ಬುಧವಾರ, ಅಕ್ಟೋಬರ್ 23, 2019
22 °C

ನೆಲ್ಯಾಡಿಯಲ್ಲಿ ಹೆದ್ದಾರಿ ತಡೆ ಪ್ರತಿಭಟನೆ ನಾಳೆ

Published:
Updated:

ಪುತ್ತೂರು: ‘ಶಿರಾಡಿ ಗ್ರಾಮದ ಅಡ್ಡಹೊಳೆಯಿಂದ ಬಿ.ಸಿ. ರೋಡ್ ವರೆಗಿನ ರಾಷ್ಟ್ರೀಯ ಹೆದ್ದಾರಿ–75 ಅತ್ಯಂತ ಅವ್ಯವಸ್ಥೆಯಿಂದ ಕೂಡಿದ್ದು, ಚತುಷ್ಪಥ ರಸ್ತೆಯ ಹೆಸರಲ್ಲಿ ಈ ಹೆದ್ದಾರಿಯನ್ನು ಸಂಪೂರ್ಣ ಹಾಳುಗೆಡವಲಾಗಿದೆ. ಹೆದ್ದಾರಿಯನ್ನು ಸುರಕ್ಷಿತ ಬಳಕೆಗೆ ಯೋಗ್ಯಗೊಳಿಸಲು ಆಗ್ರಹಿಸಿ  ಇದೇ 10ರಂದು ನೆಲ್ಯಾಡಿಯಲ್ಲಿ ಒಂದು ಗಂಟೆ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ವರ್ಗಿಸ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘3 ವರ್ಷಗಳಿಂದ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗಿದೆ. 6 ತಿಂಗಳಿನಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ರಸ್ತೆಯನ್ನು ಅಗೆದು ಹೊಂಡ ನಿರ್ಮಿಸಲಾಗಿದೆ. ನೂರಾರು ಮಂದಿ ವಾಹನ ಚಾಲಕರು ಈ ಹೊಂಡಗಳಿಗೆ ಬಿದ್ದು ಆಸ್ಪತ್ರೆ ಸೇರುವಂತಾಗಿದ್ದು, ರಸ್ತೆಯಲ್ಲಿ ಸಂಚಾರ ಮಾಡುವ ಮಂದಿ ಪ್ರಾಣಭೀತಿಗೆ ಒಳಗಾಗಿದ್ದಾರೆ.  ಕಾಮಗಾರಿ ಬಗ್ಗೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು  ದೂರಿದರು.

‘ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದ್ದು, ಜನತೆಯ ಪಾಲಿಗೆ ಅಪಾಯವನ್ನುಂಟು ಮಾಡುವ ಸ್ಥಿತಿ  ಇಲ್ಲಿದೆ. ಕಳೆದ ಮಳೆಗಾಲದಲ್ಲಿ ವಳಾಲು ಬೈಲು ಎಂಬಲ್ಲಿಗೆ ನೆರೆ ನೀರು ನುಗ್ಗಿ ಮೂರು ಮನೆಗಳು ಕುಸಿಯಲು ಈ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯೇ ಕಾರಣವಾಗಿತ್ತು ಎಂದು ದೂರಿದ ಅವರು ಕಾಮಗಾರಿ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರಿಗೆ ಸಮರ್ಪಕವಾದ ಮಾಹಿತಿ ನೀಡಬೇಕು. ಪ್ರಸ್ತುತ ಇರುವ ಹೆದ್ದಾರಿಯನ್ನು ಅಗೆದು ಹೊಂಡ ಮಾಡಿರುವ ಕಡೆ ಮರು ಡಾಮರೀಕರಣ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು. ಈ ಹೆದ್ದಾರಿಯಲ್ಲಿ ಸಂಭವಿಸುವ ಸಾವು-ನೋವುಗಳಿಗೆ ರಸ್ತೆ ದುಃಸ್ಥಿತಿಗೆ ಕಾರಣವಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (ಎನ್ಎಚ್ಎಐ)ಹೊಣೆಗಾರರನ್ನಾಗಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಜಿಲ್ಲಾಧಿಕಾರಿ,  ಶಾಸಕರು, ಸಂಸದರು, ಸಚಿವರಿಗೆ ಮನವಿ ನೀಡಲಾಗಿದೆ. ಯಾರೂ ಇದುವರೆಗೆ ಸ್ಪಂದಿಲ್ಲ. ಹಾಗಾಗಿ ಇದೇ 10ರಂದು ಹೆದ್ದಾರಿ ಸಂಚಾರ ತಡೆದಯ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಪ್ರತಿಭಟನೆಯಲ್ಲಿ  23 ವಿವಿಧ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ರಸ್ತೆ ತಡೆ ಬಳಿಕ  ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಸಮಾವೇಶ ನಡೆಯಲಿದೆ’ ಎಂದು ತಿಳಿಸಿದರು.

ಹೋರಾಟ ಸಮಿತಿ ಕಾರ್ಯದರ್ಶಿ ಜೋಸ್ ಕೆ.ಜೆ., ಸದಸ್ಯ ಆದರ್ಶ್‌ ಜೋಸೆಫ್, ನೆಲ್ಯಾಡಿ ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ., ನೆಲ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಕರ್ನಾಟಕ ನೀತಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಪ್ರಮೋದ್  ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)