ಗುರುವಾರ , ಸೆಪ್ಟೆಂಬರ್ 23, 2021
22 °C
ಮಾಸ್ತಿಕಟ್ಟೆ: ಮಾಜಿ ಶಾಸಕರ ಮನೆಗೆ ರಾಷ್ಟ್ರೀಯ ತನಿಖಾ ದಳ ದಿಢೀರ್‌ ದಾಳಿ

ಮಾಜಿ ಶಾಸಕ ಇದಿನಬ್ಬ ಮೊಮ್ಮಗ ಎನ್‍ಐಎ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಳ್ಳಾಲ: ಮಾಜಿ ಶಾಸಕ ದಿ.ಇದಿನಬ್ಬ ಪುತ್ರ ಬಿ.ಎಂ. ಬಾಷಾ ಅವರ ಉಳ್ಳಾಲ ಮಾಸ್ತಿಕಟ್ಟೆಯಲ್ಲಿರುವ ಮನೆಗೆ ಬುಧವಾರ ನಸುಕಿನ ಜಾವ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳದ ತಂಡ ಅವರ ಪುತ್ರನನ್ನು ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದುಕೊಂಡಿದೆ.

ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಉಮ್ಮರ್ ಅಬ್ದುಲ್‌ ರೆಹಮಾನ್‌ (25) ಎಂಬಾತನನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಎರಡು ವಾಹನಗಳಲ್ಲಿ ಬಂದಿದ್ದ ರಾಷ್ಟ್ರೀಯ ತನಿಖಾ ದಳದ ತಂಡ ಮಧ್ಯಾಹ್ನದವರೆಗೂ ವಿಚಾರಣೆ ನಡೆಸಿ, ಉಮ್ಮರ್‌ನನ್ನು ವಶಕ್ಕೆ ಪಡೆದು ಕೊಂಡಿದೆ. ಮಧ್ಯಾಹ್ನ ನಂತರವೂ ತನಿಖೆ ಮುಂದುವರಿಸಿದ ತಂಡ ಸಾಕ್ಷ್ಯ ಗಳ ಸಂಗ್ರಹಣೆ ನಡೆಸಿ, ಸಂಜೆ 7.30ರ ಸುಮಾರಿಗೆ ವಾಪಸಾಗಿದೆ. ತಂಡದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 24 ಅಧಿಕಾರಿಗಳಿದ್ದರು.

ಕಳೆದ ಮಾರ್ಚ್‌ 15 ರಂದು ದೇಶದ 11 ಸ್ಥಳಗಳಾದ ಕೇರಳದ ಕಣ್ಣೂರು, ಮಣಪ್ಪುರಂ, ಕೊಲ್ಲಂ, ಕಾಸರಗೋಡು ಮತ್ತು ಬೆಂಗಳೂರಿನ ಎರಡು ಸ್ಥಳ ಹಾಗೂ ದೆಹಲಿಯ ಕೆಲವೆಡೆ ರಾಷ್ಟ್ರೀಯ ತನಿಖಾ ದಳದ ತಂಡ ದಾಳಿ ನಡೆಸಿತ್ತು. ಕೇರಳ ಮೂಲದ ಮಹಮ್ಮದ್ ಅಮೀನ್ ಅಲಿಯಾಸ್ ಅಬೂ ಯಹ್ಯಾ ನೇತೃತ್ವದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಈತನ ನೇತೃತ್ವದ ತಂಡವು ಐಸಿಸ್ ಪರವಾದ ಅಜೆಂಡಾಗಳನ್ನು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ ಟೆಲಿಗ್ರಾಂ, ಹೂಪ್, ಇಸ್ಟ್ಯಾಗ್ರಾಂಗಳಲ್ಲಿ ಪ್ರಚಾರ ಪಡಿಸುವುದು ಮತ್ತು ಐಎಸ್‌ ಪರವಾದ, ಜಿಹಾದಿ ಮಾನಸಿಕತೆಯನ್ನು ಯುವಕರಲ್ಲಿ ತುಂಬಿ ಐಎಸ್‌ಗೆ
ಸೇರ್ಪಡೆಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು. ಇದರ ಆಧಾರದಲ್ಲಿ ಎನ್‍ಐಎ ಏಳು ಮಂದಿ ಶಂಕಿತ ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಿಸಿ ದಾಳಿ ನಡೆಸಿತ್ತು.

ಮಹಮ್ಮದ್ ಅಮೀನ್ ನೇತೃತ್ವದಲ್ಲಿ ಕರ್ನಾಟಕ ಹಾಗೂ ಕೇರಳ ಮೂಲದ ಮುಖಂಡರನ್ನು ಟಾರ್ಗೆಟ್ ನಡೆಸಿ ಹತ್ಯೆ ನಡೆಸುವ ಸಂಚು ರೂಪಿಸಲಾಗಿತ್ತು. ಇದೇ ಮಾಹಿತಿ ಆಧಾರದಲ್ಲಿ ರಾಷ್ಟ್ರೀಯ ತನಿಖಾ ತಂಡ ದಾಳಿ ನಡೆಸಿದೆ.
ದಾಳಿ ವೇಳೆ ಲ್ಯಾಪ್ ಟಾಪ್, ಹಾರ್ಡ್‌ಡಿಸ್ಕ್, ಹಲವು ಸಿಮ್ ಕಾರ್ಡ್‍ಗಳನ್ನು ವಶಕ್ಕೆ ಪಡೆದಿತ್ತು. ಈ ವೇಳೆ ಮಹಮ್ಮದ್ ಅಮೀನ್ ತಂಡ ಕರ್ನಾಟಕ ಮತ್ತು ಕೇರಳದಲ್ಲಿ ಐಸಿಸ್ ಸಂಘಟನೆಗೆ ನೇಮಿಸಿದ್ದ ಹಲವು ಯುವಕರ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಉಳ್ಳಾಲದ ಮಾಜಿ ಶಾಸಕ ಇದಿನಬ್ಬ ಕುಟುಂಬದ ಸದಸ್ಯರೊಬ್ಬರು ಐಸಿಸ್ ಪರ ಒಲವು ಹೊಂದಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆದಿದೆ. ಅಲ್ಲದೆ, ಐಎಸ್‌ ಪರವಾದ ಹಲವು ಯುಟ್ಯೂಬ್ ಚಾನೆಲ್ ಗಳು, ಇಸ್ಟ್ಯಾಗ್ರಾಂ ಮತ್ತು ಟೆಲಿಗ್ರಾಮ್ ಮೂಲಕ ಮಾಹಿತಿ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ಕೆಲವು ತಾಂತ್ರಿಕ ಸಾಕ್ಷ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು