ಗುರುವಾರ , ಡಿಸೆಂಬರ್ 1, 2022
27 °C
ಎನ್‌ಇಸಿಎಫ್‌ ಆರೋಪ * ಲೋಕಾಯುಕ್ತ ಪೊಲೀಸರಿಗೆ ದೂರು

ಮರ ಮೌಲ್ಯಮಾಪನದಲ್ಲಿ ಭಾರಿ ಅಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರನ್ನು ಬಿಕರ್ನಕಟ್ಟೆಯಿಂದ ಸಾಣೂರಿನವರೆಗೆ ಚತುಷ್ಫಥವನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗಾಗಿ ಕಡಿಯುವ ಮರಗಳ ಮೌಲ್ಯಮಾಪನದಲ್ಲಿ ಅರಣ್ಯ ಇಲಾಖೆ ಭಾರಿ ಅಕ್ರಮ ನಡೆಸಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್‌) ಆರೋಪಿಸಿದೆ.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ಹಾಗೂ ಅರಣ್ಯ ಇಲಾಖೆಯ ಜಾಗೃತ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಎನ್ಇಸಿಎಫ್‌ ದೂರು ನೀಡಿದೆ. ಕಾಮಗಾರಿ ಸಲುವಾಗಿ ಇದುವರೆಗೆ ಸುಮಾರು 50 ಮರಗಳನ್ನು ಕಡಿಯಲಾಗಿದ್ದು,  ಲೋಕಾಯುಕ್ತ ಪೊಲೀಸರ ಸೂಚನೆ ಮೇರೆಗೆ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಎನ್‌ಇಸಿಎಫ್‌ನ ಬೆನೆಡಿಕ್ಟ್‌ ಡಿಸೋಜಾ, ‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಅರಣ್ಯ ಇಲಾಖೆಯು ಕುಲಶೇಖರದಿಂದ ಸಾಣೂರುವರೆಗೆ 1,227 ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡಿದೆ. ಗುರುಪುರದಿಂದ ಮಿಜಾರಿನವರೆಗೆ ಮರಗಳನ್ನು ಕಡಿಯುವ ಕಾರ್ಯವನ್ನು ಆರಂಭಿಸಲಾಗಿದೆ. ಈ ಮರಗಳಿಗೆ ತೀರಾ ಕಡಿಮೆ ಮೌಲ್ಯ ನಿಗದಿಪಡಿಸಲಾಗಿದೆ’ ಎಂದು ದೂರಿದರು.

‘ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆ 1,227 ಮರಗಳಿಗೆ ಒಟ್ಟು ₹13.61 ಲಕ್ಷ , ಕಡಿಯುವ ಪ್ರತಿ ಮರಕ್ಕೆ 10 ಗಿಡಗಳಂತೆ  ಒಟ್ಟು 12,230 ಗಿಡಗಳನ್ನು ಬೆಳೆಸಲು ₹ 74.12 ಲಕ್ಷ ಹಾಗೂ ಸರ್ವೇ ಶುಲ್ಕ₹ 15.24 ಲಕ್ಷ ನಿಗದಿಪಡಿಸಿದೆ. ಇತರ ಶುಲ್ಕ ಸೇರಿ ಒಟ್ಟು ₹ 91.34 ಲಕ್ಷವನ್ನು ಅರಣ್ಯ ಇಲಾಖೆಗೆ ಎನ್‌ಎಚ್‌ಎಐ ಪಾವತಿಸಿದೆ’ ಎಂದರು.

‘ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್‌.ಎ.ಬೊಬ್ಡೆ ಅವರು ಮರಗಳ ಮೌಲ್ಯಮಾಪನಕ್ಕೆ ಸಮಿತಿಯೊಂದನ್ನು ರಚಿಸಿದ್ದರು. ಆ ಸಮಿತಿ ಶಿಫಾರಸಿನ ಮೇರೆಗೆ ಮರಗಳ ಮೌಲ್ಯಮಾಪನಕ್ಕೆ ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. ಅದರ ಪ್ರಕಾರ ಮರವು ಎಷ್ಟು ವರ್ಷ ಹಳೆಯದು ಎಂಬ ಆಧಾರದಲ್ಲಿ ಅದರ ಮೌಲ್ಯ ನಿಗದಿಪಡಿಸಬೇಕಾಗುತ್ತದೆ. ಪ್ರತಿ ವರ್ಷಕ್ಕೆ ₹ 74,500ರಷ್ಟು ಮೌಲ್ಯವನ್ನು ಲೆಕ್ಕ ಹಾಕಬೇಕು. ಅರಣ್ಯ ಇಲಾಖೆ ಆ ಪ್ರಕಾರ ಲೆಕ್ಕ ಹಾಕಿಲ್ಲ’ ಎಂದು ಅವರು ಆರೋಪಿಸಿದರು.

-0-

‘ಹಲಸಿನ ಮರಕ್ಕೆ ಕಡಿಮೆ ದರ ನಿಗದಿ’

‘ಸೂರಲ್ಪಾಡಿ ಎಂಬಲ್ಲಿ ಹೆದ್ದಾರಿ ಪಕ್ಕದಲ್ಲಿ ಭಾರಿ ಗಾತ್ರದ ಹಲಸಿನ ಮರವನ್ನು ಕಾಮಗಾರಿಗಾಗಿ ಕಡಿದಿದ್ದಾರೆ. ಮಾಹಿತಿ ಹಕ್ಕಿನಡಿ ಅರಣ್ಯ ಇಲಾಖೆ ನೀಡಿದ ವಿವರಗಳ ಪ್ರಕಾರ ಈ ಮರ ಕೇವಲ 2 ಮೀ ಎತ್ತರ ಹಾಗೂ 1.5 ಮೀ ಸುತ್ತಳತೆಯನ್ನು ಹೊಂದಿದೆ. ಆದರೆ ಸ್ಥಳದಲ್ಲಿ ಭಾರಿ ಗಾತ್ರದ ದಿಮ್ಮಿಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆ ನೀಡಿದ ಮಾಹಿತಿ ಸಂಪೂರ್ಣ ಸುಳ್ಳು’ ಎಂದು ಬೆನೆಡಿಕ್ಟ್‌ ಡಿಸೋಜಾ ಆರೋಪಿಸಿದರು.

‘ಸೂರಲ್ಪಾಡಿ ಬಳಿಯ ರೈನ್‌ ಟ್ರೀ 2 ಮೀ ಎತ್ತರ ಹಾಗೂ 3.30 ಮೀ ಸುತ್ತಳತೆ ಹೊಂದಿದೆ ಎಂದು ಇಲಾಖೆ ಮಾಹಿತಿ ನೀಡಿತ್ತು. ಕಡಿದು ಹಾಕಿದ ಆ ಮರವನ್ನು ನೋಡಿದಾಗ ಮರವು ಅದಕ್ಕಿಂತ ಹತ್ತಿಪ್ಪತ್ತು ಪಟ್ಟು ಹೆಚ್ಚು ಎತ್ತರ ಇತ್ತು.  ಅದು ನೂರು ವರ್ಷಕ್ಕೂ ಹಳೆಯ ಮರ’ ಎಂದರು.

‘ಹಲಸಿನ ಮರಕ್ಕೆ ಮಾರುಕಟ್ಟೆಯಲ್ಲಿ ಪ್ರತಿ ಘನ ಅಡಿಗೆ (ಸಿಎಫ್‌ಟಿ) ₹ 5 ಸಾವಿರಕ್ಕೂ ಅಧಿಕ ದರ ಇದೆ. ಅರಣ್ಯ ಇಲಾಖೆ ಇಷ್ಟು ಕಡಿಮೆ ಲೆಕ್ಕ ತೋರಿಸಿರುವುದು ಸಂಶಯಕ್ಕೆ ಮಾಡಿಕೊಟ್ಟಿದೆ. ಮರಗಳನ್ನು ರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆಯೇ ಲೂಟಿಕೋರರ ಜೊತೆ ಕೈ ಜೋಡಿಸಿದೆ’ ಎಂದು ಎನ್‌ಇಸಿಎಫ್‌ನ ರಾಜ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ ದೂರಿದರು. 

‘ಕಾಮಗಾರಿಯನ್ನು ಎನ್‌ಎಚ್‌ಎಐ ನಡೆಸುತ್ತಿದ್ದರೂ, ಮರಗಳಿರುವ ಜಾಗ ರಾಜ್ಯ ಸರ್ಕಾರಕ್ಕೆ ಸೇರಿದೆ. ಹಾಗಾಗಿ ಮರಗಳ ಮೌಲ್ಯವನ್ನು ಕಟ್ಟಿಸಿಕೊಂಡು ಅವುಗಳನ್ನು ಎನ್‌ಎಚ್‌ಎಐಗೆ ಬಿಟ್ಟುಕೊಟ್ಟಿರುವುದು ಸರಿಯಲ್ಲ. ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಭಾರಿ ನಷ್ಟ ಉಂಟಾಗಿದೆ’ ಎಂದರು.

-0-

‘ನಿಖರ ಅಳತೆ ಇನ್ನೂ ನಡೆದಿಲ್ಲ’

‘ಮರ ಕಡಿಯಲು ಅನುಮತಿ ನೀಡುವ ಮುನ್ನ ಕಣ್ಣಳತೆಯಲ್ಲಿ ಮರದ ಎತ್ತರ ಹಾಗೂ ಸುತ್ತಳತೆಯನ್ನು ಅಂದಾಜು ಮಾಡಲಾಗಿದೆ. ಮರಗಳ ನಿಖರ ಲೆಕ್ಕ ತಿಳಿಯುವುದು ಅವುಗಳನ್ನು ಕಡಿದ ಬಳಿಕವೇ. ಕಡಿದ ಮರಗಳ ದಿಮ್ಮಿಗಳನ್ನು ಕೂಲಂಕಷವಾಗಿ ಅಳತೆ ಮಾಡಿ ಲೆಕ್ಕಾ ಹಾಕಿ ಅದರ ಪ್ರಕಾರ ಮರಗಳ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತದೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್‌ ಕುಮಾರ್‌ ವೈ.ಕೆ ಸಮರ್ಥಿಸಿಕೊಂಡರು. 

‘ಮರಗಳು ಎನ್‌ಎಚ್‌ಎಐ ಜಾಗದಲ್ಲೇ ಇರುವುದರಿಂದ ಅವುಗಳ ಮೌಲ್ಯವನ್ನು ಪ್ರಾಧಿಕಾರದಿಂದ ಕಟ್ಟಿಸಿಕೊಂಡು ಮರಗಳನ್ನು ಅವರಿಗೆ ಬಿಟ್ಟುಕೊಟ್ಟಿದ್ದೇವೆ. ಕಣ್ಣಳತೆಯಲ್ಲಿ ಅಂದಾಜು ಮಾಡುವಾಗ, ಮರದಿಂದ ಕೊಂಬೆಗಳು ಆರಂಭವಾಗುವ ಜಾಗದವರೆಗೆ ಮಾತ್ರ ಅದರ ಎತ್ತರವನ್ನು ಪರಿಗಣಿಸುತ್ತಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಎನ್‌ಇಸಿಎಫ್‌ನ ಹರೀಶ್‌ ರಾಜ್‌ಕುಮಾರ್‌, ದಿನೇಶ್‌ ಹೊಳ್ಳ, ಜಯಪ್ರಕಾಶ್ ಇದ್ದರು.

 ದಕ್ಷಿಣ ಕನ್ನಡ ಜಿಲ್ಲೆಗೆ ವೃಕ್ಷ ಸಮಿತಿಯನ್ನು ರಚಿಸಿಲ್ಲ. ಹಾಗಾಗಿ ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಿ ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡಲಾಗಿದೆ

- ಡಾ.ದಿನೇಶ್‌ ಕುಮಾರ್‌ ವೈ.ಕೆ, ಡಿಸಿಎಫ್‌ ದಕ್ಷಿಣ ಕನ್ನಡ

ಯಾವುದೇ ಯೋಜನೆಗೆ ಮರ ಕಡಿಯಲು ವೃಕ್ಷ ಸಮಿತಿಯ ಅನುಮೋದನೆ ಅಗತ್ಯ. ವೃಕ್ಷ ಸಮಿತಿಯ ಶಿಫಾರಸು ಇಲ್ಲದೆ ಹೆದ್ದಾರಿ ಕಾಮಗಾರಿಗೆ 1227 ಮರ ಕಡಿಯಲು ಅನುಮತಿ ನೀಡಿದ್ದು ಕಾನೂನುಬಾಹಿರ

- ಶಶಿಧರ ಶೆಟ್ಟಿ, ಎನ್‌ಇಸಿಎಫ್‌, ರಾಜ್ಯ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು