‘ಶಿರವಸ್ತ್ರ ವಿವಾದ ಇತ್ಯರ್ಥಕ್ಕೆ ಜಿಲ್ಲಾಡಳಿತಕ್ಕೆ ಸೂಚನೆ’

7
ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ.ಖಾದರ್

‘ಶಿರವಸ್ತ್ರ ವಿವಾದ ಇತ್ಯರ್ಥಕ್ಕೆ ಜಿಲ್ಲಾಡಳಿತಕ್ಕೆ ಸೂಚನೆ’

Published:
Updated:

ಮಂಗಳೂರು: ‘ಸೇಂಟ್‌ ಆ್ಯಗ್ನೆಸ್‌ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸುವುದಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಲಾಗಿದೆ’ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವಾಗ ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದೊಂದು ಸೂಕ್ಷ್ಮ ವಿಷಯ. ಸಂಬಂಧಿಸಿದವರು ಕುಳಿತು ಪರಸ್ಪರ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಸೌಹಾರ್ದ ಕದಡದಂತೆ ವಿವಾದ ಇತ್ಯರ್ಥಪಡಿಸುವ ಹೊಣೆಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ’ ಎಂದರು.

ಸೇಂಟ್‌ ಆ್ಯಗ್ನೆಸ್‌ ರಾಜ್ಯ, ರಾಷ್ಟ್ರ ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಶಿಕ್ಷಣ ಸಂಸ್ಥೆ. ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡಿರುವ ಹಿರಿಮೆ ಹೊಂದಿದೆ. ಇಂತಹ ಸಂಸ್ಥೆಗೆ ಕಳಂಕ ಬಾರದ ರೀತಿಯಲ್ಲಿ ಪ್ರಕರಣ ಮುಕ್ತಾಯ ಆಗಬೇಕು. ರಾಜಕೀಯ ಅಥವಾ ಇತರೆ ಉದ್ದೇಶದಿಂದ ಸಂಸ್ಥೆಯ ವಿರುದ್ಧ ಆರೋಪ ಹೊರಿಸುವುದು ಸಲ್ಲ. ಶಿಕ್ಷಣ ಇಲಾಖೆ ಮತ್ತು ಆ ಸಂಸ್ಥೆಯ ನಿಯಮಗಳನ್ನು ಪರಿಶೀಲಿಸಿದ ಬಳಿಕವೇ ಜಿಲ್ಲಾಡಳಿತ ನಿರ್ಧಾರಕ್ಕೆ ಬರಬೇಕು ಎಂದು ಹೇಳಿದರು.

‘ನಾನು ಒಬ್ಬ ರಾಜಕಾರಣಿ. ಯಾವುದೇ ರಾಜಕಾರಣಿ ಅಥವಾ ರಾಜಕೀಯ ಪಕ್ಷ, ಸಂಘಟನೆಗಳು ಇಂತಹ ವಿಚಾರದಲ್ಲಿ ಹಸ್ತಕ್ಷೇಪ ಮಾಡಕೂಡದು. ಅದೇ ಕಾರಣಕ್ಕಾಗಿ ನಾನು ನೇರವಾಗಿ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಶಿಕ್ಷಣ ಸಂಸ್ಥೆಯ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಒಂದೆಡೆ ಸೇರಿ ಚರ್ಚಿಸಿದರೆ ಪರಿಹಾರ ಸಿಗುತ್ತದೆ. ಇದಕ್ಕೆ ಹೊರಗಿನವರ ಪ್ರವೇಶ ಅಗತ್ಯವಿಲ್ಲ’ ಎಂದರು.

ಬೆದರಿಸಿದರೆ ಕಠಿಣ ಕ್ರಮ:

ವಿವಾದದಿಂದ ದೂರ ಉಳಿದ ವಿದ್ಯಾರ್ಥಿನಿಯೊಬ್ಬರಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಯಾರೇ ಬೆದರಿಕೆ ಹಾಕಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂತಹ ಪ್ರಯತ್ನಗಳು ನಡೆದರೆ ಸಂಬಂಧಿಸಿದವರು ತಕ್ಷಣವೇ ಪೊಲೀಸರಿಗೆ ದೂರು ನೀಡಬೇಕು’ ಎಂದು ತಿಳಿಸಿದರು.  ಸಾಮಾಜಿಕ ಮಾಧ್ಯಮಗಳಲ್ಲಿ ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿಗಳನ್ನು ಅವಹೇಳನ ಮಾಡುವವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಪೊಲೀಸರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !