ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ಬುದ್ಧಿವಂತರ ಜಿಲ್ಲೆಯಲ್ಲಿ ಹದಗೆಟ್ಟ ‘ಸಂಪರ್ಕ’

ದೈನಂದಿನ ಜೀವನಕ್ಕೂ ಅಡೆತಡೆ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಹೆಚ್ಚಿದ ಆತಂಕ
Last Updated 22 ಜೂನ್ 2020, 19:30 IST
ಅಕ್ಷರ ಗಾತ್ರ

ಮಂಗಳೂರು: ಟೆಲಿಫೋನ್ ಕ್ರಾಂತಿಯಿಂದ 90ರ ದಶಕದಲ್ಲಿ ಹೆಸರು ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಪ್ರಾಕೃತಿಕ ವಿಕೋಪ ಸಂಭವಿಸಿದರೆ ನಿಗೂಢರಾಗುವ (ಸಂಪರ್ಕ ರಹಿತ) ಅಪಾಯ ಹೆಚ್ಚು.

ಬಹುತೇಕ ಗ್ರಾಮೀಣ ಪ್ರದೇಶಗಳು ಬಿಎಸ್ಸೆನ್ನೆಲ್ ನೆಟ್‌ವರ್ಕ್ ಆಧರಿಸಿದ್ದು, ಜಿಲ್ಲೆಯಲ್ಲಿ 421 ಟವರ್‌ಗಳಿವೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡರೆ, ಹೆಚ್ಚಿನ ಟವರ್‌ಗಳ ಬ್ಯಾಟರಿ ಹಾಗೂ ಡೀಸೆಲ್ ಜನರೇಟರ್‌ ಬ್ಯಾಕ್‌ಅಪ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸಿಬ್ಬಂದಿ ಕೊರತೆ ಹಾಗೂ ಆರ್ಥಿಕ ಕೊರತೆ ಕಾರಣ ಬಿಎಸ್ಸೆನ್ನೆಲ್ ಸಮಸ್ಯೆ ಎದುರಿಸುತ್ತಿದೆ. ಇದರಿಂದಾಗಿ ವಿದ್ಯುತ್ ಹೋದರೆ, ನೆಟ್‌ವರ್ಕ್ ಸ್ತಬ್ಧ.

ಕಂದಾಯ:ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ವಯರ್‌ಲೆಸ್ ವ್ಯವಸ್ಥೆ ಇದ್ದರೂ, ನಿರ್ವಹಣೆ ಇಲ್ಲದ ಪರಿಣಾಮ ಸಂಪರ್ಕ ಇಲ್ಲದಂತಾಗಿದೆ. ಇದರ ರಿಪೀಟರ್ ಬಂಟ್ವಾಳ ತಾಲ್ಲೂಕಿನ ಕಾರಿಂಜೇಶ್ವರದಲ್ಲಿದ್ದು, ಕಾರ್ಯ ನಿರ್ವಹಿಸಿದ್ದೇ ಅಪರೂಪ ಎನ್ನುತ್ತಾರೆ ಇಲಾಖೆಯ ಅಧಿಕಾರಿಯೊಬ್ಬರು.

ಈ ರಿಪೀಟರ್ ವ್ಯಾಪ್ತಿಯು ಸುಮಾರು 25 ಕಿ.ಮೀ.ಗೆ ಸೀಮಿತವಾಗಿದ್ದು, ಹಳ್ಳಿಗಳಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ತುರ್ತು ನೆರವಿಗೆ ಹೋಗುವ ಅಧಿಕಾರಿ, ಸಿಬ್ಬಂದಿಯೂ ಸಂಪರ್ಕ ರಹಿತವಾಗಿ ಬಿಡುವ ಅಪಾಯ ಇದೆ ಎಂದು ಅವರು ಸಮಸ್ಯೆ ಬಿಚ್ಚಿಟ್ಟರು.

ಒಂದೇ ಸ್ಯಾಟಲೈಟ್ ಫೋನ್

ಎಲ್ಲ ನೆಟ್‌ವರ್ಕ್‌ಗಳು ಕಡಿತಗೊಂಡಾಗ ಸಂಪರ್ಕ ಸಾಧಿಸುವ ಸಲುವಾಗಿ ಜಿಲ್ಲೆಗೆ ಒಂದು ಸ್ಯಾಟಲೈಟ್ ಫೋನ್ ನೀಡಲಾಗಿದೆ. ಒಂದೇ ಫೋನ್‌ ಇರುವ ಕಾರಣ ಆಂತರಿಕ ಸಂಭಾಷಣೆ ಕಷ್ಟಸಾಧ್ಯವಾಗಿದೆ.

‘ಕೇವಲ ಪ್ರಕೃತಿ ವಿಕೋಪ ಮಾತ್ರವಲ್ಲ, ಸರ್ಕಾರದ ಪಡಿತರ, ವಿವಿಧ ಇಲಾಖೆಗಳ ಕೆಲಸ–ಕಾರ್ಯಗಳು ಸೇರಿದಂತೆ ಎಲ್ಲದಕ್ಕೂ ಜಿಲ್ಲೆಯಲ್ಲಿ ನೆಟ್‌ವರ್ಕ್‌ ಸಮಸ್ಯೆ ಕಾಡುತ್ತಿದೆ. ಆದರೆ, ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ’ ಎಂದು ಮಲೆನಾಡು ಹಿತರಕ್ಷಣಾ ವೇದಿಕೆಯ ಟಿ.ಎನ್.ಸತೀಶ್ ದೂರಿದರು.

ಇನ್ನೂ ಮಾಸದ ನೆನಪು

ಕಳೆದ ವರ್ಷ ಬೆಳ್ತಂಗಡಿ ತಾಲ್ಲೂಕಿನ ದಿಡುಪೆಯಲ್ಲಿ ಭೂಕುಸಿತ ಸಂಭವಿಸಿದ್ದು, ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಆರಂಭದಲ್ಲಿ ತೀವ್ರ ಹಿನ್ನಡೆ ಉಂಟಾಗಿತ್ತು. ಗ್ರಾಮೀಣ ಭಾಗವಾದ ಕಾರಣ ಖಾಸಗಿ ಮೊಬೈಲ್ ಕಂಪೆನಿಗಳ ಸೇವೆ ಇರಲಿಲ್ಲ. ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಬಿಎಸ್ಸೆನ್ನೆಲ್ ಟವರ್‌ಗಳು ಕಾರ್ಯ ನಿರ್ವಹಿಸಿರಲಿಲ್ಲ. ಎರಡು ಮೂರು ದಶಕದ ಹಿಂದೆ ಇದ್ದ, ದೂರವಾಣಿಗಳೂ (ಲ್ಯಾಂಡ್‌ಲೈನ್) ಈಗಿಲ್ಲ.

ನಕ್ಸಲ್ ನಿಗ್ರಹ ಪಡೆಯೇ ಆಧಾರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಪೊಲೀಸ್ ವಯರ್‌ಲೆಸ್ ವ್ಯವಸ್ಥೆ ಮಾತ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ಠಾಣೆಗಳಲ್ಲೂ ಬೇಸ್ ಸ್ಟೇಷನ್ ಇದ್ದರೂ, ವ್ಯಾಪ್ತಿ 100 ಮೀಟರ್ಸ್‌ ಮಾತ್ರ. ಹೀಗಾಗಿ ಒಳ ಪ್ರದೇಶಗಳಲ್ಲಿ ಕಾರ್ಯಸಾಧುವಾಗಿಲ್ಲ.

ಆದರೆ, ಮೊಬೈಲ್ ರಿಪೀಟರ್ ಹೊಂದಿರುವ ಒಂದು ಬೊಲೆರೋ 4x4 ವಾಹನ ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್)ಯಲ್ಲಿ ಇದೆ. ಇದು ನೆಟ್‌ವರ್ಕ್ ಹಾಗೂ ಜಿಪಿಎಸ್ ಹೊಂದಿದ್ದು, ಸುಮಾರು 25 ಕಿ.ಮೀ. ವ್ಯಾಪ್ತಿಯಲ್ಲಿ ಸಂಪರ್ಕ ಸಾಮರ್ಥ್ಯ ಹೊಂದಿದೆ. ಸದ್ಯಕ್ಕೆ ಇದೊಂದೇ ಆಧಾರವಾಗಿದೆ.

ನೆಟ್‌ವರ್ಕ್‌ ಬ್ಲಾಕ್‌ಸ್ಪಾಟ್

‘ರಕ್ಷಣಾ ಕಾರ್ಯಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಅದಕ್ಕಾಗಿ ‘ನೆಟ್‌ವರ್ಕ್‌ ಬ್ಲಾಕ್ ಸ್ಪಾಟ್‌’ ಸರ್ವೆ ಮಾಡಿ ವರದಿ ನೀಡಲಾಗಿದೆ. ಅಲ್ಲದೇ, ಪೊಲೀಸ್ ಇಲಾಖೆಯ ವಯರ್‌ಲೆಸ್ ಅನ್ನು ಡಿಜಿಟಲ್‌ಗೆ ಪರಿವರ್ತಿಸುವ ಬಗ್ಗೆ ಪ್ರಸ್ತಾವ ಕಳುಹಿಸಲಾಗಿದೆ. ಪ್ರಕೃತಿ ವಿಕೋಪ ಉಸ್ತುವಾರಿ ಸಮಿತಿ ಸಭೆಯಲ್ಲೂ ಬಿಎಸ್ಸೆನ್ನೆಲ್ ಟವರ್‌ಗಳಿಗೆ ಬ್ಯಾಕ್ಅಪ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT