ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಚತುಷ್ಪಥ- ಭೂಸ್ವಾಧೀನಕ್ಕೆ ತಡೆಯಾಜ್ಞೆ ಬಿಸಿ

ಮಂಗಳೂರು– ಮೂಡುಬಿದಿರೆ– ಕಾರ್ಕಳ ರಸ್ತೆ ನಿರ್ಮಾಣ ಮತ್ತಷ್ಟು ಕಗ್ಗಂಟು ಸಾಧ್ಯತೆ
Last Updated 11 ಆಗಸ್ಟ್ 2021, 4:55 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು– ಮೂಡುಬಿದಿರೆ– ಕಾರ್ಕಳ ಚತುಷ್ಪಥ ರಸ್ತೆಯ ಯೋಜನೆಯಲ್ಲಿ ಕೃಷಿ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ಸಿಗುತ್ತಿಲ್ಲ ಎಂದು, ಭೂಸ್ವಾಧೀನದ ವಿರುದ್ಧ ಸಾಲೂರು, ತೆಂಕ ಎಡಪದವು, ಪುತ್ತಿಗೆ, ಪಡುಮಾರ್ನಾಡು ಗ್ರಾಮಗಳ ಕೃಷಿ ಸಂತ್ರಸ್ತರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದು, ಇದು ಹೆದ್ದಾರಿ ಪ್ರಾಧಿಕಾರಕ್ಕೆ ತಲೆಬಿಸಿ ಉಂಟು ಮಾಡಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಯೋಜನೆಯ ಭೂಸ್ವಾಧೀನಕ್ಕೂ ಮೊದಲೇ ತರಾತುರಿಯಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿಸಿರುವುದು ಕೃಷಿ ಸಂತ್ರಸ್ತರ ಸಿಟ್ಟಿಗೆ ಕಾರಣವಾಗಿದ್ದು, ಚತುಷ್ಪಥ ರಸ್ತೆ ಕಾಮಗಾರಿ ಕಗ್ಗಂಟಾಗಿ ಪರಿಣಮಿಸಿದೆ. ಕೃಷಿ ಭೂಮಿ ಕಳೆದುಕೊಳ್ಳುವ ಸಂತ್ರಸ್ತರು ‘ನಮ್ಮ ಭೂಮಿಗೆ’ ನ್ಯಾಯಯುತ ಪರಿಹಾರ ಬೇಕು ಎಂದು ಹೋರಾಟದ ಹಾದಿ ಹಿಡಿದ್ದಾರೆ. ಹೆದ್ದಾರಿ ಪ್ರಾಧಿಕಾರದ ತಾರತಮ್ಯ ನಿಲುವಿನ ವಿರುದ್ಧ ಯೋಜನೆ ವ್ಯಾಪ್ತಿಯ ಮತ್ತಷ್ಟು ಗ್ರಾಮಗಳ ಕೃಷಿ ಸಂತ್ರಸ್ತರು
ಅವಾರ್ಡ್‌ ವಿರುದ್ಧ ಹೈಕೋರ್ಟ್‌ ಮೋರೆ ಹೋಗುವ ಸಾಧ್ಯತೆ ಇದೆ.

ಪರಿವರ್ತಿತ ಭೂಮಿಗೆ ಸಿಗುವಷ್ಟು ಪರಿಹಾರ ಕೃಷಿ ಭೂಮಿಗೆ ಸಿಗುತ್ತಿಲ್ಲ. ಚತುಷ್ಪಥ ರಸ್ತೆ ಯೋಜನೆಯಲ್ಲಿ 600ಕ್ಕೂ ಹೆಚ್ಚು ಕುಟುಂಬಗಳು ಭೂಮಿ, ಅಂಗಡಿ, ಕಟ್ಟಡ, ತೋಟ, ಕೃಷಿ ಜಮೀನುಗಳನ್ನು ಕಳೆದುಕೊಳ್ಳುತ್ತಿವೆ. ಪರಿವರ್ತಿತ ಭೂಮಿಗೆ ಬಂಪರ್‌ ಅವಾರ್ಡ್‌ ಘೋಷಣೆ ಆಗಿದೆ. ಆದರೆ, ಕೃಷಿ ಭೂಮಿಗೆ ಪರಿವರ್ತಿತ ಭೂಮಿಗಿಂತ 10 ಪಟ್ಟು ಕಡಿಮೆ ಪರಿಹಾರ ಸಿಗುತ್ತಿದೆ ಎನ್ನುತ್ತಾರೆ ಕೃಷಿ ಸಂತ್ರಸ್ತರು.

‘ಸಾಲೂರು, ತೆಂಕ ಎಡಪದವು, ಪುತ್ತಿಗೆ, ಪಡುಮಾರ್ನಾಡು ಕೃಷಿ ಸಂತ್ರಸ್ತರು ಅವಾ‌ರ್ಡ್‌ ವಿರುದ್ಧ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದೇವೆ. ಉಳಿದ 16 ಗ್ರಾಮದ ಕೃಷಿಕರು ಅವಾರ್ಡ್‌ ಘೋಷಣೆ ಆದ ತಕ್ಷಣವೇ ಹೈಕೋರ್ಟ್‌ ಮೊರೆಹೋಗುತ್ತೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೇಂದ್ರ ಮೌಲ್ಯಮಾಪನ ಸಮಿತಿ (ಸಿವಿಸಿ) ನಿಯಮ ಉಲ್ಲಂಘನೆ ಮಾಡುತ್ತಿದೆ’ ಎಂದು ಸಂತ್ರಸ್ತ ಅಶ್ವಿನ್‌ ನಾಯಕ್‌ ಹೇಳಿದರು.

‘2016ರಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಯೋಜನಗೆ 3ಎ ಅಧಿಸೂಚನೆ ಹೊರಡಿಸಲಾಗಿತ್ತು. ಅದಾದನಂತರ ಉದ್ದೇಶಿತ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅವಕಾಶ ನೀಡಿರಲಿಲ್ಲ. ತುಂಡು ಭೂಮಿ ಇದ್ದವರು ಪರಿವರ್ತನೆ ಮಾಡಿಕೊಂಡಿದ್ದಾರೆ. ಆದರೆ, ಕೃಷಿ ಭೂಮಿ ಹೊಂದಿರುವವರು ಯಾರೂ ಪರಿವರ್ತನೆ ಮಾಡಿಕೊಂಡಿಲ್ಲ. ಅಂಥವರಿಗೆ ಕಡಿಮೆ ಅವಾರ್ಡ್‌ ಆಗಿದೆ. ಹೆದ್ದಾರಿ ಪ್ರಾಧಿಕಾರವು ತೆಂಕಮಿಜಾರು ಗ್ರಾಮದಲ್ಲಿ ಪರಿವರ್ತಿತ ಭೂಮಿಗೆ ಸೆಂಟ್ಸ್‌ಗೆ ₹2.68 ಲಕ್ಷ ಪರಿಹಾರ ನೀಡುತ್ತಿದೆ. ಕೃಷಿ ಭೂಮಿಗೆ ಪ್ರತಿ ಸೆಂಟ್ಸ್‌ಗೆ ₹ 27 ಸಾವಿರ
ಮಾತ್ರ ನೀಡಲು ಒಪ್ಪಿಗೆ ನೀಡಿದೆ. ಕೃಷಿ ಸಂತ್ರಸ್ತರಿಗೂ ನ್ಯಾಯಯುತ
ಪರಿಹಾರ ನೀಡಬೇಕು ಎಂದು ಸಂತ್ರಸ್ತರು ಅವಾರ್ಡ್‌ ವಿರುದ್ಧ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದೇವೆ’ ಎಂದು ಕೃಷಿ ಸಂತ್ರಸ್ತ ಬ್ರಿಜೇಶ್‌ ಶೆಟ್ಟಿ ಹೇಳಿದರು.

‘ಸಿವಿಸಿ ಅನ್ವಯ ಪರಿಹಾರ’

‘ಸರ್ಕಾರದ ಮಾರ್ಗಸೂಚಿ ಹಾಗೂಹೊಸ ಭೂಸ್ವಾಧೀನ ಕಾನೂನು ಅನ್ವಯವೇ ಪರಿಹಾರ ನೀಡಲಾಗುತ್ತಿದೆ. ಹನ್ನೆರಡೂವರೆ ಸೆಂಟ್ಸ್‌ ಕಡಿಮೆ ವರ್ಗಾವಣೆ ಆಗಿರುವುದನ್ನುರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಒಪ್ಪುತ್ತಿರಲಿಲ್ಲ. ಇದನ್ನು ಕೂಡ ಗಮನಕ್ಕೆ ತೆಗೆದುಕೊಳ್ಳುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಪರಿಹಾರ ನೀಡದೆ ಯಾವುದೇ ಯೋಜನೆ ಪೂರ್ಣವಾಗಲ್ಲ. ಸಂತ್ರಸ್ತರಿಗೆ ನೀಡುವ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದ್ದರೆ ಅಂತಹವರು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಬಹುದು. ನ್ಯಾಯಾಲಯಕ್ಕೆ ಹೋಗುವ ಅವಕಾಶವೂ ಇದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

‘ಭೂಸ್ವಾಧೀನ ನಡೆಯುತ್ತಿದೆ’

ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೇಂದ್ರ ಮೌಲ್ಯಮಾಪನ ಸಮಿತಿಯ (ಸಿವಿಸಿ) ನಿಯಮದಂತೆ ಪರಿಹಾರ ನೀಡುತ್ತಿದೆ. ಇದರಲ್ಲಿ ತಾರತಮ್ಯ ನಡೆಯುತ್ತಿಲ್ಲ. 1950ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೀತಿಯಂತೆ ಸ್ವಾಧೀನ ಕಾರ್ಯ ನಡೆದಿದೆ. ಅಕ್ಟೋಬರ್‌ ವೇಳೆಗೆ ಕಾಮಗಾರಿ ಆರಂಭಗೊಳ್ಳುವ ನೀರಿಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶು ಮೋಹನ್‌ ತಿಳಿಸಿದ್ದಾರೆ.

‘45 ಕಿ.ಮೀ ಚತುಷ್ಪಥ ರಸ್ತೆ’

ಮಂಗಳೂರು – ಕಾರ್ಕಳ– ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ 45 ಕಿ.ಮೀ ರಸ್ತೆ ₹ 851.88 ಕೋಟಿ ವೆಚ್ಚದಲ್ಲಿ ಚತುಷ್ಪತ ಕಾಮಗಾರಿ ನಿರ್ಮಾಣಗೊಳ್ಳಲಿದೆ. ಮಧ್ಯಪ್ರದೇಶದ ಭೂಪಾಲ್‌ ದಿಲೀಪ್‌ ಬಿಲ್ಡ್‌ಕಾನ್‌ ಲಿಮಿಟೆಡ್‌ ಗುತ್ತಿಗೆ ಟೆಂಡರ್‌ ಪಡೆದುಕೊಂಡಿದೆ. ಬಿಕರನಕಟ್ಟೆ ಮೇಲ್ಸೇತುವೆ ಬಳಿಯಿಂದ ಕಾರ್ಕಳ ತಾಲ್ಲೂಕಿನ ಸಾಣೂರುವರೆಗೆ ಚತುಷ್ಪತ ರಸ್ತೆ ನಿರ್ಮಾಣವಾಗಲಿದೆ. ಗುರುಪುರ ಮತ್ತು ಮೂಡುಬಿದಿರೆಯಲ್ಲಿ ಬೈಪಾಸ್‌, ಕೈಕಂಬ ಮತ್ತು ಮೂಡುಬಿದಿರೆ ಬಳಿ ಎರಡು ಮೇಲ್ಸೇತುವೆ, 10 ಕೆಳಸೇತುವೆಗಳ ನಿರ್ಮಾಣವು ಯೋಜನೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT