ಮಂಗಳೂರು: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್– ಪಿಜಿ) ಇಲ್ಲಿನ ಚಿಲಿಂಬಿಯ ಡಾ.ಶಿವಾನಿ ಭಟ್ ಎಲ್. 11ನೇ ರ‍್ಯಾಂಕ್ ಪಡೆದಿದ್ದಾರೆ.
ಅವರು ಚಿಲಿಂ ಬಿಯ ಗೋಕುಲ್ ಭಟ್– ಗಾಯತ್ರಿ ಭಟ್ ದಂಪತಿಯ ದ್ವಿತೀಯ ಪುತ್ರಿ. ಇಲ್ಲಿನ ಕಸ್ತೂರಬಾ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣ ಪಡೆದಿದ್ದಾರೆ.
‘ನೀಟ್ ಫಲಿತಾಂಶ ನೋಡಿ ಖುಷಿಯ ಜೊತೆ ಆಶ್ಚರ್ಯವಾಯಿತು. ಪರೀಕ್ಷೆ ಬರೆಯುವ ನಿರ್ಧಾರ ಕೈಗೊಂಡ ದಿನದಿಂದಲೇ ಸಾಕಷ್ಟು ಪರಿಶ್ರಮ ಹಾಕಿದ್ದೇನೆ. ಉನ್ನತ ಶಿಕ್ಷಣಕ್ಕೆ ಇಂಗ್ಲೆಂಡ್‌ಗೆ ಹೋಗುವ ಯೋಜನೆಯನ್ನೂ ಕೈಬಿಟ್ಟಿದ್ದೆ. ಕೊನೆಗೂ ನನ್ನ ಶ್ರಮ ಫಲ ನೀಡಿದೆ. ಜನರಲ್ ಮೆಡಿಸಿನ್ ಅಥವಾ ರೇಡಿಯೋಡಯಾಗ್ನಾಸಿಸ್ ವಿಭಾಗದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುವ ಆಶಯವಿದೆ’ ಎಂದು ಡಾ.ಶಿವಾನಿ ಭಟ್ ತಿಳಿಸಿದರು.
‘ನೀಟ್ ರದ್ದಾದಾಗ ಅದರ ಪರಿಣಾಮವನ್ನು ನಾನೂ ಎದುರಿಸಿದ್ದೇನೆ. ಆದರೂ, ಅದನ್ನೆಲ್ಲ ಮೆಟ್ಟಿನಿಂತು ಪರೀಕ್ಷೆಗಾಗಿ ಮತ್ತಷ್ಟು ಕಠಿಣ ತಯಾರಿ ನಡೆಸಿದ್ದೆ’ ಎಂದು ಅವರು ತಿಳಿಸಿದರು.