ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ಗುರು ಪಠ್ಯ ಮರುಸೇರ್ಪಡೆ ಆಗದಿದ್ದರೆ ಹೋರಾಟ

ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ ಕಾರ್ಯಕ್ರಮದಲ್ಲಿ ನವೀನಚಂದ್ರ ಸುವರ್ಣ ಎಚ್ಚರಿಕೆ
Last Updated 11 ಜುಲೈ 2022, 9:48 IST
ಅಕ್ಷರ ಗಾತ್ರ

ಮಂಗಳೂರು: ‘ಸಮಾಜ ವಿಜ್ಞಾನ ಪಾಠಪುಸ್ತಕದಿಂದ ಕೈಬಿಟ್ಟ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಠ್ಯವನ್ನು ಮತ್ತೆ ಸೇರ್ಪಡೆ ಮಾಡದಿದ್ದರೆ ಉಗ್ರ ಹೋರಾಟ ಅನಿವಾರ್ಯ’ ಎಂದು ಅಖಿಲ ಭಾರತ ಬಿಲ್ಲವ ಯೂನಿಯನ್‌ ಅಧ್ಯಕ್ಷ ನವೀನಚಂದ್ರ ಡಿ.ಸುವರ್ಣ ತಿಳಿಸಿದರು.

ನಾರಾಯಣಗುರು ಯುವ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಬ್ರಹ್ಮಶ್ರೀ’ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿವೇತನ ವಿತರಣೆ ಮತ್ತು ಸಾಧನಶೀಲರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾರಾಯಣ ಗುರುಗಳ ಪಠ್ಯ ಕೈಬಿಟ್ಟ ಬಗ್ಗೆ ಜನಪ್ರತಿನಿಧಿಗಳು ಬಹಿರಂಗ ಹೇಳಿಕೆ ಮೂಲಕ ವಿರೋಧಿಸಬೇಕು. ಎಲ್ಲವನ್ನೂ ಸಹಿಸಿಕೊಂಡು ಮತ ಚಲಾಯಿಸುವ ಕಾಲ ದೂರವಾಗಿದೆ. ಸಮಾಜದ ಹಿತ ಕಾಯುವವರನ್ನೇ ಜನಪ್ರತಿನಿಧಿಗಳನ್ನಾಗಿ ಆರಿಸಬೇಕಾಗಿದೆ’ ಎಂದು ತಿಳಿಸಿದರು.

‘ಬಿಲ್ಲವರಿಗೆ ಮೇಲ್ವರ್ಗದವರು ದೌರ್ಜನ್ಯ ‌ಮಾಡಿದ ಅಂಶ ನಾರಾಯಣ ಗುರುಗಳ ಸಂದೇಶ ಪಾಠದಲ್ಲಿತ್ತು. ‌ಆದರೆ, ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಈ ಪಠ್ಯವನ್ನು ಕೈಬಿಟ್ಟಿದೆ. ಆ ಸಮಿತಿಯ ಸದಸ್ಯರಲ್ಲಿ 8 ಮಂದಿ ಮೇಲ್ವರ್ಗದವರೇ ಇದ್ದರು. ಅಂತಹ ಸಮಿತಿ ಹಿಂದುಳಿದ ವರ್ಗದವರ ಬಗ್ಗೆ ಎಂತಹ ಭಾವನೆ ಹೊಂದಿರಬಹುದು ಎಂಬುದು ತಿಳಿಯದ ವಿಚಾರವೇನಲ್ಲ. ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳುತ್ತಿದ್ದೇವೆ. ಮಂಗಳೂರಿನಲ್ಲಿ ದೊಟ್ಟ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಎಲ್ಲ ಹಿಂದುಳಿದ ವರ್ಗದವರೂ ಈ ಹೋರಾಟಕ್ಕೆ ಕೈಜೋಡಿಸಬೇಕು’ ಎಂದು ಕೊರಿದರು.

ನಾರಾಯಣಗುರು ಯುವವೇದಿಕೆಯ ವೆಬ್‌ಸೈಟ್‌ ಉದ್ಘಾಟಿಸಿದ ಕಾಂಗ್ರೆಸ್‌ ಮುಖಂಡ ವಿನಯ ಕುಮಾರ್‌ ಸೊರಕೆ, ‘ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನಾರಾಯಣಗುರುಗಳ ಸ್ತಬ್ದಚಿತ್ರಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಲಿಲ್ಲ. ಈಗ ಅವರ ಕುರಿತ ಪಠ್ಯವನ್ನು ಕೈಬಿಡಲಾಗಿದೆ. ಟ್ಯೂಟೋರಿಯಲ್‌ನಲ್ಲಿ ಟ್ಯೂಷನ್‌ ನೀಡುವ ವ್ಯಕ್ತಿಯ ನೇತೃತ್ವದ ಸಮಿತಿ ಪಠ್ಯ ಪರಿಷ್ಕರಣೆ ವೇಳೆ ನಾರಾಯಣ ಗುರುಗಳಿಗೆ ಮಾತ್ರವಲ್ಲ, ಡಾ.ಬಿ.ಆರ್‌.ಅಂಬೇಡ್ಕರ್‌, ಬಸವಣ್ಣ, ಕುವೆಂಪು, ಭಗತ್‌ಸಿಂಗ್‌ ಅಂತಹವರಿಗೂ ಅವಮಾನ ಮಾಡಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿದ ಬಹುಮುಖ ಪ್ರತಿಭೆ ಪ್ರದೀಪ್‌ ಟಿ.ಬಾಳ್ತಿಲ ಅವರಿಗೆ ‘ಬ್ರಹ್ಮಶ್ರೀ‘ ಬಂಗಾರದ ಪದಕ ಪ್ರದಾನ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿದ ತನ್ವಿ ಹಾಗೂ ಯಶ್ವಿತಾ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಗೋವಿಂದಬಾಬು ಪೂಜಾರಿ ಅವರನ್ನು ‘ಸಾಧನಶೀಲ’ ಎಂದು ಗುರುತಿಸಿ ಸನ್ಮಾನಿಸಲಾಯಿತು. ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ ಸದಸ್ಯ ಉದಯಚಂದ್ರ ಡಿ.ಸುವರ್ಣ, ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ.ಟಿ.ಸುವರ್ಣ ಧಾರ್ಮಿಕ ಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸಿದ ಪದ್ಮನಾಭ ಕೋಟ್ಯಾನ್‌ ಅವರನ್ನೂ ಸನ್ಮಾನಿಸಲಾಯಿತು. ಕಲಾವಿದ ಶೈಲೇಶ್‌ ಬೈಕಂಪಾಡಿ, ನಟ ಅಕ್ಷಯ್ ಸರಿಪಲ್ಲ ಹಾಗೂ ಬರಹಗಾರ ಶುಶಾಂತ್‌ ಪೂಜಾರಿ ಕನ್ನಡಿಕಟ್ಟೆ ಅವರನ್ನು ಗೌರವಿಸಲಾಯಿತು. ರಘುನಾಥಎಂ.ವರ್ಕಾಡಿ ಸಂಪಾದಕತ್ವದ ‘ಬ್ರಹ್ಮಶ್ರೀ’ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು.

ಮಹಿಳಾ ಒಕ್ಕೂಟದ ಸ್ಥಾಪಕಾಧ್ಯಕ್ಷೆ ಕೆ.ಎ.ರೋಹಿಣಿ, ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಉದ್ಯಮಿಗಳಾದ ಯಾದವ ಕೋಟ್ಯಾನ್‌ ಪೆರ್ಮುದೆ, ಮೋಹನ್‌ರಾಜ್‌, ಯುವ ಜನತಾದಳದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅಕ್ಷಿತ್‌ ಸುವರ್ಣ, ರತೀಂದ್ರನಾಥ ಎಚ್‌, ನಾರಾಯಣಗುರು ಯುವ ವೇದಿಕೆ ಅಧ್ಯಕ್ಷ ಸುದರ್ಶನ ಡಿ.ಸುವರ್ಣ, ಕಾರ್ಯದರ್ಶಿ ನವೀನ್‌ ಅಂಚನ್, ಎಂ.ಎಸ್.ಕೋಟ್ಯಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT