ಗುರುವಾರ , ಅಕ್ಟೋಬರ್ 21, 2021
21 °C
ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆ ಸಭೆ

ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತನ್ನಿ: ಎಸ್‌ಪಿ ಋಷಿಕೇಶ್‌ ಸೋನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಯಾವುದೇ ಸಮಸ್ಯೆಗಳು ಎದುರಾದಲ್ಲಿ ಕೂಡಲೇ ನನ್ನ ಗಮನಕ್ಕೆ ತನ್ನಿ. ಸೂಕ್ತವಾದ ಪರಿಹಾರ ಕಲ್ಪಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಸೋನಾವಣೆ ಹೇಳಿದರು.

ನಗರದ ಜಿಲ್ಲಾ ಪೊಲೀಸ್‌ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಪರಿಶಿಷ್ಟ ವರ್ಗದ ಮುಖಂಡರ ದೂರಿಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.

ಪ್ರಕರಣಗಳ ದೂರು ನೀಡಲು ಹೋದಾಗ ಪೊಲೀಸ್ ಠಾಣೆಗಳಲ್ಲಿ ಕೆಲವೊಮ್ಮೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕೆಲ ಠಾಣೆಗಳಲ್ಲಿ ದೂರು ನೀಡಲು ಹೋದಾಗ ಅಗೌರವ ತೋರಿಸಲಾಗುತ್ತದೆ ಎಂದು ಮುಖಂಡ ಸದಾಶಿವ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ‘ಸದ್ಯ ಎಲ್ಲ ಠಾಣೆಗಳಲ್ಲೂ ಸಿಸಿಟಿವಿ ಕ್ಯಾಮೆರಾ, ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸಮರ್ಪಕವಾಗಿದೆ. ಹಾಗಿರುವಾಗ ಯಾರೇ ದೂರು ನೀಡಲು ಬಂದರೂ ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಅದಾಗ್ಯೂ ಸಮಸ್ಯೆಯಾದಲ್ಲಿ ನನಗೆ ಅಥವಾ ಎಎಸ್ಪಿಗೆ ಕರೆ ಮಾಡಿದರೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದರು.

ಯಾವುದೇ ಘಟನೆ ನಡೆದಾಗ ದೂರು ನೀಡಿದರೆ ಪ್ರಕರಣ ದಾಖಲಿಸುವಂತೆ ಎಲ್ಲ ಠಾಣೆಗಳಿಗೂ ಸೂಚನೆ ನೀಡಲಾಗಿದೆ. ಆದರೆ ದೂರು ದಾಖಲಾದ ಮಾತ್ರಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರದ ಹೊರತಾಗಿ ಬಂಧನ ಮಾಡಲು ಸಾಧ್ಯವಿಲ್ಲ ಎಂದು ಋಷಿಕೇಶ್ ಸೋನಾವಣೆ ಸ್ಪಷ್ಟಪಡಿಸಿದರು.

ಪೊಲೀಸ್ ಬೀಟ್ ವೃದ್ಧಿ:

ದಲಿತ ಕಾಲೊನಿಗಳಿಗೆ ಪೊಲೀಸರ ಭೇಟಿ ಅಪರೂಪವಾಗುತ್ತಿದೆ ಎಂಬ ದೂರಿಗೆ ಸ್ಪಂದಿಸಿದ ಎಸ್ಪಿ, ಈ ಬಗ್ಗೆ ಕ್ರಮ ವಹಿಸಲಾಗುವುದು. ಬೀಟ್ ವ್ಯವಸ್ಥೆಯನ್ನು ಕೂಡಾ ಸಮರ್ಪಕವಾಗಿ ನಡೆಸಲು ಸೂಚನೆ ನೀಡಲಾಗುವುದು ಎಂದರು.

ಕೊಪ್ಪಳದಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತ ಕುಟುಂಬದ ಮಗುವಿಗೆ ದಂಡ ವಿಧಿಸಿದ ಪ್ರಕರಣವನ್ನು ಖಂಡಿಸಿದ ಮುಖಂಡರು, ಈ ಪ್ರಕರಣ ಮರುಕಳಿಸದಂತೆ ಕ್ರಮ ವಹಿಸಬೇಕು ಎಂದರು. ಧಾರ್ಮಿಕ ಕ್ಷೇತ್ರಗಳಲ್ಲಿ ಪರಿಶಿಷ್ಟರ ಅವಹೇಳನ, ನಿಂದಿಸುವ ಪ್ರಕರಣಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

‘ನಮ್ಮಲ್ಲಿ ಅಂತಹ ಪ್ರಕರಣಗಳು ನಡೆಯುತ್ತಿಲ್ಲ. ಇಂತಹ ವಿಷಯದಲ್ಲಿ ಕ್ರಮ ಕೈಗೊಳ್ಳುವಲ್ಲಿ ಯಾವುದೇ ರಾಜೀ ಇಲ್ಲ’ ಎಂದು ಋಷಿಕೇಶ್ ಸೊನಾವಣೆ ಭರವಸೆ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಗುಣಹರೆ, ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು