ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಮುಂಗಾರು ಚುರುಕು: ಮಂಗಳೂರಿಗೆ ಬಂದ ಎನ್‌ಡಿಆರ್‌ಎಫ್‌ ತಂಡ

Last Updated 12 ಜೂನ್ 2022, 5:28 IST
ಅಕ್ಷರ ಗಾತ್ರ

ಮಂಗಳೂರು: ಮಳೆಗಾಲದಲ್ಲಿ ಉಂಟಾಗುವ ಹಾನಿ ತಡೆಯಲು ರಾಷ್ಟ್ರೀಯ ವಿಪತ್ತು ಸ್ಪಂದನಾ ದಳ (ಎನ್‌ಡಿಆರ್‌ಎಫ್‌) ತಂಡ ಶನಿವಾರ ಸಂಜೆ ಮಂಗಳೂರು ನಗರ ತಲುಪಿದೆ.

ಮೂವರು ಅಧಿಕಾರಿಗಳು ಮತ್ತು 17 ಜವಾನರನ್ನು ಹೊಂದಿರುವ ತಂಡ ಪಣಂಬೂರಿನ ಕೇಂದ್ರ ಕೈಗಾರಿಕಾ ಭದ್ರತಾ ದಳದ ಕ್ವಾರ್ಟರ್ಸ್‌ನಲ್ಲಿ ತಂಗಿದ್ದಾರೆ.

‘ಪ್ರತಿ ಮಳೆಗಾಲದಲ್ಲೂ ಎನ್‌ಡಿಆರ್‌ ಎಫ್‌ನ ಒಂದು ತಂಡವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಕಳುಹಿಸಿಕೊಡಲಾಗುತ್ತದೆ. ಆಸುಪಾಸಿನ ಜಿಲ್ಲೆಗಳಾದ ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತತರ ಜಿಲ್ಲೆಗಳಲ್ಲಿ ವಿಪತ್ತು ಸಂಭವಿಸಿದರೆ, ಅಲ್ಲಿಗೆ ಇಲ್ಲಿಂದಲೇ ಎನ್‌ಡಿಆರ್‌ಎಫ್‌ ತಂಡವನ್ನು ಕಳುಹಿಸಲಾಗುತ್ತದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ‘ಪ್ರಜಾವಾಣಿ‘ಗೆ ತಿಳಿಸಿದರು.

ಸಿಡಿಲು ಬಡಿದು ಸಾವು

ಉಳ್ಳಾಲ: ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಕಸಬಾ ಬೆಂಗರೆ ನಿವಾಸಿ ಹೈದರ್ ಆಲಿ (38) ಉಳ್ಳಾಲ ಕೋಡಿಯಿಂದ ಸುಮಾರು 14 ಮಾರು ದೂರದಲ್ಲಿ ಸಮುದ್ರದಲ್ಲಿರುವಾಗಲೇ ಸಿಡಿಲು ಬಡಿದು ಶನಿವಾರ ಮೃತಪಟ್ಟಿದ್ದಾರೆ.

ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಹೈದರ್‌ ಆಲಿ ತನ್ನ ಸಹವರ್ತಿಗಳಾದ ಆಸಿಫ್‍ ಎಚ್, ಇಮ್ರಾನ್, ಫರಾಝ್, ಇಮ್ರಾನ್ ಮತ್ತು ಅನ್ವರ್ ಅವರೊಂದಿಗೆ ಕಸಬಾ ಬೆಂಗರೆಯಿಂದ ಎ.ಎಸ್‌.ಎಫ್ ತವಕ್ಕಲ್ ಹೆಸರಿನ ನಾಡದೋಣಿಯಲ್ಲಿ ಮೀನುಗಾರಿಕೆಗೆ ಬೆಳಿಗ್ಗೆ 5 ಗಂಟೆಗೆ ತೆರಳಿದ್ದರು. ಉಳ್ಳಾಲ ಕೋಡಿಯಿಂದ ಸುಮಾರು 14 ಮಾರು ದೂರದಲ್ಲಿ ಬೆಳಿಗ್ಗೆ 7.30ರ ಹೊತ್ತಿಗೆ ತಲುಪಿದ್ದು, ಬಲೆ ಬೀಸುತ್ತಿದ್ದಾಗ ಸಿಡಿಲು- ಮಿಂಚು ಆರಂಭಗೊಂಡಿದೆ. ಈ ವೇಳೆ ಸಿಡಿಲಿನ ಆಘಾತಕ್ಕೆ ಗಂಭೀರ ಗಾಯಗೊಂಡಿದ್ದ ಹೈದರಾಲಿಯನ್ನು ಸಹವರ್ತಿಗಳು ದೋಣಿಯಲ್ಲಿ ದಡಕ್ಕೆ ತಂದು, ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಾಗ ಮೃತಪಟ್ಟಿದ್ದಾರು.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ತಾಯಿ, ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.

ವಿದ್ಯುತ್‌ ಕಂಬಕ್ಕೆ ಹಾನಿ

ಬೆಳ್ತಂಗಡಿ: ತಾಲ್ಲೂಕಿನಲ್ಲಿ ಶನಿವಾರ ಸುರಿದ ಗಾಳಿ ಸಹಿತ ಮಳೆಗೆ ಬೆಳ್ತಂಗಡಿಯ ಹಳೆ ಸೇತುವೆ ರಸ್ತೆಯ ಅಂಬೇಡ್ಕರ್ ಭವನದ ಬಳಿ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದು ವಿದ್ಯುತ್ ಕಂಬಗಳು ಹಾಗೂ ತಂತಿಗಳು ತುಂಡಾಗಿ ಬಿದ್ದಿದೆ.

ಸಂಜೆ 5.30ರ ಸುಮಾರಿಗೆ ಮರ ಉರುಳಿ ಬಿದ್ದಿದೆ. ಹಗಲು ಹೊತ್ತಿನಲ್ಲಿ ಈ ಮರದ ಅಡಿಯಲ್ಲಿ ಬಸ್‌ ಹಾಗೂ ಇತರ ವಾಹನಗಳು ಹಾಗೂ ಜನ ಸಂಚಾರ ಇರುತ್ತದೆ. ಮರ ಉರುಳಿ ಬೀಳುವ ಸಂದರ್ಭ ಯಾವುದೇ ವಾಹನ ಅಥವಾ ಜನ ಸಂಚಾರ ಇಲ್ಲದ್ದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT