ಮಂಗಳವಾರ, ನವೆಂಬರ್ 12, 2019
24 °C
`ಔಷಧ ಪರಂಪರಾ' ರಾಷ್ಟ್ರೀಯ ವಿಚಾರಸಂಕಿರಣ

ಪ್ರತಿ ಗಿಡ, ಮರದಲ್ಲೂ ಔಷಧೀಯ ಗುಣ

Published:
Updated:
Prajavani

ಮೂಡುಬಿದಿರೆ: ‘ಪ್ರತಿಯೊಂದು ಗಿಡ, ಮರದಲ್ಲೂ ಔಷಧೀಯ ಗುಣಗಳಿದ್ದು, ಇಂತಹ ಸಸ್ಯ ಸಂಪತ್ತಿನ ಆಹಾರ ಹಾಗೂ ಔಷಧೀಯ ಮೌಲ್ಯಗಳನ್ನು ಅರಿತುಕೊಂಡಿದ್ದರಿಂದ ಪರಂಪರಾ ಚಿಕಿತ್ಸಾ ಪದ್ಧತಿ ಎಂಬುದು ಜನ್ಮತಳೆಯಿತು’ ಎಂದು ಹಿರಿಯ ವಿಜ್ಞಾನಿ ಡಾ. ಯು.ಎಂ.ಚಂದ್ರಶೇಖರ ಹೇಳಿದರು.

ಆಳ್ವಾಸ್ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಆಳ್ವಾಸ್ ಟ್ರೆಡಿಷನಲ್ ಮೆಡಿಸಿನಲ್ ಆರ್ಕೈವ್ ಸಂಶೋಧನಾ ಕೇಂದ್ರ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಯುಷ್ ಇಲಾಖೆಯ ಆಶ್ರಯದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣ ‘ಔಷಧ ಪರಂಪರಾ’ವನ್ನು ಉದ್ಘಾಟಿಸಿ ಮಾತನಾಡಿದರು.

‘ವೈವಿಧ್ಯ ಎಂಬುದು ಪರಂಪರಾ ಚಿಕಿತ್ಸೆಯ ಲಕ್ಷಣ. ಈ ಚಿಕಿತ್ಸೆಯಲ್ಲಿ ಯುನಾನಿ- ಸಿದ್ಧೌಷಧಗಳಂತಹ ವಿಭಾಗಗಳಿದ್ದರೂ ಹಳ್ಳಿಯ ಮೂಲವನ್ನು ಹೊಂದಿರುವ ನಾಟಿವೈದ್ಯ ಪದ್ಧತಿಯು ಪ್ರಮುಖ ಸ್ಥಾನವನ್ನು ಹೊಂದಿದೆ. ಆದರೆ ಈ ಚಿಕಿತ್ಸೆಯ ಕುರಿತು ಮಾಹಿತಿ ಕೊರತೆಯಿರುವುದರಿಂದ ಸೂಕ್ತ ಸಂಶೋಧನೆಯ ಅವಶ್ಯಕತೆಯಿದೆ. ಹೀಗೆ ಸಂಶೋಧನೆ ನಡೆಸಿದಾಗ ಸಸ್ಯಸಂಪತ್ತು ಹಾಗೂ ಚಿಕಿತ್ಸೆಯ ವೈಜ್ಞಾನಿಕ ಮೌಲ್ಯ ತಿಳಿಯುತ್ತದೆ’ ಎಂದರು

ಮುಖ್ಯ ಅತಿಥಿಯಾಗಿದ್ದ ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ ವಿ.ವಿ ಭಟ್ ಮಾತನಾಡಿ, ‘ಜ್ಞಾನ ಹಾಗೂ ವಿಜ್ಞಾನಗಳು ಎಂದಿಗೂ ಬದಲಾಗುವುದಿಲ್ಲ. ಅಗಾಧ ಜೀವವೈವಿಧ್ಯವನ್ನು ಹೊಂದಿರುವ ನಮ್ಮದೇಶದಲ್ಲಿ ಅವುಗಳನ್ನು ಗುರುತಿಸುವ ಕಾರ್ಯವನ್ನು ಆಯುರ್ವೇದ ಸಂಸ್ಥೆಗಳು ನಡೆಸಬೇಕಿದೆ’ ಎಂದು ತಿಳಿಸಿದರು. ದಕ್ಷಿಣಕನ್ನಡಜಿಲ್ಲೆಯಆಯುಷ್ಅಧಿಕಾರಿ ಮಹಮ್ಮದ್ಇಕ್ಬಾಲ್ ಮಾತನಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಡಾ. ವಿನಯ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಬದನಾಜೆ ಶಂಕರ್ ಭಟ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ನಾಟಿಪದ್ಧತಿಯ ಕುರಿತು ಸತ್ಯನಾರಾಯಣ ಭಟ್ ರಚಿಸಿರುವ ‘ಮಾಳ ಸುತ್ತಿನ ಮೂಲಿಕಾ ವೈದ್ಯ' ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಕಾಲೇಜಿನ ಟ್ರಸ್ಟಿ ಡಾ. ಹಾನ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ಟ್ರೆಡಿಷನಲ್ ಮೆಡಿಸಿನಲ್ ಆರ್ಕೈವ್‌ನ ನಿರ್ದೇಶಕ ಡಾ. ಸುಬ್ರಮಣ್ಯ ಪದ್ಯಾಣ ಪ್ರಾಸ್ತವಿಕ ಮಾತುಗಳನ್ನಾಡಿದರು. ಪ್ರಾಂಶುಪಾಲೆ ಡಾ. ಝನಿಕಾಡಿಸೋಜ,  ಡಾ. ಕೃಷ್ಣಮೂರ್ತಿ , ಡಾ. ಗೀತಾ.ಬಿ. ಮಾರ್ಕಾಂಡೆ ಇದ್ದರು.

ಪ್ರತಿಕ್ರಿಯಿಸಿ (+)