ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಕರ್ಫ್ಯೂ: ನಗರದಲ್ಲಿ 45 ಚೆಕ್‌ಪೋಸ್ಟ್‌

ಶೇ 70 ರಷ್ಟು ಸಿಬ್ಬಂದಿ ಕಾರ್ಯಾಚರಣೆಗೆ: ಶಶಿಕುಮಾರ್
Last Updated 10 ಏಪ್ರಿಲ್ 2021, 13:04 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ಸರ್ಕಾರದ ಸೂಚನೆ ಹಾಗೂ ಜಿಲ್ಲಾಧಿಕಾರಿ ನಿರ್ದೇಶನದಂತೆ ನಗರದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 45 ಚೆಕ್‌ಪೋಸ್ಟ್‌ಗಳನ್ನು ಅಳವಡಿಸಿ ಬಂದೋಬಸ್ತ್ ಮಾಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯ ವ್ಯಾಪ್ತಿಯ ಹೊರಗೂ ಕೆಲವು ಪ್ರದೇಶಗಳಲ್ಲಿ ಸುಗಮ ಸಂಚಾರವನ್ನು ಖಾತರಿಪಡಿಸಲು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಪಿಎಸ್‌ಐಗಿಂತ ಹೆಚ್ಚಿನ ದರ್ಜೆಯ ಅಧಿಕಾರಿ ಸೇರಿದಂತೆ 8ರಿಂದ 10 ಜನ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇಲಾಖೆಯ ಶೇ 70ರಷ್ಟು ಸಿಬ್ಬಂದಿಯನ್ನು ರಾತ್ರಿ ಕರ್ಫ್ಯೂ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

ಕರ್ಫ್ಯೂ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯೊಳಗೆ ಅನಗತ್ಯ ವಾಹನಗಳ ಸಂಚಾರ, ಜನರ ಓಡಾಟ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಾಹನ ಜಪ್ತಿ ಮಾಡಲಾಗುವುದು. ಹಾಗಾಗಿ ರಾತ್ರಿ ಪಾಳಿ ಕೆಲಸ ಮಾಡುವವರು ಸೇರಿದಂತೆ 10 ಗಂಟೆಯೊಳಗೆ ತಮ್ಮ ನಿಗದಿತ ತಾಣವನ್ನು ಸೇರಿರಬೇಕು. ಹಾಲು, ಪೇಪರ್ ತರುವ ನೆಪದಲ್ಲಿಯೂ ಸಾರ್ವಜನಿಕರು ಯಾರೂ ಈ ಕರ್ಫ್ಯೂ ಅವಧಿಯಲ್ಲಿ ಓಡಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಅಗತ್ಯ ವೈದ್ಯಕೀಯ ಹಾಗೂ ಹಾಲು, ಪತ್ರಿಕೆ, ಎಪಿಎಂಸಿಗೆ ತರಕಾರಿ ಹಣ್ಣು ಹಂಪಲುಗಳ ವಾಹನ ಸಾಗಾಟ ಅಬಾಧಿತವಾಗಿರುತ್ತದೆ. ಕರ್ಫ್ಯೂ ಅವಧಿಯಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳಿಗೆ ಪ್ರಯಾಣಿಕರನ್ನು ಕರೆತರಲು ಅಥವಾ ತಲುಪಿಸಲು ಸಾರ್ವಜನಿಕ ವಾಹನಗಳನ್ನೇ ಬಳಸಬೇಕು. ಒಂದು ವೇಳೆ ತೀರಾ ಅಗತ್ಯವಾದಲ್ಲಿ ತಲುಪಿಸುವವರು ಪ್ರಯಾಣಿಕರ ಟಿಕೆಟ್‌ಗಳನ್ನು ತೋರಿಸಿದ್ದಲ್ಲಿ ನಿರ್ದಿಷ್ಟ ಸಂದರ್ಭಗಳಲ್ಲಿ ಅವಕಾಶ ಕಲ್ಪಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಆದರೆ ಆ ನೆಪದಲ್ಲಿ ವಿನಾಕಾರಣ ಸಂಚಾರಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.

ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT