪಲಿದೆ. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಹಳದಿ ಬಂಟಿಂಗ್ಸ್‌ಗಳನ್ನು ಹಾಕಲಾಗಿದೆ.

ಕುದ್ರೋಳಿ ಗೋಕರ್ಣಾನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್‌, ನಾರಾಯಣ ಗುರು ವಿಚಾರವಾದಿ ವೇದಿಕೆ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್‌, ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌, ಶಾಸಕ ಯು.ಟಿ. ಖಾದರ್‌, ಮಾಜಿ ಶಾಸಕರಾದ ವಸಂತ ಬಂಗೇರ, ಶಕುಂತಳಾ ಶೆಟ್ಟಿ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ, ಕಂಕನಾಡಿ ಗರಡಿಯ ಅಧ್ಯಕ್ಷ ಚಿತ್ತರಂಜನ್‌, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್‌ ಮತ್ತಿತರರು ಇದ್ದರು.

ಸಂಚಾರ ದಟ್ಟಣೆ: ನಗರದಲ್ಲಿ ಸ್ವಾಭಿಮಾನದ ನಡಿಗೆ ವೇಳೆ ಹಲವು ಸ್ತಬ್ಧಚಿತ್ರಗಳು, ನೂರಾರು ವಾಹನಗಳು ಭಾಗವಹಿಸಿರುವುದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT