ಗುರುವಾರ , ಜುಲೈ 29, 2021
27 °C
ಉಕ್ಕಿ ಹರಿದ ಮಲೆನಾಡಿನ ನದಿಗಳು l ಕೆಲವೆಡೆ ಗದ್ದೆ ನಾಟಿ ಕಾರ್ಯವು ಸ್ಥಗಿತ, ಭೂಕುಸಿತ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನಾದ್ಯಂತ ಶುಕ್ರವಾರ ಧಾರಾಕಾರ ಮಳೆ ಸುರಿಯಿತು. ಗುರುವಾರ ತಡರಾತ್ರಿ ಯಿಂದ ಪ್ರಾರಂಭವಾದ ಮಳೆ ಇಡೀ ರಾತ್ರಿ ಎಡೆಬಿಡದೆ ಸುರಿದಿದ್ದರಿಂದ ಹೇಮಾವತಿ ಸೇರಿದಂತೆ ತಾಲ್ಲೂಕಿನ ನದಿಗಳೆಲ್ಲವೂ ಉಕ್ಕಿ ಹರಿದವು.

ಮುಗ್ರಹಳ್ಳಿ, ಕಿತ್ತಲೆಗಂಡಿ, ಬೆಟ್ಟದ ಮನೆ, ಉಗ್ಗೆಹಳ್ಳಿ, ಸಬ್ಬೆನಹಳ್ಳಿ ಸೇರಿ ದಂತೆ ಹೇಮಾವತಿ ನದಿಪಾತ್ರದ ಗದ್ದೆ ಬಯಲೆಲ್ಲವೂ ಜಲಾವೃತವಾಗಿದ್ದು, ನಾಟಿಗಾಗಿ ಸಿದ್ಧ ಮಾಡಿದ್ದ ಗದ್ದೆಗಳೆಲ್ಲವೂ ಹಾನಿಯಾಗಿವೆ.

ಹೊರಟ್ಟಿ, ಮುಗ್ರಹಳ್ಳಿ, ಅಗ್ರಹಾರ ಮುಂತಾದ ಕಡೆಗಳಲ್ಲಿ ನಾಟಿಗಾಗಿ ಕಿತ್ತಿದ್ದ ಸಸಿಯೆಲ್ಲವೂ ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದು ಹಾನಿಯುಂಟಾಗಿದೆ. ಮಳೆ ಹೆಚ್ಚಾಗಿರುವುದರಿಂದ ಗದ್ದೆ ನಾಟಿ ಕಾರ್ಯವು ಸ್ಥಗಿತವಾಗಿದ್ದು, ಸಸಿಮಡಿಗಳಲ್ಲಿ ನೀರು ನಿಂತಿರುವು ದರಿಂದ ಸಸಿಯೆಲ್ಲವೂ ಕರಗುವ ಸಂಕಷ್ಟ ಎದುರಾಗಿದೆ.

ಕಳೆದ ವರ್ಷದ ಮಳೆಯಿಂದ ಹಾನಿಯಾಗಿದ್ದ ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ರುಗುಡಿಗೆ, ಅಣಂಬಿ, ಬಿಳಗಲಿ ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಶುಕ್ರವಾರ ಮತ್ತೆ ಭೂಕುಸಿತವಾಗಿದ್ದು, ಈ ಗ್ರಾಮಗಳ ಸಂಪರ್ಕವು ಕಡಿತವಾಗಿದೆ.

ಹೆಸ್ಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತತ್ಕೊಳ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು, ಮಣ್ಣೆಲ್ಲವೂ ರಸ್ತೆ ಮೇಲೆ ರಾಶಿಯಾಗಿದೆ. ಇದೇ ರಸ್ತೆಯ ಬನದೇವಿ ಎಸ್ಟೇಟ್ ಬಳಿ ಕಳೆದ ಬಾರಿ ಕುಸಿದಿದ್ದ ರಸ್ತೆ ಬದಿಗೆ ನಿರ್ಮಿಸಿರುವ ತಡೆಗೋಡೆ ಸಮೀಪ ಮತ್ತೆ ಕುಸಿತ ಉಂಟಾಗಿದ್ದು, ಮಳೆ ಹೆಚ್ಚಾದಲ್ಲಿ ತತ್ಕೊಳ– ಮೂಡಿಗೆರೆ ಸಂಪರ್ಕ ರಸ್ತೆ ಕಡಿತವಾಗುವ ಭೀತಿ ಉಂಟಾಗಿದೆ. ಕಳೆದ ಮಳೆಗಾಲದಲ್ಲಿ ಕುಸಿತ ಕಂಡಿದ್ದ ಕಾಫಿ ತೋಟಗಳಲ್ಲಿ ಮತ್ತೆ ಭೂ ಕುಸಿತ ಉಂಟಾಗುವ ಅಪಾಯ ಎದುರಾಗಿದ್ದು, ಹೆಚ್ಚಾಗಿರುವ ಮಳೆಯಿಂದ ಜನರು ಭೀತರಾಗಿದ್ದಾರೆ.

ಹೊಸಂಪುರ ಸಮೀಪ ರಸ್ತೆಗೆ ಅಡ್ಡವಾಗಿ ಮರ ಬಿದ್ದಿದ್ದು, ತಲಗೂರು– ಸಬ್ಬೆನಹಳ್ಳಿ ರಸ್ತೆ ಸಂಪರ್ಕವು ಕಡಿತವಾಗಿತ್ತು. ಮಳೆ ಹೆಚ್ಚಾಗಿದ್ದರಿಂದ ಶುಕ್ರವಾರ ಸಂತೆ ದಿನವಾದರೂ ಜನರು ಮನೆಯಿಂದ ಹೊರಬರದೇ ವ್ಯಾಪಾರ ವಹಿವಾಟುಗಳೆಲ್ಲವೂ ಸಂಪೂರ್ಣವಾಗಿ ಸ್ಥಗಿತವಾಗಿತ್ತು.

ವರ್ಷಧಾರೆ ಅಬ್ಬರ

ಕೊಟ್ಟಿಗೆಹಾರ: ಬಣಕಲ್, ಬಾಳೂರು ಹೋಬಳಿಗಳಲ್ಲಿ ಧಾರಾಕಾರ ಮಳೆ ಯಾಗುತ್ತಿದೆ. ಚಾರ್ಮಾಡಿ ಘಾಟಿಯಲ್ಲಿ ಸಣ್ಣಪುಟ್ಟ ಜಲಪಾತಗಳು ಮೈದುಂಬಿವೆ.  ಕೊಟ್ಟಿಗೆಹಾರದಲ್ಲಿ ಶುಕ್ರವಾರ ಬೆಳಿಗ್ಗೆ 7.5 ಸೆಂ.ಮೀ ಮಳೆಯಾಗಿದೆ. ಚರಂಡಿ ಹೂಳು ತೆಗೆಯದ ಕಾರಣ ಬಣಕಲ್– ಕೊಟ್ಟಿಗೆಹಾರ– ಕೆ.ಎಂ.ರಸ್ತೆಯಲ್ಲಿ ಅಲ್ಲಲ್ಲಿ ನೀರು ಹರಿಯುತ್ತಿದೆ. 

ಮೈದುಂಬಿದ ಭದ್ರೆ

ಕಳಸ: ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆಯ ವರೆಗೂ ಧಾರಾಕಾರ ಮಳೆ ಸುರಿದಿದೆ.

ಮಳೆಯ ಕಾರಣಕ್ಕೆ ಜನರು ಮನೆಯ ಒಳಗೆ ಉಳಿದಿದ್ದಾರೆ. ಮಳೆಯ ಕಾರಣಕ್ಕೆ ಶುಕ್ರವಾರ ಕೃಷಿ ಕಾರ್ಯದಿಂದಲೂ ಬಹುತೇಕ ಜನರು
ವಿರಾಮ ಪಡೆದಿದ್ದಾರೆ. ಭಾರೀ ಮಳೆಯಿಂದ ಕಳೆದ ವರ್ಷ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಮತ್ತೆ ಭೀತಿ ಸೃಷ್ಟಿಸಿದೆ.

ಉಕ್ಕಿದ ತುಂಗೆ

ಶೃಂಗೇರಿ: ತಾಲ್ಲೂಕಿನಾದ್ಯಾಂತ ಮಳೆ ಚುರುಕಾಗಿದ್ದು, ಶುಕ್ರವಾರ ಪುನರ್ವಸು ಮಳೆ ಆರ್ಭಟ ಹೆಚ್ಚಾಗಿದೆ. ಎರಡು ದಿನದಿಂದ ಮಳೆ ಜಾಸ್ತಿಯಾಗಿದೆ, ಕಿಗ್ಗಾ ಮತ್ತು ಕೆರೆಕಟ್ಟೆಯಲ್ಲಿ ಉತ್ತಮ ಮಳೆಯಾಗಿದೆ. ತುಂಗಾನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕೃಷಿ ಚಟುವಟಿಕೆ ಎಂದಿನಂತೆ ಇದ್ದರೂ, ಅಡಿಕೆ ತೋಟಕ್ಕೆ ಬೋರ್ಡೋ ಸಿಂಪಡಣೆ ಸಾಧ್ಯವಾಗಲಿಲ್ಲ. ಜೂನ್‍ನಲ್ಲಿ ಮೊದಲ ಬಾರಿ ಬೋರ್ಡೋ ಸಿಂಪಡಣೆ ಮಾಡಿದ್ದ ರೈತರು, ಜುಲೈ 3ನೇ ವಾರದಲ್ಲಿ 2ನೇ ಅವಧಿಯ ದ್ರಾವಣ ಸಿಂಪಡಣೆಗೆ ಮುಂದಾಗಿದ್ದಾರೆ.

ಭತ್ತದ ಬಿತ್ತನೆ ಕಾರ್ಯವೂ ಚುರುಕಾಗಿದ್ದು, ಜುಲೈ ಅಂತ್ಯದ ವೇಳೆಗೆ ನಾಟಿ ಕಾರ್ಯ ಆರಂಭವಾಗುತ್ತದೆ. ಈಗಾಗಲೇ ಶೇ 80 ರಷ್ಟು ಬಿತ್ತನೆ ಕಾರ್ಯ ಮುಗಿದಿದೆ.

ಕೃಷಿಯತ್ತ ಒಲವು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಟ್ಟಣದಿಂದ ಊರಿಗೆ ಬಂದ ಯುವ ಸಮೂಹ ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡಿದೆ. ಹಡೀಲು ಬಿದ್ದಿದ್ದ ಗದ್ದೆಯನ್ನು ಗದ್ದೆ ಸಾಗುವಳಿ ಮಾಡಲು ಮುಂದಾಗಿದೆ. ಹೊನ್ನವಳ್ಳಿ ಗ್ರಾಮದಲ್ಲಿ ಗುಂಪು ರೈತರು ಒಟ್ಟಾಗಿ ಭತ್ತದ ಸಾಗುವಳಿ ಮಾಡಲು 30 ಎಕರೆ ಜಾಗವನ್ನು ಸಿದ್ಧಪಡಿಸುತ್ತಿದೆ.

ತರೀಕೆರೆಯಲ್ಲಿ ಮಳೆ

ತರೀಕೆರೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಮಳೆ ಮುಂದುವರಿದಿದ್ದು, ತಾಲ್ಲೂಕಿನಲ್ಲಿ ಒಟ್ಟಾರೆ

9.94 ಸೆಂ.ಮೀ.ಮಳೆ ದಾಖಲಾಗಿದೆ.

ಗುರುವಾರ ತಡರಾತ್ರಿ ವೇಳೆಯಲ್ಲಿ ಉತ್ತಮ ಮಳೆಯಾಗಿದ್ದು, ಶುಕ್ರವಾರದಂದು ಆಗಾಗ ಬಿಡುವಿನ ಮಧ್ಯೆ ಮೂರ್ನಾಲ್ಕು ತಾಸುಗಳ ಕಾಲ ಮಳೆಯಾಗಿದೆ. ಇದು ರೈತರಲ್ಲಿ ಹರ್ಷ ಮೂಡಿಸಿದೆ. ಲಕ್ಕವಳ್ಳಿ, ರಂಗೇನಹಳ್ಳಿ, ಹುಣಸಘಟ್ಟ, ಉಡೇವಾ, ತ್ಯಾಗದ ಬಾಗಿ, ಲಿಂಗದಹಳ್ಳಿ ಗ್ರಾಮಗಳಲ್ಲಿಯೂ ಉತ್ತಮ ಮಳೆಯಾಗುತ್ತಿದೆ.

ಮನೆಗೆ ಹಾನಿ

ಲೋಕನಾಥಪುರ (ಬಾಳೆಹೊನ್ನೂರು): ಬಾಳೆಹೊನ್ನೂರು ಸುತ್ತಮುತ್ತ ಉತ್ತಮ ಮಳೆಯಾಗುತ್ತಿದೆ. ಮಳೆಯಿಂದಾಗಿ ಜಯಪುರ ಸಮೀಪದ ಲೋಕನಾಥಪುರ ಗ್ರಾಮದ ಹೂಗೆಬೈಲ್ ರಮೇಶ್ ಎಂಬುವವರ ಮನೆಯ ಮೇಲೆ ಬೃಹತ್ ಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು