ಶನಿವಾರ, ಮೇ 8, 2021
20 °C
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣ

ಲಸಿಕೆ ನೀಡಿಕೆ ತ್ವರಿತಗೊಳಿಸಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲಾಡಳಿತವು ಲಸಿಕಾ ಕಾರ್ಯಕ್ರಮವನ್ನು ಮತ್ತಷ್ಟು ಚುರುಕುಗೊಳಿಸಲು ಮುಂದಾಗಿದೆ. ಬೃಹತ್‌ ಸಂಸ್ಥೆಗಳು, ಕಾಲೇಜುಗಳಲ್ಲಿ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಜೊತೆಗೆ ಆರೋಗ್ಯ ಕಾರ್ಯಕರ್ತೆಯರು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾ ಕಾರ್ಯಕ್ರಮದ ತರಬೇತಿ ನೀಡಲು ನಿರ್ಧರಿಸಿದೆ.

ಈಗಾಗಲೇ ಜಿಲ್ಲೆಯ ಶೇ 36 ರಷ್ಟು ಜನರಿಗೆ ಕೋವಿಡ್–19 ತಡೆ ಲಸಿಕೆಗಳನ್ನು ಹಾಕಲಾಗಿದೆ. ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಕೋವಿಡ್–19 ಪ್ರಕರಣಗಳಿಗೆ ಕಡಿವಾಣ ಹಾಕಲು ಯೋಜನೆ ರೂಪಿಸಲಾಗಿದೆ.

45 ವರ್ಷಕ್ಕೂ ಮೇಲಿನ ಒಟ್ಟು 4.17 ಲಕ್ಷ ಜನರಿಗೆ ಹಾಗೂ 60 ವರ್ಷಕ್ಕಿಂತ ಹೆಚ್ಚಿನ 2 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಇದೆ. ಈಗಾಗಲೇ 2.22 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಸದ್ಯದ ಸ್ಥಿತಿಯಲ್ಲಿ ಲಸಿಕಾ ಕಾರ್ಯಕ್ರಮ ತೃಪ್ತಿದಾಯಕವಾಗಿದ್ದು, ನಿತ್ಯ 4 ಸಾವಿರ ಇದ್ದ ಲಸಿಕಾ ಗುರಿಯನ್ನು ಮಂಗಳವಾರದಿಂದ 9 ಸಾವಿರಕ್ಕೆ ಏರಿಸಲಾಗಿದೆ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ, ಕೋವಿಡ್ ನೋಡಲ್‌ ಅಧಿಕಾರಿ ಡಾ.ಬಿ.ವಿ. ರಾಜೇಶ್‌ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎನ್‌ಜಿಒ, ಯುವಕ ಸಂಘಗಳ ಮೂಲಕ ಲಸಿಕೆ ಪಡೆಯಲು ಜಾಗೃತಿ ಮೂಡಿಸಲಾಗುವುದು. ಜಿಲ್ಲೆಯಲ್ಲಿ 393 ಆರೋಗ್ಯ ಉಪ ಕೇಂದ್ರಗಳಿದ್ದು, ಅಲ್ಲಿಯೂ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜೊತೆಗೆ 66 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 12 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಾಲ್ಕು ತಾಲ್ಲೂಕು ಆಸ್ಪತ್ರೆ, ಆರು ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಒಂದು ಉಪ ಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತಿತ್ತು. ಮಂಗಳವಾರದಿಂದ ಪ್ರತಿ ಆರೋಗ್ಯ ಕೇಂದ್ರದ ಎರಡು ಉಪ ಕೇಂದ್ರಗಳಲ್ಲಿ ಲಸಿಕೆ ನೀಡುವ ಮೂಲಕ 200 ಉಪ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.

8 ಸಾವಿರ ಉದ್ಯೋಗಿಗಳನ್ನು ಹೊಂದಿರುವ ಎಂಆರ್‌ಪಿಎಲ್‌ನಲ್ಲಿ ಶೇ 50 ರಷ್ಟು ನೌಕರರು 45 ವರ್ಷ ಮೇಲಿನವರಾಗಿದ್ದಾರೆ. ಕೆಐಒಸಿಎಲ್‌ನಲ್ಲಿ ಮೂರು ದಿನಗಳಲ್ಲಿ 300 ಉದ್ಯೋಗಿಗಳಿಗೆ ಲಸಿಕೆ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಬಿಎಎಸ್‌ಎಫ್‌, ಬ್ಯಾಂಕ್‌ಗಳು, ಕಾಲೇಜುಗಳನ್ನು ಸಂಪರ್ಕಿಸಿ, ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಗತ್ಯ ಪ್ರಮಾಣದ ಲಸಿಕೆ ಲಭ್ಯ

ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳು ಅಗತ್ಯ ಪ್ರಮಾಣದಷ್ಟು ಲಭ್ಯವಾಗಿವೆ ಎಂದು ಡಾ.ರಾಜೇಶ್‌ ತಿಳಿಸಿದ್ದಾರೆ.

ಸದ್ಯಕ್ಕೆ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ 20 ಸಾವಿರ ಡೋಸ್ ಲಸಿಕೆ ಲಭ್ಯವಿದ್ದು, ಮೂರು ದಿನಗಳಿಗೆ ಸಾಕಾಗುತ್ತದೆ. ಶುಕ್ರವಾರದ ವೇಳೆಗೆ ನವದೆಹಲಿಯಿಂದ ಮತ್ತಷ್ಟು ಲಸಿಕೆ ಜಿಲ್ಲೆಗೆ ಬರಲಿದೆ. 15 ದಿನಗಳಲ್ಲಿ ಸ್ಫುಟ್ನಿಕ್‌ ಲಸಿಕೆಯೂ ಲಭ್ಯವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಒಬ್ಬ ವ್ಯಕ್ತಿಗೆ ಒಂದು ಮತ್ತು ಎರಡನೇ ಡೋಸ್‌ನಲ್ಲಿ ಲಸಿಕೆಗಳು ಬೇರೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕಿರುವ ಡಾ.ರಾಜೇಶ್‌, ಮೊದಲ ಡೋಸ್‌ನಲ್ಲಿ ಕೋವ್ಯಾಕ್ಸಿನ್‌ ಪಡೆದ ವ್ಯಕ್ತಿಗೆ ಎರಡನೇ ಡೋಸ್‌ನಲ್ಲಿ ಕೋವಿಶೀಲ್ಡ್‌ ಲಸಿಕೆ ಹಾಕಲು ಸಾಧ್ಯವೇ ಇಲ್ಲ. ಆ್ಯಪ್‌ನಲ್ಲಿ ಲಸಿಕೆ ಪಡೆದವರ ಮಾಹಿತಿ ಲಭ್ಯವಾಗಿದ್ದು, ಇದರಿಂದ ಇಂತಹ ಪ್ರಮಾದ ಆಗುವ ಸಾಧ್ಯತೆಗಳು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು