ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169 ಅನ್ನು ಕುಲಶೇಖರದಿಂದ ಸಾಣೂರುವರೆಗೆ ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಭೂ ಮಾಲೀಕರ ಹೋರಾಟ ಸಮಿತಿಯು ನಗರದ ತಾರೆತೋಟದಲ್ಲಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕರ ಕಚೇರಿ ಎದರು ಮಂಗಳವಾರ ಪ್ರತಿಭಟನಾ ಧರಣಿ ಆರಂಭಿಸಿತು.
‘ಈ ಸಾಂಕೇತಿಕ ಧರಣಿ ಎಂಟು ದಿನ ಮುಂದುವರಿಯಲಿದೆ. ಆ ಬಳಿಕವೂ ನಮಗೆ ನ್ಯಾಯಯುತ ಪರಿಹಾರ ಸಿಗದೇ ಹೋದರೆ ಅನಿರ್ದಿಷ್ಟಾವಧಿ ಹೋರಾಟ ಕೈಗೊಳ್ಳಲಿದ್ದೇವೆ’ ಎಂದು ಸಮಿತಿಯ ಅಧ್ಯಕ್ಷೆ ಮರಿಯಮ್ಮ ಥಾಮಸ್ ತಿಳಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಈ ಯೋಜನೆಯ ವಿರೋಧಿಗಳಲ್ಲ. ಪ್ರಾಧಿಕಾರದಿಂದ ನಾವು ಭಿಕ್ಷೆಯನ್ನು ಕೇಳುತ್ತಿಲ್ಲ. ಹೈಕೋರ್ಟ್ ಆದೇಶದಂತೆ ಹಾಗೂ ಜಿಲ್ಲಾಧಿಕಾರಿಯವರ ಮಧ್ಯಸ್ಥಿಕೆ ಮೂಲಕ ನಿಗದಿಯಾದ ಮೊತ್ತವನ್ನು ಭೂಮಿ ಬಿಟ್ಟುಕೊಟ್ಟವರಿಗೆ ಪರಿಹಾರ ನೀಡಲಿ ಎಂಬುದಷ್ಟೇ ನಮ್ಮ ಬೇಡಿಕೆ’ ಎಂದರು.
ನನ್ನ ಜಾಗದಲ್ಲಿ ಹೆಂಚಿನ ಕಾರ್ಖಾನೆ ಇದೆ. ಆರ್‌ಟಿಸಿಯಲ್ಲೂ ಈ ಬಗ್ಗೆ ಉಲ್ಲೇಖ ಇದೆ. ಆದರೂ ನನಗೆ ಕಡಿಮೆ ಪರಿಹಾರವನ್ನು ನಿಗದಿ ಮಾಡಲಾಗಿದೆ.ಗೋವರ್ಧನ ಶೆಟ್ಟಿ, ಹೆದ್ದಾರಿ ವಿಸ್ತರಣೆ ಯೋಜನೆಯ ಸಂತ್ರಸ್ತ
‘ಎನ್‌ಎಚ್‌ಎಐ ಬಿಟ್ಟಿಯಾಗಿ ಹೆದ್ದಾರಿಯನ್ನು ನಿರ್ಮಿಸುವುದಿಲ್ಲ. ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ, ಅದನ್ನು ಬಳಸುವ ವಾಹನಗಳಿಂದ ಶುಲ್ಕ ಸಂಗ್ರಹ ಮಾಡಲಿದೆ. ಅವರು ಮಾಡುವುದೂ ವ್ಯಾಪಾರವಲ್ಲವೇ’ ಎಂದು ಪ್ರಶ್ನೆ ಮಾಡಿದರು.
ಸಮಿತಿ ಖಜಾಂಚಿ ರತ್ನಾಕರ ಶೆಟ್ಟಿ, ‘ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿಯವರು ಭೂಮಿ ಬಿಟ್ಟುಕೊಟ್ಟವರ ಪರ ಆದೇಶ ನೀಡಿ ಆರು ತಿಂಗಳ ಬಳಿಕವೂ ಪರಿಹಾರ ಪಾವತಿಸಲು ಕ್ರಮ ಕೈಗೊಂಡಿಲ್ಲ ಏಕೆ’ ಎಂದು ಪ್ರಶ್ನಿಸಿದರು.
‘ನಾವು ನಮ್ಮ ಹಣವನ್ನು ಬಳಸಿ ಕಾನೂನು ಹೋರಾಟ ನಡೆಸಿದೆವು. ಅಧಿಕಾರಿಗಳು ನಮ್ಮದೇ ತೆರಿಗೆ ಹಣ ಬಳಸಿ ನಮ್ಮ ವಿರುದ್ಧವೇ ಹೋರಾಟ ನಡೆಸುತ್ತಿದ್ದಾರೆ’ ಎಂದರು.
ಸರ್ಕಾರಿ ಜಮೀನಿನಲ್ಲಿ ಮಾತ್ರ ಹೆದ್ದಾರಿ ಕಾಮಗಾರಿ ನಡೆಸಲಾಗಿದೆ. ಯೋಜನೆಗೆ ಬೇಕಾಗುವ ಶೇ 80ರಷ್ಟು ಜಮೀನಿನ ಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.ಬೃಜೇಶ್ ಚೌಟ, ಹೆದ್ದಾರಿ ವಿಸ್ತರಣೆ ಯೋಜನೆಯ ಸಂತ್ರಸ್ತ
ಸಮಿತಿಯ ಬೃಜೇಶ್ ಶೆಟ್ಟಿ, ‘ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇ ಕಾಮಗಾರಿಗೆ ಅಧಿಸೂಚನೆ ಆಗಿದ್ದು 2018ರಲ್ಲಿ. ಆ ಕಾಮಗಾರಿ ಪೂರ್ಣಗೊಂಡು ಹೆದ್ದಾರಿಯಲ್ಲಿ ವಾಹನಗಳು ಚಲಿಸುತ್ತಿವೆ. 2016ರಲ್ಲೇ ಅಧಿಸೂಚನೆ ಆಗಿದ್ದರೂ ಕುಲಶೇಖರ– ಸಾಣೂರು ಚತುಷ್ಫಥ ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆಯೇ ಇನ್ನೂ ಮುಗಿದಿಲ್ಲ. ನಮ್ಮ ಜನಪ್ರತಿನಿಧಿಗಳು ಕೇವಲ ಉತ್ತರ ಕುಮಾರರು. ಕಾಮಗಾರಿ ಕಾಲಮಿತಿಯೊಳಗೆ ನಡೆಸುವ ಯೋಗ್ಯತೆಯೇ ಅವರಿಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಈ ಕಾಮಗಾರಿಗೆ ಅಧಿಸೂಚನೆ ಆದ ಬಳಿಕ 14 ಮಂದಿ ವಿಶೇಷ ಭೂಸ್ವಾಧೀನ ಅಧಿಕಾರಿಗಳು, ಎನ್‌ಎಚ್‌ಎಐನ ನಾಲ್ವರು ಯೋಜನಾ ನಿರ್ದೇಶಕರು ಹಾಗೂ ಮೂವರು ಪ್ರಾದೇಶಿಕ ಅಧಿಕಾರಿಗಳು ಬದಲಾಗಿದ್ದಾರೆ. ₹ 5 ಕೋಟಿಗೂ ಹೆಚ್ಚು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಒಬ್ಬ ಒಬ್ಬ ಪ್ರಾದೇಶಿಕ ಅಧಿಕಾರಿಯನ್ನು ಸಿಬಿಐ ಪೊಲೀಸರು ಬಂಧಿಸಿದ್ದರು. ಈ ಯೋಜನೆಯಲ್ಲಿ ಎಷ್ಟೆಲ್ಲ ಭ್ರಷ್ಟಾಚಾರ ನಡೆದಿದೆ ನೀವೇ ಊಹಿಸಿ’ ಎಂದರು.
ಸಮಿತಿಯ ಸಂಚಾಲಕ ಪ್ರಕಾಶಚಂದ್ರ, ಉಪಾಧ್ಯಕ್ಷ ಮನೋಹರ ಭಟ್ ಕುಡುಪು, ಕಾರ್ಯದರ್ಶಿ ವಿಶ್ವಜಿತ್, ಖಜಾಂಚಿ ಜಯರಾಮ ಪೂಜಾರಿ, ಸಾಣೂರು ನರಸಿಂಹ ಕಾಮತ್, ಕಿರಣ್ ಕ್ಯಾಸ್ಟಲಿನೊ ಮೊದಲಾದವರು ಇದ್ದರು.
ಧರಣಿಗೆ ಶತಾಯುಷಿ ಸಂತ್ರಸ್ತ ಸಾಥ್
ಹೆದ್ದಾರಿ ವಿಸ್ತರಣೆ ಕಾಮಗಾರಿಗಾಗಿ ಭೂಮಿ ಕಳೆದುಕೊಳ್ಳಲಿರುವ ಮೂಡುಬಿದಿರೆ ಮೆನ್ನಬೆಟ್ಟು ಸೀತಾರಾಮ ಶೆಟ್ಟಿ ಅವರು ಧರಣಿಯಲ್ಲಿ ಭಾಗವಹಿಸಿದರು. ಅವರಿಗೆ ಧರಣಿಯ ವೇದಿಕೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ‘ಸೀತಾರಾಮ ಶೆಟ್ಟಿ ಅವರು ಎರಡು ದಿನಗಳ ಹಿಂದಷ್ಟೇ 100ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಎಂ.ವೀರಪ್ಪ ಮೊಯಿಲಿಯವರಂತಹ ನಾಯಕರಿಗೂ ರಾಜಕೀಯ ಗುರು ಆಗಿದ್ದ ಇವರು ಈ ವಯಸ್ಸಿನಲ್ಲೂ ಹೋರಾಟ ನಡೆಸಬೇಕಾಗಿ ಬಂದಿದೆ. ಇವರ ಹೋರಾಟ ಎಲ್ಲ ಸಂತ್ರಸ್ತರಿಗೂ ಮಾದರಿ’ ಎಂದು ಮರಿಯಮ್ಮ ಥಾಮಸ್ ಹೇಳಿದರು.
ನೂರಾರು ಕೋಟಿ ರೂಪಾಯಿ ಅವ್ಯವಹಾರ
‘ನಾವು ಹಿಂದೆ ಇದ್ದ ಮಾರ್ಗದಲ್ಲೇ ಚತುಷ್ಫಥ ನಿರ್ಮಾಣವಾಗಲಿದೆ ಎಂದು ಭಾವಿಸಿದ್ದೆವು. ಆದರೆ ಕೆಲವು ರಾಜಕೀಯ ಮುಖಂಡರಿಗೆ ಎಲ್ಲೆಲ್ಲ ಮಾರ್ಗ ಬದಲಾವಣೆ ಮಾಡಲಾಗುತ್ತದೆ ಎಂಬುದು ಸ್ಪಷ್ಟವಾಗಿ ತಿಳಿದಿತ್ತು. ಅವರು ಬೇನಾಮಿ ಹೆಸರಿನಲ್ಲಿ ಅಲ್ಲೆಲ್ಲ ತರಾತುರಿಯಲ್ಲಿ ಜಾಗ ಖರೀದಿಸಿ ಭೂಪರಿವರ್ತನೆ ಮಾಡಿಸಿಕೊಂಡಿದ್ದರು. ಅಂತಹವರಿಗೆ ಗರಿಷ್ಠ ಪರಿಹಾರ ನೀಡಲಾಗಿದೆ. ಇದರ ಹಿಂದೆ ನೂರಾರು ಕೋಟಿ ಅವ್ಯವಹಾರ ನಡೆದಿದೆ’ ಎಂದು ಹೋರಾಟ ಸಮಿತಿಯ ಬೃಜೇಶ್ ಚೌಟ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.