ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಸಿಗದ ನೆಟ್‌ವರ್ಕ್: ಮೊಬೈಲ್‌ ಹಿಡಿದು ಗುಡ್ಡ ಏರಿದ ವಿದ್ಯಾರ್ಥಿಗಳು

Last Updated 25 ಜುಲೈ 2020, 5:42 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ಸಾಂಕ್ರಾಮಿಕದಿಂದಾಗಿ ಶಾಲೆ–ಕಾಲೇಜುಗಳು ಆರಂಭವಾಗಿಲ್ಲ. ಆದರೆ, ಆನ್‌ಲೈನ್‌ ಪಾಠಗಳೂ ನಿಂತಿಲ್ಲ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್‌ನ ಸಮಸ್ಯೆ ತೀವ್ರವಾಗುತ್ತಿದ್ದು, ಇದಕ್ಕಾಗಿ ಜಿಲ್ಲೆಯ ವಿದ್ಯಾರ್ಥಿಗಳು ಹರಸಾಹಸ ಮಾಡುತ್ತಿದ್ದಾರೆ.

ಕಡಬ ತಾಲ್ಲೂಕಿನ ಕೊಯಿಲಾ ಗ್ರಾಮದ ಕುದ್ಲೂರು ಪರಿಸರದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಗುಡ್ಡ ಹತ್ತಿ ನೆಟ್‌ವರ್ಕ್‌ಗಾಗಿ ಪ್ರಯಾಸ ಪಡುತ್ತಿದ್ದಾರೆ. ಇಲ್ಲಿ ಯಾವುದೇ ಸಿಮ್‌ನ ನೆಟ್‌ವರ್ಕ್ ಕೂಡ ಸಿಗುತ್ತಿಲ್ಲ.

‘ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲವನ್ನೇ ನೋಡಲಾಗದ ಸ್ಥಿತಿ ನಮ್ಮದಾಗಿದೆ. ಮಾತನಾಡಲು ನೆಟ್‌ವರ್ಕ್ ಸಿಗುತ್ತಿಲ್ಲ. ಇನ್ನು ಇಂಟರ್‌ನೆಟ್ ಬಳಸುವುದು ಕನಸಿನ ಮಾತಾಗಿದೆ. ಲಾಕ್‌ಡೌನ್ ಬಳಿಕ ವಿದ್ಯಾಭ್ಯಾಸಕ್ಕಾಗಿ ಇಂಟರ್‌ನೆಟ್ ಮೊರೆ ಹೋಗುವುದು ಅನಿವಾರ್ಯವಾಗಿದೆ. ಆದರೆ ನೆಟ್ ಸಿಗದ ಕಾರಣ ಸಮಸ್ಯೆ ಎದುರಾಗಿದೆ. ಈ ರೀತಿ ಮುಂದುವರಿದರೆ ಹಳ್ಳಿಯ ಮಕ್ಕಳು ಅನಕ್ಷರಸ್ಥರಾದರೆ ಅಚ್ಚರಿ ಇಲ್ಲ’ ಎಂದು ಗ್ರಾಮದ ಮಹರೂಫ್‌ ಆತೂರು ತಿಳಿಸಿದ್ದಾರೆ.

ಗುಡ್ಡದಲ್ಲೇ ಟೆಂಟ್‌: ಆನ್‌ಲೈನ್‌ ತರಗತಿಗಾಗಿ ನೆಟ್‌ವರ್ಕ್ ಸಿಗದೇ ಪರದಾಡುತ್ತಿರುವ ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಗ್ರಾಮದ ಪೆರ್ಲದ ವಿದ್ಯಾರ್ಥಿಗಳು ಗುಡ್ಡದ ಮೇಲೆ ಟೆಂಟ್‌ ನಿರ್ಮಿಸಿಕೊಂಡು ಪಾಠ ಕೇಳುತ್ತಿದ್ದಾರೆ.

ಮಳೆಗಾಲ ಇರುವುದರಿಂದ ಗುಡ್ಡದ ಮೇಲೆ ಹೆಚ್ಚಿನ ಸಮಯ ಕೂರಲು ಸಾಧ್ಯವಿಲ್ಲ. ಮಳೆಯಿಂದ ರಕ್ಷಣೆಗಾಗಿ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ಶೀಟ್‌ನ ಟೆಂಟ್‌ ನಿರ್ಮಿಸಿಕೊಂಡಿದ್ದಾರೆ. ಸೊಳ್ಳೆ ನಿಯಂತ್ರಿಸಲು ಟೆಂಟ್‌ ಸುತ್ತ ಸೀರೆಯನ್ನು ಕಟ್ಟಿದ್ದಾರೆ. ಪಿಯುಸಿ, ಪದವಿ ಹಾಗೂ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ 9 ವಿದ್ಯಾರ್ಥಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ನೀಡಬೇಕಾದ ಒಬ್ಬ ಉಪನ್ಯಾಸಕಿಗೂ ಇದೇ ಟೆಂಟ್ ಆಧಾರವಾಗಿದೆ.

***

ನಮ್ಮೂರಿಗೆ ಟವರ್ ಅಳವಡಿಸುವುದನ್ನು ಸವಾಲಾಗಿ ಸ್ವೀಕರಿಸಿ ಕಾರ್ಯಪ್ರವೃತ್ತನಾಗಿದ್ದೇನೆ. ಇದಕ್ಕಾಗಿ ಹಳ್ಳಿಯಿಂದ ದಿಲ್ಲಿಗೆ ಹೋಗಬೇಕಾಗಿ ಬಂದರೂ ಹೋಗುವೆ.
ಮಹರೂಫ್ ಆತೂರು, ಕುದ್ಲೂರು ನಿವಾಸಿ

ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಅನಿವಾರ್ಯವಾಗಿದ್ದು, ಗುಡ್ಡ ಬೆಟ್ಟವನ್ನೇರಿ ಸಂಪರ್ಕ ಸಾಧಿಸುವ ಸ್ಥಿತಿ ಇದೆ. ಮಕ್ಕಳು ಗುಡ್ಡದಲ್ಲೇ ಟೆಂಟ್‌ ನಿರ್ಮಿಸಿ ಸಂಪರ್ಕ ಸಾಧಿಸಿದ್ದಾರೆ
ದಿವಾಕರ ಹೆಬ್ಬಾರ್‌, ಪೆರ್ಲದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT