ಶನಿವಾರ, ಜುಲೈ 2, 2022
25 °C
ನರಸಿಂಹರಾಜಪುರದಲ್ಲಿ ಆರೋಗ್ಯ ಮೇಳ ಉದ್ಘಾಟಿಸಿದ ಶಾಸಕ ರಾಜೇಗೌಡ

ಮೂರು ಆಸ್ಪತ್ರೆಗಳಲ್ಲೂ ಆಮ್ಲಜನಕ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ‘ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಶೃಂಗೇರಿಯ ಘಟಕವನ್ನು ಉದ್ಘಾಟಿಸಲಾಗಿದ್ದು, ಕೊಪ್ಪ, ನರಸಿಂಹರಾಜಪುರದಲ್ಲಿ ಶೀಘ್ರ ದಲ್ಲೇ ಉದ್ಘಾಟಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಇಲ್ಲಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ನಡೆದ ಉಚಿತ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ಆಸ್ಪತ್ರೆಯಲ್ಲಿ ಐಸಿಯು ಸೌಲಭ್ಯಯುಳ್ಳ 20 ಕೊಠಡಿಯನ್ನು ಸಿದ್ಧ ಪಡಿಸಲಾಗಿದೆ. ಮಕ್ಕಳಿಗಾಗಿ 5 ಐಸಿಯು ಕೊಠಡಿ ಸಿದ್ಧವಾಗಿದೆ ಎಂದರು.

ನಾನು ಶಾಸಕನಾದ ಮೇಲೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡಲಾಗಿದೆ. ಮನುಷ್ಯನಿಗೆ ಆರೋಗ್ಯವೇ ಭಾಗ್ಯ ವಾಗಿದೆ. ಎಷ್ಟು ಹಣ ಸಂಪಾದನೆ ಮಾಡಿದರೂ ಆರೋಗ್ಯ ಇಲ್ಲದಿದ್ದರೆ ಪ್ರಯೋಜನವಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಆರೋಗ್ಯ ಮೇಳ ನಡೆಯುತ್ತಿದ್ದು, 3 ಸಾವಿರ ಮಂದಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಆರೋಗ್ಯ ಮೇಳಕ್ಕಾಗಿ ₹ 2 ಲಕ್ಷ ಅನುದಾನ ಮೀಸಲಿಡಲಾಗಿದೆ. ಆರೋಗ್ಯ ಮೇಳದಲ್ಲಿ ಉಚಿತ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ಕೋವಿಡ್ ಬಂದ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹಾಗೂ ಇತರೆ ಇಲಾಖೆಯವರು, ಜನಪ್ರತಿನಿಧಿಗಳು ಎಲ್ಲರೂ ಸೇರಿ ಶಕ್ತಿಮೀರಿ ಕೆಲಸ ಮಾಡಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಂ.ಉಮೇಶ್, ‘ಜಿಲ್ಲೆಯಲ್ಲಿ ಕಳೆದ 3-4 ದಿನದಿಂದ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ನಡೆಯುತ್ತಿದೆ. ಪ್ರತಿ ತಾಲೂಕಿಗೆ ತಜ್ಞ ವೈದ್ಯರನ್ನು ಕರೆಸಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯ ಕಾರ್ಡು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ’ ಎಂದರು.

ಜಿಲ್ಲೆಯಲ್ಲಿ ಆಯುಷ್ಮಾನ್‍ ಕಾರ್ಡಿಗಾಗಿ 11.34 ಲಕ್ಷ ಜನ ನೋಂದಣಿ ಮಾಡಿಸಿಕೊಂಡಿದ್ದು, ಇವರಲ್ಲಿ 5.50 ಲಕ್ಷ ಕಾಡ್‌ ವಿತರಿಸಲಾಗಿದೆ. ಮುಂದಿನ 6 ತಿಂಗಳಲ್ಲಿ ಎಲ್ಲರಿಗೂ ಕಾರ್ಡು ವಿತರಿಸುವ ಗುರಿ ಹೊಂದಲಾಗಿದೆ. ರಕ್ತದೊತ್ತಡ, ಮಧುಮೇಹ ಹಾಗೂ ಕ್ಯಾನ್ಸರ್‌ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೆ ಎನ್.ಸಿ.ಡಿ. ಘಟಕದಿಂದ ಮನೆಗೆ ಔಷಧಿ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತ ಸರ್ಕಾರದ ಆರೋಗ್ಯಕ್ಷೇಮ ಕೇಂದ್ರದಲ್ಲಿ ಯೋಗ ಶಿಕ್ಷಕರನ್ನು ನೇಮಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ವಹಿಸಿದ್ದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಸದಸ್ಯರಾದ ಸುರಯ್ಯ ಬಾನು, ಮುನಾವರ್ ಪಾಷಾ, ತಹಶೀಲ್ದಾರ್ ಸಿ.ಜಿ.ಗೀತಾ, ಇ.ಒ. ನಯನಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೀರಪ್ರಸಾದ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಬಿಇಒ ಡಿ.ದುರುಗಪ್ಪ, ಪೊಲೀಸ್ ಇನ್‌ಸ್ಪೆಕ್ಟರ್ ವಸಂತ ಭಾಗವತ್, ಸಿಡಿಪಿಒ ನಿರಂಜನ, ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಇದ್ದರು. 3 ಸಾವಿರಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸಿಂಹನಗದ್ದೆ ಬಸ್ತಿಮಠದಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.

‘ಮಾಸ್ಕ್ ಮರೆತ ಅಧಿಕಾರಿಗಳು, ಜನಪ್ರತಿನಿಧಿಗಳು’

4ನೇ ಕೋವಿಡ್ ಅಲೆ ತಡೆಗಟ್ಟಲು ರಾಜ್ಯ ಸರ್ಕಾರ ಇದೇ 26ರಿಂದ ಮಾಸ್ಕ್ ಧರಿಸುವುದು ಮತ್ತು 2 ಅಡಿ ಅಂತರ ಕಾಪಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಟಿಸಿತ್ತು. ಆದರೆ, ಆರೋಗ್ಯ ಮೇಳದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳು, ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು, ಶಾಸಕರು ಸೇರಿದಂತೆ ಎಲ್ಲಾ ಹಂತದ ಜನಪ್ರತಿನಿಧಿಗಳು ಮಾಸ್ಕ್ ಧರಿಸುವುದನ್ನು ಹಾಗೂ ಅಂತರ ಕಾಪಾಡುವುದನ್ನು ಮರೆತಿದ್ದರು. ಸಾರ್ವಜನಿಕರು ಸಹ ಮಾಸ್ಕ್ ಧರಿಸಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು