ಕೆಎಂಸಿ ವಿರುದ್ಧ ವರದಿಗೆ ಸೂಚನೆ

7
ಒಪ್ಪಂದದ ಷರತ್ತುಗಳನ್ನು ಪಾಲಿಸದ ಆರೋಪ

ಕೆಎಂಸಿ ವಿರುದ್ಧ ವರದಿಗೆ ಸೂಚನೆ

Published:
Updated:

ಮಂಗಳೂರು: ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳ ತರಬೇತಿಗೆ 33 ವರ್ಷಗಳ ಕಾಲ ಬಳಸಿಕೊಳ್ಳುವ ಗುತ್ತಿಗೆ ಒಪ್ಪಂದದ ಷರತ್ತಿನಂತೆ ಆಸ್ಪತ್ರೆಗೆ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ ಕಟ್ಟಡ ನಿರ್ಮಿಸಿ ಕೊಡಲು ವಿಳಂಬ ಮಾಡುತ್ತಿರುವ ಕೆಎಂಸಿ ಮಂಗಳೂರು ವೈದ್ಯಕೀಯ ಕಾಲೇಜಿನ ವಿರುದ್ಧ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ವೆನ್ಲಾಕ್‌ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ ಶನಿವಾರ ನಡೆಯಿತು. ಕೆಎಂಸಿ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯು ಒಪ್ಪಂದದ ಅನುಸಾರ ₹ 80 ಕೋಟಿ ವೆಚ್ಚದ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ ಕಟ್ಟಡ ನಿರ್ಮಾಣಕ್ಕೆ ಯಾವುದೇ ಪ್ರಕ್ರಿಯೆ ಆರಂಭಿಸಿದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಆಸ್ಪತ್ರೆಯನ್ನು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬಳಸಿಕೊಳ್ಳುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿ ಹಲವು ತಿಂಗಳು ಕಳೆದಿದೆ. ಆದರೆ, ಒಪ್ಪಂದದಂತೆ ಕಟ್ಟಡ ನಿರ್ಮಿಸಿಕೊಡಲು ಕಾಲೇಜಿನ ಆಡಳಿತ ಮಂಡಳಿ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೂ ಕಾಲೇಜು ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಎಲ್ಲ ವಿಷಯಗಳ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ವರದಿ ಸಲ್ಲಿಸಿ, ವಾಸ್ತವ ಸ್ಥಿತಿಯನ್ನು ಗಮನಕ್ಕೆ ತನ್ನಿ’ ಎಂದು ವೆನ್ಲಾಕ್‌ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ವೆನ್ಲಾಕ್‌ ಆಸ್ಪತ್ರೆಗೆ ದೊಡ್ಡ ಮೊತ್ತದ ಅನುದಾನ ನೀಡಲು ಹಲವು ಖಾಸಗಿ ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸಿವೆ. ಆಸ್ಪತ್ರೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳನ್ನು ಗುತ್ತಗೆ ಆಧಾರದಲ್ಲಿ ಭರ್ತಿ ಮಾಡಲು ತಕ್ಷಣವೇ ಪ್ರಕ್ರಿಯೆ ಆರಂಭಿಸಬೇಕು ಎಂದು ಆಸ್ಪತ್ರೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಒತ್ತುವರಿ ತೆರವು:  ‘ಅತ್ತಾವರ ಗ್ರಾಮದ ವ್ಯಾಪ್ತಿಯಲ್ಲಿರುವ ವೆನ್ಲಾಕ್‌ ಆಸ್ಪತ್ರೆಯ ಒಡೆತನದ ಜಮೀನನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿದೆ. ಒತ್ತುವರಿ ತೆರವಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ಜಮೀನಿನ ಗಡಿಗಳನ್ನು ಗುರುತಿಸಿ, ಆಸ್ತಿಯ ಸುತ್ತಲೂ ತಡೆಗೋಡೆ ನಿರ್ಮಿಸಬೇಕು’ ಎಂದು ಆದೇಶಿಸಿದರು.

ಹಂಪನಕಟ್ಟೆಯಿಂದ ವೆನ್ಲಾಕ್‌ ಆಸ್ಪತ್ರೆ ಆವರಣದ ಮಾರ್ಗವಾಗಿ ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಸಭೆಯ ಮುಂದೆ ಬಂತು. ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್‌, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಲೇಡಿ ಗೋಷನ್‌ ಆಸ್ಪತ್ರೆ ಅಧೀಕ್ಷಕಿ ಡಾ.ಸವಿತಾ, ಡಾ.ಸಿಕಂದರ್ ಪಾಶಾ ಹಾಗೂ ಕೆಎಂಸಿ ವೈದ್ಯಕೀಯ ಕಾಲೇಜಿನ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !